ಮಾರಣಾಂತಿಕ ಹಲ್ಲೆ ನಡೆಸಿ ವೃದ್ಧನ ಕೊಲೆ

ಬೆಂಗಳೂರು, ಸೆ.೧೦-ವೃದ್ಧರೊಬ್ಬರನ್ನು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವ ದುರ್ಘಟನೆ ಸರ್ಜಾಪುರ ಪೊಲೀಸ್ ಠಾಣಾ ಹಿಂಭಾಗದ ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿ ನಡೆದಿದೆ.
ರೇಣುಕಾ ಯಲ್ಲಮ್ಮ ಬಡಾವಣೆಯ ವೃದ್ಧ ಸೀತಪ್ಪ(೮೫) ಕೊಲೆಯಾದವರು, ಚಾಕು ಇರಿತ ಪ್ರಕರಣ ಸಂಬಂಧ ಜೈಲುವಾಸ ಅನುಭವಿಸಿ ಹೊರ ಬಂದಿದ್ದ ಪವನ್ ಎಂಬ ಪುಡಿ ರೌಡಿ ಸೀತಪ್ಪ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ.ಗಂಭೀರವಾಗಿ ಗಾಯಗೊಂಡ ಅವರು ಚಿಕಿತ್ಸೆ ಫಲಿಸದೆ ವೃದ್ಧ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆರೋಪಿ ಪವನ್ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಮೇಶ್ ಅವರ ಪುತ್ರ ಎಂದು ತಿಳಿದುಬಂದಿದೆ. ಇದೇ ಭಾಗದ ದೂರುದಾರ ಹೇಮಂತ್ ಎಂಬಾತನನ್ನು ಕರೆದಾಗ ಆತ ಬಾರದೆ ಇದ್ದ ಕಾರಣಕ್ಕೆ ಪವನ್ ತನ್ನ ಸಹಚರರಾದ ರೋಹಿತ್, ಸುಮನ್, ಯಶವಂತ್ ಮತ್ತು ಕಾರ್ತಿಕ್ ಜೊತೆಗೂಡಿ ಹೇಮಂತ್ ಮೇಲೆ ಕಳೆದ ಆ.೨೮ರ ರಾತ್ರಿ ಹಲ್ಲೆ ಮಾಡಿದ್ದ. ಇದಕ್ಕೆ ಹೇಮಂತ್ ಕುಟುಂಬ ಪ್ರತಿರೋಧ ಒಡ್ಡಲು ಬಂದಾಗ ವೃದ್ಧ ಸೀತಪ್ಪ(೮೫)ನ ಮೇಲೆರಗಿದ ಪವನ್ ತಂಡ ಮನಸೋ ಇಚ್ಛೆ ಹಲ್ಲೆ ಮಾಡಿದ್ದರು.ಈ ಕುರಿತಂತೆ ಗಾಯಗೊಂಡ ನೇತ್ರ, ಮನು ಮತ್ತು ನಂಜೇಶ(ಹೇಮಂತ್ ಮನೆಯವರು) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತೀವ್ರ ಗಾಯಗೊಂಡಿದ್ದ ಸೀತಪ್ಪ ಸಾವು ಬದುಕಿನ ನಡುವೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಹಲ್ಲೆ ಪ್ರಕರಣ ಇದೀಗ ಸೀತಪ್ಪ ಸಾವಿನೊಂದಿಗೆ ಕೊಲೆ ಪ್ರಕರಣಕ್ಕೆ ತಿರುಗಿದ್ದು, ತನಿಖೆ ಮುಂದುವರೆದಿದೆ.