ಮಾರುಕಟ್ಟೆ ತಾತ್ಕಾಲಿಕ ಸ್ಥಳಾಂತರ

ಬೆಂಗಳೂರು, ಏ.೨೧- ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ತೀವ್ರಗೊಂಡಿರುವ ಕಾರಣ ನಗರ ವ್ಯಾಪ್ತಿಯ ಬೃಹತ್ ಮಾರುಕಟ್ಟೆಗಳನ್ನು ತಾತ್ಕಾಲಿಕ ಸ್ಥಳಾಂತರ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬಿಡುಗಡೆಗೊಳಿಸಿರುವ ಮಾರ್ಗಸೂಚಿ ಅನ್ವಯ ಇದೇ ೨೩ರಿಂದ ಮಾರುಕಟ್ಟೆಗಳನ್ನು ಸ್ಥಳಾಂತರ ಮಾಡಲು ಚಿಂತಿಸಲಾಗಿದೆ.ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಹೇಳಿದರು.
ಕಳೆದ ವರ್ಷದ ಮಾದರಿಯಲ್ಲಿಯೇ ಮಾರುಕಟ್ಟೆ ಸ್ಥಳಾಂತರ ಆಗಲಿದ್ದು, ಇದರಿಂದ ಜನಸಂದಣಿ ಕಡಿಮೆ ಮಾಡಬಹುದಾಗಿದೆ. ಜೊತೆಗೆ, ಮಾರ್ಗಸೂಚಿಗಳ ಪಾಲನೆಯೂ ಆಗಲಿದೆ ಎಂದ ಅವರು, ವ್ಯಾಪಾರಿಗಳ ಮೇಲೆ ಪರಿಣಾಮ ಬೀರದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಿದ್ಧತೆ: ರಾಜ್ಯ ಸರ್ಕಾರ ರಾತ್ರಿ ಕರ್ಫ್ಯೂ ಅವಧಿಯನ್ನು ವಿಸ್ತರಣೆ ಮಾಡಿದೆ.ಈ ಸಂಬಂಧ ಜಾರಿಗೊಳಿಸುವ ನಿಟ್ಟಿನಲ್ಲಿ ಇಂದು ಸಂಜೆ ವಲಯವಾರು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು.ಜೊತೆಗೆ, ಹೋಟೆಲ್,ಸಾರ್ವಜನಿಕ ಪ್ರದೇಶಗಳ ಮೇಲೂ ಮಾರ್ಗಸೂಚಿ ಉಲ್ಲಂಘನೆ ಆಗದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಚಿತಾಗಾರ: ಸಾವಿನ ಪ್ರಮಾಣ ಬೆನ್ನಲ್ಲೇ ಚಿತಾಗಾರಗಳಲ್ಲಿ ಹೆಚ್ಚಾಗಿ ಮೃತದೇಹಗಳು ಬರುತ್ತಿವೆ ಎನ್ನುವ ಮಾಹಿತಿ ಇದ್ದು, ಈ ಸಂಬಂಧ ಯಾರಿಗೂ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು ಎಂದು ಆಯುಕ್ತರು ಹೇಳಿದರು.

ಐಸಿಯು ಬೆಡ್ ಇಲ್ಲ: ಆಸ್ಪತ್ರೆಗಳಲ್ಲಿ ಸಾಮಾನ್ಯ ವಾರ್ಡ್ ಗಳಲ್ಲಿ ಯಾವುದೇ ಕೊರತೆ ಇಲ್ಲ.ಆದರೆ, ಐಸಿಯು ಬೆಡ್ ಗಳ ಕೊರತೆ ಇದೆ.ಅಲ್ಲದೆ, ಮನೆಯಲ್ಲಿಯೇ ಐಸೋಲೆಷನ್ ನಲ್ಲಿ ಇರುವವರು ಸಹ ಆಸ್ಪತ್ರೆಗೆ ದಾಖಲಾಗಿರುವುದೇ ಇದಕ್ಕೆ ಕಾರಣ ಎಂದು ತಿಳಿಸಿದರು.
ಅಲ್ಲದೆ, ಸೋಂಕು ಹೆಚ್ಚಳವಾಗುತ್ತಿ ರುವುದರಿಂದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿಯೇ ನಾವು ಖಾಸಗಿ ಆಸ್ಪತ್ರೆಗಳು ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಶೇ.೫೦ರಷ್ಟು ಹಾಸಿಗೆ ಮೀಸಲಿಡುವಂತೆ ಸೂಚಿಸಿದ್ದೆವು. ಈಗಾಗಲೇ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ಗಳನ್ನು ನೀಡಲಾಗಿದ್ದು, ಸೋಂಕಿತರಿಗೆ ಶೇ.೫೦ರಷ್ಟು ಹಾಸಿಗೆ ಮೀಸಲಿಡಲೇ ಹೋದಲ್ಲಿ, ಆ ಆಸ್ಪತ್ರೆಗಳ ಒಪಿಡಿ (ಹೊರರೋಗಿಗಳ ವಿಭಾಗ)ಗಳನ್ನು ಬಂದ್ ಮಾಡಲಾಗುತ್ತದೆ ಎಂದು ಎಚ್ಚರಿಸಲಾಗಿದೆ ಎಂದರು.