ಕಲಬುರಗಿ,ಜು.19-ನಗರದ ಕೇಂದ್ರ ಬಸ್ ನಿಲ್ದಾಣ ಪ್ರದೇಶದಲ್ಲಿ ಕೈಯಲ್ಲಿ ಮಾರಕಾಸ್ತ್ರ ಹಿಡಿದುಕೊಂಡು ಓಡಾಡುತ್ತಿದ್ದ ಇಬ್ಬರನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.
ಆಳಂದ ತಾಲ್ಲೂಕಿನ ಕಡಗಂಚಿಯ ಶಾಂತಪ್ಪ ಆಲೂರ (24) ಮತ್ತು ಫಿಲ್ಟರ್‍ಬೆಡ್ ಆಶ್ರಯ ಕಾಲೋನಿಯ ದೀಪಕ್ ಭೂರ್ತೆನವರ್ (24) ಎಂಬುವವರನ್ನು ಬಂಧಿಸಿ ಒಂದು ಹರಿತವಾದ ಚಾಕು ಮತ್ತು ಕೈಗೆ ಹಾಕಿಕೊಳ್ಳುವ ಪಂಚ್ ಜಪ್ತಿ ಮಾಡಿದ್ದಾರೆ.
ಅಶೋಕನಗರ ಪಿಎಸ್‍ಐ ಶಿವಪ್ಪ ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳಾದ ಶಿವಲಿಂಗ, ನೀಲಕಂಠರಾಯ ಪಾಟೀಲ ಅವರು ಗಸ್ತಿನಲ್ಲಿದ್ದಾಗ ಕೇಂದ್ರ ಬಸ್ ನಿಲ್ದಾಣ ಪ್ರದೇಶದಲ್ಲಿ ಶಾಂತಪ್ಪ ಆಲೂರ ಮತ್ತು ದೀಪಕ್ ಭೂರ್ತೆನವರ್ ಕೈಯಲ್ಲಿ ಮಾರಕಾಸ್ತ್ರ ಹಿಡಿದುಕೊಂಡು ಓಡಾಡುತಿದ್ದುದ್ದನ್ನು ಗಮನಿಸಿ ಬಂಧಿಸಿದ್ದಾರೆ.
ಬಂಧಿತರಲ್ಲಿ ಶಾಂತಪ್ಪ ಆಲೂರ, ಆಳಂದ ತಾಲ್ಲೂಕಿನ ನರೋಣಾ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ ಎಂದು ತಿಳಿದುಬಂದಿದೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.