ಮಾರುಕಟ್ಟೆಯಿಂದ ತಳ್ಳುವ ಗಾಡಿ ಖಾಲಿ ಮಾಡಿಸಿದ ಆಯುಕ್ತ

ದಾವಣಗೆರೆ,ಮೇ.20: ದಿನದಿಂದ ದಿನಕ್ಕೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ಮಾರುಕಟ್ಟೆಯಲ್ಲಿ ತಳ್ಳುವ ಗಾಡಿಗಳನ್ನು ನಿಲ್ಲಿಸಿಕೊಂಡು ವ್ಯಪಾರ ಮಾಡುತ್ತಿದ್ದ ತಳ್ಳುವ ಗಾಡಿ ವ್ಯಾಪಾರಸ್ಥರನ್ನು ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ನೇತೃತ್ವದ ಅಧಿಕಾರಿಗಳ ತಂಡ ಮಾರುಕಟ್ಟೆಯಿಂದ ಹೊರ ಹಾಕುವಲ್ಲಿ ಯಶಸ್ವಿಯಾಯಿತು.ಎರಡನೇ ದಿನವೂ ಬೀದಿಗೆ ಇಳಿದ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ನೇತೃತ್ವದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಮಾರುಕಟ್ಟೆಯಲ್ಲಿ ತಳ್ಳುವ ಗಾಡಿಗಳನ್ನು ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರನ್ನು ಅಲ್ಲಿಂದ ಖಾಲಿ ಮಾಡಿಸಿ, ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣು ಖರೀದಿಗೆ ಮುಗಿ ಬೀಳುತ್ತಿದ್ದ ಜನ ಸಂದಣಿಯನ್ನು ತಡೆಯಿತು.ಈ ವೇಳೆ ಮಾತನಾಡಿದ ಆಯುಕ್ತ ವಿಶ್ವನಾಥ ಮುದಜ್ಜಿ, ನಾವು ನಿಮಗೆ ಅನುಮತಿ ನೀಡಬೇಕಾದರೆ, ಗ್ರಾಹಕರ ಮನೆ ಬಾಗಿಲಿಗೆ ತಳ್ಳುವ ಗಾಡಿಯ ಮೂಲಕ ತರಕಾರಿ, ಹಣ್ಣು ಸೇರಿದಂತೆ ಇತರೆ ಅಗತ್ಯ ವಸ್ತುಗಳನ್ನು ತಲುಪಿಸಲು ಸೂಚಿಸಿದ್ದೇವು. ಆದರೆ, ನೀವು ಎಷ್ಟೋ ಹೇಳಿದರೂ ಮಾರುಕಟ್ಟೆಯಲ್ಲಿಯೇ ಗಾಡಿ ನಿಲ್ಲಿಸಿಕೊಂಡು ವ್ಯಾಪಾರ ನಡೆಸುತ್ತಿರುವುದು ಸರಿಯಲ್ಲ. ತಕ್ಷಣವೇ ಇಲ್ಲಿಂದ ಗಾಡಿ ತೆಗೆದುಕೊಂಡು ಬೀದಿ, ಬೀದಿಗೆ ಹೋಗಿ ವ್ಯಾಪಾರ ಮಾಡಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸುತ್ತಿದ್ದಂತೆ,ತಳ್ಳುವ ಗಾಡಿ ವ್ಯಾಪಾರಸ್ಥರು ಮಾರುಕಟ್ಟೆಯಿಂದ ಗಾಡಿಗಳನ್ನು ತಳ್ಳಿಕೊಂಡು ವಿವಿಧೆಡೆ ತೆರಳಿದರು. ಹೀಗಾಗಿ ಮಾರುಕಟ್ಟೆಗೆ ತರಕಾರಿ, ಹಣ್ಣು ಖರೀದಿಸಲು ಬಂದಿದ್ದ ಜನರು ಸಹ ಅನಿವಾರ್ಯವಾಗಿ ಮನೆಗಳತ್ತ ಹೊರಟರು.ಇನ್ನೂ ಹತ್ತು ಗಂಟೆ ಬಳಿಕವೂ ಅಂಗಡಿ ತೆರೆದು ಕೊಂಡು ವ್ಯಾಪಾರ ನಡೆಸುತ್ತಿದ್ದವವರ ಅಂಗಡಿ ಬಾಗಿಲು ಸಹ ಹಾಕಿಸಿದರು. ಕೆಲವರಿಗೆ ದಂಡ ಸಹ ವಿಧಿಸಲಾಯಿತು.ಕಾರ್ಯಾಚರಣೆಯಲ್ಲಿ ಪಾಲಿಕೆಯ ಆರೋಗ್ಯ ನಿರೀಕ್ಷಕರು, ಪೌರ ಕಾರ್ಮಿಕರು ಪಾಲ್ಗೊಂಡಿದ್ದರು.