ಮೆಕ್ಸಿಕೊ ಸಿಟಿ (ಮೆಕ್ಸಿಕೊ), ಜು.೧೧- ಮಧ್ಯ ಮೆಕ್ಸಿಕೋದ ಬಹುದೊಡ್ಡ ಸಗಟು ಮಾರುಕಟ್ಟೆಯಲ್ಲಿ ಸಂಭವಿಸಿದ ಶಂಕಿತ ಅಗ್ನಿ ದಾಳಿಯಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರುಕಟ್ಟೆಯಲ್ಲಿನ ವ್ಯಾಪಾರ ಸಂಘರ್ಷವೇ ದಾಳಿಗೆ ಕಾರಣ ಎನ್ನಲಾಗಿದೆ.
ಟೊಲುಕಾದಲ್ಲಿನ ಸಗಟು ಮಾರುಕಟ್ಟೆಯಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋದಲ್ಲಿ ಶಂಕಿತ ವ್ಯಕ್ತಿಗಳು ಅತ್ಯಂತ ಜ್ವಲನಶೀಲ ದ್ರವಗಳನ್ನು ಸುರಿಯುತ್ತಿರುವ ದೃಶ್ಯಗಳು ನೈಜತೆಯನ್ನು ಬಹಿರಂಗವಾಗಿದೆ. ಎಂಟು ಮಂದಿ ಘಟನಾ ಸ್ಥಳದಲ್ಲಿಯೇ ಮೃತಪಟ್ಟರೆ ಓರ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವ್ಯಾಪಾರಿಗಳ ನಡುವಿನ ಕಲಹದಿಂದಲೇ ಈ ದಾಳಿ ನಡೆಸಲಾಗಿದೆ ಎಂದು ರಾಜ್ಯ ಪ್ರಾಸಿಕ್ಯೂಟರ್ ಕಚೇರಿ ಶಂಕೆ ವ್ಯಕ್ತಪಡಿಸಿದೆ. ಮೂಲಗಳ ಪ್ರಕಾರ ಟೊಲುಕಾದ ಸೆಂಟ್ರಲ್ ಡಿ ಅಬಾಸ್ಟೋಸ್ ಸಗಟು ಮಾರುಕಟ್ಟೆಯು ಮೆಕ್ಸಿಕೋದಲ್ಲಿ ಎರಡನೇ ಅತಿ ದೊಡ್ಡ ವ್ಯಾಪಾರ ಕೇಂದ್ರವಾಗಿದ್ದು, ಸುಮಾರು ೨೬,೦೦೦ ಜನರು ಇಲ್ಲಿಗೆ ದೈನಂದಿನ ಅವಧಿಯಲ್ಲಿ ಆಗಮಿಸುತ್ತಾರೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಮಾರಾಟಗಾರರು ಮತ್ತು ಆವರಣದ ಮಾಲಕರ ನಡುವಿನ ವಿವಾದಗಳ ಪರಿಣಾಮವಾಗಿ ಘಟನೆ ಸಂಭವಿಸಿದೆ ಎಂದು ಟೊಲುಕಾ ಮೇಯರ್ ರೇಮುಂಡೋ ಮಾರ್ಟಿನೆಜ್ ಮಿಲೆನಿಯೊ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.