ಮಾರಣಾಂತಿಕ ಹಲ್ಲೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ,ಸೆ.13:ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ನಿಡಗುಂದಾ ಹಾಗೂ ಜೋಗೂರಿನಲ್ಲಿ ಕ್ಷೌರಿಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿದ ಮೂವರು ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಮಂಗಳವಾರ ಅಖಿಲ ಕರ್ನಾಟಕ ಹಡಪದ (ಕ್ಷೌರಿಕ) ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿದರು.
ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ನಿಡಗುಂದಾ ಗ್ರಾಮದಲ್ಲಿ ಶಿವಪ್ಪ ತಂದೆ ಮಹಾನಂದಪ್ಪಾ ಹಡಪದ್ ಎಂಬ ಕ್ಷೌರಿಕನ ಮೇಲೆ ನಿಷೇಧಿತ ಶಬ್ದದಿಂದ ಬಳಸಿ ಜಾತಿ ನಿಂದನೆ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ ರಾಜು ನಿಷ್ಠಿ, ಭರತ್ ನಿಷ್ಠಿ ಮತ್ತು ಚಂದ್ರಶೇಖರ್ ನಿಷ್ಠಿ ಮತ್ತು ಜೋಗೂರ್ ಗ್ರಾಮದಲ್ಲಿ ಗುರುಪಾದ್ ತಂದೆ ಹುಲೆಪ್ಪ ಹಡಪದ್ ಎಂಬ ಬಡ ಕ್ಷೌರಿಕನ ಮೇಲೆ ಹಲ್ಲೆ ಹಾಗೂ ಜಾತಿ ನಿಂದನೆ ಮಾಡಿದ ಹಸನ್ ತಂದೆ ಕಾಸಿಮಸಾಬ್ ಅವರ ವಿರುದ್ಧ ಅಟ್ರಾಸಿಸಿ ಹಾಗೂ ಕೊಲೆ ಯತ್ನ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಲ್ಲೆಗೆ ಒಳಗಾದ ಕ್ಷೌರಿಕರು ಹಾಗೂ ಅವರ ಕುಟುಂಬಸ್ಥರಿಗೆ ಸೂಕ್ತ ರಕ್ಷಣೆ ಕೊಡುವಂತೆ ಆಗ್ರಹಿಸಿದ ಅವರು, ಇಂತಹ ಪ್ರಕರಣಗಳು ಮರುಕಳಿಸದ ರೀತಿಯಲ್ಲಿ ಜಾತಿ ನಿಂದನೆ ಅಡಿ ಅಟ್ರಾಸಿಟಿ ಪ್ರಕರಣ ದಾಖಲು ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಶಹಾಬಾದ್‍ನ ಬಾಲ ಬ್ರಹ್ಮಚಾರಿ ರಾಜಶಿವಯೋಗಿಗಳ ಸಾನಿಧ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಈರಣ್ಣ ಹಡಪದ್, ಸಂಗಮೇಶ್ ನೀಲೂರ್, ಬಸವರಾಜ್ ಸೂಗೂರ್(ಎನ್), ಶಿವಾನಂದ್ ಬಬಲಾದ್, ಅಪ್ಪಾರಾವ್ ಬಟಗೇರಾ, ಮಲ್ಲಿಕಾರ್ಜುನ್ ಸಾವಳಗಿ, ಸುನೀಲ್ ಭಾಗ ಹಿಪ್ಪರಗಾ, ಮಹಾಂತೇಶ್ ಇಸ್ಲಾಂಪೂರೆ ಮುಂತಾದವರು ಪಾಲ್ಗೊಂಡಿದ್ದರು.