ಮಾರಕಾಸ್ತ್ರ ಹೊಂದಿ ದ್ವಿಚಕ್ರವಾಹನಗಳ ಮೇಲೆ ಸಂಚರಿಸುತ್ತಿದ್ದ ಇಬ್ಬರು ಕಳ್ಳರ ಸೆರೆ: ಕಳ್ಳತನವಾದ ಕಾರು ಮಧ್ಯಪ್ರದೇಶದಲ್ಲಿ ಪತ್ತೆ

ಕಲಬುರಗಿ:ಫೆ.24: ನಗರದಲ್ಲಿ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಅನುಮಾನಸ್ಪದ ರೀತಿಯಲ್ಲಿ ದ್ವಿಚಕ್ರವಾಹನದ ಮೇಲೆ ಮಾರಕಾಸ್ತ್ರ ಹೊಂದಿ ಸಂಚರಿಸುತ್ತಿದ್ದ ಇಬ್ಬರು ಮನೆಗಳ್ಳರನ್ನು ಬಂಧಿಸಿ, ಅವರಿಂದ ನಗ, ನಾಣ್ಯ ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನಿಬ್ಬರು ಪರಾರಿಯಾಗಿದ್ದು, ಅವರ ಪತ್ತೆ ಕಾರ್ಯಾಚರಣೆ ಮುಂದುವರೆದಿದೆ. ಅದೇ ರೀತಿ ಕಳ್ಳತನವಾದ ಕಾರು ಮಧ್ಯಪ್ರದೇಶ್ ರಾಜ್ಯದಲ್ಲಿ ಪತ್ತೆಯಾಗಿದ್ದು, ಕಳ್ಳರ ಸೆರೆಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ನಗರ ಪೋಲಿಸ್ ಆಯುಕ್ತ ಚೇತನ್ ಆರ್., ಅವರು ಹೇಳಿದರು.
ತಮ್ಮ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುಮಾನಾಸ್ಪದ ರೀತಿಯಲ್ಲಿ ಮಾರಕಾಸ್ತ್ರ ಹೊಂದಿ ದ್ವಿಚಕ್ರವಾಹನಗಳ ಮೇಲೆ ಸಂಚರಿಸುತ್ತಿದ್ದ ವ್ಯಕ್ತಿಗಳ ಮೇಲೆ ಪೋಲಿಸರು ಕಾರ್ಯಾಚರಣೆ ಮಾಡಿ ಇಬ್ಬರನ್ನು ಬಂಧಿಸಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಬಂಧಿತ ಆರೋಪಿಗಳು ಮನೆಗಳ್ಳತನ ಮಾಡಿರುವ ಕುರಿತು ವಿಚಾರಣೆಯ ವೇಳೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದರು.
ನಗರದ ಕೋಟನೂರ್(ಡಿ) ಹತ್ತಿರ ನಾಲ್ವರು ಎರಡು ದ್ವಿಚಕ್ರವಾಹನಗಳ ಮೇಲೆ ಅನುಮಾನಾಸ್ಪದ ರೀತಿಯಲ್ಲಿ ಹೋಗುತ್ತಿದ್ದರು. ಅವರನ್ನು ಪೋಲಿಸರು ಬೆನ್ನತ್ತಿದಾಗ ಇಬ್ಬರು ಸೆರೆ ಸಿಕ್ಕರು. ಇಬ್ಬರು ಓಡಿ ಹೋದರು. ಸೆರೆ ಸಿಕ್ಕ ಇಬ್ಬರ ಹತ್ತಿರ ಒಂದು ಕಬ್ಬಿಣದ ರಾಡ್, ದ್ವಿಚಕ್ರವಾಹನಗಳನ್ನು ಪೋಲಿಸರು ವಶಕ್ಕೆ ತೆಗೆದುಕೊಂಡರು ಎಂದು ಅವರು ಹೇಳಿದರು.
ಬಂಧಿತರನ್ನು ಪೋಲಿಸ್ ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ಅವರು ತಮ್ಮ ಹೆಸರನ್ನು ಆಳಂದ್ ತಾಲ್ಲೂಕಿನ ಕಮಸರ್ ನಾಯಕ್ ತಾಂಡಾದ ಕೂಲಿ ಕೆಲಸಗಾರರಾದ ಅಗಲು ತಂದೆ ಬಗ್ಗು ಚವ್ಹಾಣ್ (50), ಸೀತಾರಾಮ್ ಬಗ್ಗು ಚವ್ಹಾಣ್ (26), ಓಡಿ ಹೋದವರನ್ನು ಗುಂತಕಲ್‍ನ ಹಾನಸಿಂಗ್ ಅಲಿಯಾಸ್ ಹನಿಸಿಂಗ್ ಪವಾರ್, ಕುಮಸಿ ನಾಯಕ್ ತಾಂಡಾದ ಸೋಮನಾಥ್ ತಂದೆ ಬಗ್ಗು ಚವ್ಹಾಣ್ ಎಂದು ಬಹಿರಂಗಪಡಿಸಿದರು ಎಂದು ಅವರು ತಿಳಿಸಿದರು.
ನಾಲ್ವರೂ ಆರೋಪಿಗಳು ತಮ್ಮೂರಿನಿಂದ ದ್ವಿಚಕ್ರವಾಹನಗಳ ಮೇಲೆ ಬಂದು ನಗರದ ಸಾಯಿರಾಮ ನಗರ, ನೃಪತುಂಗ ಕಾಲೋನಿ, ಹುಂಡೇಕಾರ್ ಕಾಲೋನಿ, ಭೋಪಾಲ್ ತೆಗನೂರ್ ಗ್ರಾಮದಲ್ಲಿ ಕಳ್ಳತನ ಮಾಡಿದ ಕುರಿತು ವಿಚಾರಣೆಯ ವೇಳೆ ಒಪ್ಪಿಕೊಂಡರು. ಒಟ್ಟು ಆರು ಪ್ರಕರಣಗಳಲ್ಲಿ 4,30,000ರೂ.ಗಳ ಮೌಲ್ಯದ 72 ಗ್ರಾಮ್ ತೂಕದ ಚಿನ್ನಾಭರಣಗಳು, 18,000ರೂ.ಗಳ ಮೌಲ್ಯದ 265 ಗ್ರಾಮ್ ತೂಕದ ಬೆಳ್ಳಿಯ ಆಭರಣಗಳು, 80,000ರೂ.ಗಳ ಮೌಲ್ಯದ ಎರಡು ದ್ವಿಚಕ್ರವಾಹನಗಳು ಸೇರಿ ಒಟ್ಟು 5,28000ರೂ.ಗಳ ಬೆಲೆ ಬಾಳುವ ಬಂಗಾರ, ಬೆಳ್ಳಿ ಮತ್ತು ದ್ವಿಚಕ್ರವಾಹನಗಳನ್ನು ಪೋಲಿಸರು ತಮ್ಮ ವಶಕ್ಕೆ ತೆಗೆದುಕೊಂಡರು ಎಂದು ಅವರು ಹೇಳಿದರು.
ಸಬ್ ಅರ್ಬನ್ ಉಪ ವಿಭಾಗದ ಸಹಾಯಕ ಪೋಲಿಸ್ ಆಯುಕ್ತ ಡಿ.ಜಿ. ರಾಜಣ್ಣ ಅವರ ನೇತೃತ್ವದಲ್ಲಿ ವಿಶ್ವವಿದ್ಯಾಲಯ ಠಾಣೆಯ ಪಿಐ ಜಗದೀಶ್ ಕೆ.ಜಿ., ಪಿಎಸ್‍ಐ ಮೊಹ್ಮದ್ ಇಬ್ರಾಹಿಂ, ಎಎಸ್‍ಐ ಹುಸೇನ್ ಭಾಷಾ, ಸಿಬ್ಬಂದಿಗಳಾದ ರಾಜು ಟಾಕಳೆ, ಸಂಜಯಕುಮಾರ್, ಹಾಜಿ ಮಲಂಗ, ಪ್ರಕಾಶ್, ವಿಶ್ವನಾಥ್, ಮಂಜುನಾಥ್, ಪ್ರೀತಮ್, ಸುಲ್ತಾನ್, ಬೀರಣ್ಣ, ರಾಜಕುಮಾರ್ ಫರತಾಬಾದ್ ಅವರು ಕಾರ್ಯಾಚರಣೆ ಕೈಗೊಂಡರು ಎಂದು ಅವರು ತಿಳಿಸಿದರು.
ಕಾರು ಪತ್ತೆ: ಅದೇ ರೀತಿ ಕಳೆದ 2023ರ ಸೆಪ್ಟೆಂಬರ್ 19ರಂದು ಜಯನಗರದ ನಿವೃತ್ತ ಕೆಜಿಬಿ ಬ್ಯಾಂಕ್ ನೌಕರ ಗೋಪಾಲರಾವ್ ತಂದೆ ಭೀಮರಾವ್ ಕುಲಕರ್ಣಿ ಅವರು ತಮ್ಮ ಕುಟುಂಬದೊಂದಿಗೆ ಹೊನ್ನೂರು, ಶೃಂಗೇರಿ, ಉಡುಪಿ ಪ್ರವಾಸಕ್ಕೆ ಹೋದಾಗ ಮನೆಯ ಹೊರಗಡೆ ಇದ್ದ ಕಾರು ಹಾಗೂ ಮನೆ ಕೀಲಿ ಮುರಿದು ಸುಮಾರು 1,96,500ರೂ.ಗಳ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಪ್ರಕರಣವನ್ನು ಪೋಲಿಸರು ಬೇಧಿಸಿದ್ದು, ಕಳುವಾದ ಕಾರು ಮಧ್ಯಪ್ರದೇಶದ ದಿಶಾ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು ಪೋಲಿಸ್ ಆಯುಕ್ತ ಚೇತನ್ ಆರ್., ಅವರು ಹೇಳಿದರು.
ಉಪ ಪೋಲಿಸ್ ಆಯುಕ್ತರಾದ ಶ್ರೀಮತಿ ಕನಿಕಾ ಸಿಕ್ರಿವಾಲ್, ಪ್ರವೀಣ್ ಎಚ್. ನಾಯಕ್, ಉತ್ತರ ಉಪ ವಿಭಾಗದ ಸಹಾಯಕ ಪೋಲಿಸ್ ಆಯುಕ್ತ ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಎಂ.ಬಿ. ನಗರ ಠಾಣೆಯ ಪಿಐ ಶಿವಾನಂದ್ ಎಸ್. ವಾಲಿಕಾರ್ ಅವರ ನೇತೃತ್ವದಲ್ಲಿ ಪಿಎಸ್‍ಐ ಶ್ರೀಮತಿ ಪದ್ಮಾವತಿ, ಎಎಸ್‍ಐ ನಜಮೋದ್ದೀನ್, ಸಿಬ್ಬಂದಿಗಳಾದ ಹಣಮಂತ್ ತೋಟದ್, ಗುರುರಾಜ್, ಸಿದ್ದಣ್ಣ, ಬೀರಪ್ಪ, ನಾಗರಾಜ್, ಚನ್ನವೀರೇಶ್ ಅವರು ಕಾರ್ಯಾಚರಣೆಯನ್ನು ಕೈಗೊಂಡು ಕಳ್ಳತನ ಪ್ರಕರಣವನ್ನು ಬೇಧಿಸಿದರು ಎಂಧು ಅವರು ತಿಳಿಸಿದರು.
ಗೋಪಾಲರಾವ್ ಕುಲಕರ್ಣಿ ಅವರು ಮನೆಗೆ ಬೀಗ ಹಾಕಿಕೊಂಡು ಧಾರ್ಮಿಕ ಕ್ಷೇತ್ರಗಳಿಗೆ ಕುಟುಂಬದೊಂದಿಗೆ ಹೋದಾಗ ಪಕ್ಕದ ಮನೆಯವರಾದ ಶ್ರೀಮತಿ ಆರತಿ ಗಂಡ ಮಧ್ವರಾಜ್ ಬಂಡಿ ಅವರು ಮೊಬೈಲ್ ಕರೆಯ ಮೂಲಕ ಮನೆಯ ಹಿಂದಿನ ಬಾಗಿಲು ತೆರೆದಿದ್ದು, ಮುಂದಿನ ಬಾಗಿಲಿನ ಕೊಂಡಿ ಮುರಿದಿದ್ದು ಹಾಗೂ ಕಾರು ಇಲ್ಲದೇ ಇರುವ ಕುರಿತು ಮಾಹಿತಿ ನೀಡಿದರು. ಇದರಿಂದ ಮನೆಗೆ ಬಂದು 2019ರ ಸೆಪ್ಟೆಂಬರ್ 19ರಂದು ಬಂದು ಪರಿಶೀಲಿಸಿದಾಗ ಮನೆಯ ಹೊರಗಡೆ ನಿಲ್ಲಿಸಿದ್ದ 80,000ರೂ.ಗಳ ಮೌಲ್ಯದ ಮಾರುತಿ ಸ್ವಿಫ್ಟ್ ಕಾರು, ಅಲಮಾರಿಯಲ್ಲಿ ಇಟ್ಟಿದ್ದ 24000ರೂ.ಗಳ ಮೌಲ್ಯದ 6 ಗ್ರಾಮ್ ತೂಕದ ಬಂಗಾರದ ತಾಳಿ ಗುಂಡಿಗಳು, 87,500ರೂ.ಗಳ ಮೌಲ್ಯದ 2500 ಗ್ರಾಮ್ ತೂಕದ ಬೆಳ್ಳಿಯ ಆಭರಣಗಳು, 5000ರೂ.ಗಳ ಮೌಲ್ಯದ ಒಂದು ಕೈಗಡಿಯಾರ ಸೇರಿ ಒಟ್ಟು 1,96,500ರೂ.ಗಳ ಮೌಲ್ಯದ ಸ್ವತ್ತನ್ನು ಕಳೆದುಕೊಂಡು ಹೋಗಿದ್ದನ್ನು ಖಚಿತಪಡಿಸಿಕೊಂಡರು. ನಂತರ ಎಂ.ಬಿ. ನಗರ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮತ್ತು ಕಳ್ಳತನದ ಸ್ವತ್ತುಗಳ ಪತ್ತೆಗಾಗಿ ಪೋಲಿಸರು ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ ಎಂದು ಅವರು ತಿಳಿಸಿದರು. ಎರಡೂ ಕಾರ್ಯಾಚರಣೆಳಿಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.