ಮಾರಕಾಸ್ತ್ರಗಳಿಂದ ಕೊಚ್ಚಿ ಗ್ರಾ.ಪಂ.ಸದಸ್ಯನ ಕೊಲೆ

ಕಲಬುರಗಿ,ನ.3-ಮಾರಕಾಸ್ತ್ರಗಳಿಂದ ಕೊಚ್ಚಿ ಗ್ರಾಮ ಪಂಚಾಯತಿ ಸದಸ್ಯನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಇಲ್ಲಿನ ಕೈಲಾಸ ನಗರದಲ್ಲಿ ನಡೆದಿದೆ.
ಆಳಂದ ತಾಲ್ಲೂಕಿನ ಕಡಗಂಚಿ ಗ್ರಾ.ಪಂ.ಸದಸ್ಯ ಶಿವಲಿಂಗಪ್ಪ ಭೂಶೆಟ್ಟಿ (50) ಕೊಲೆಯಾದವರು.
ಕೊಲೆಗೆ ಆಸ್ತಿ ವಿವಾದವೇ ಕಾರಣವೆನ್ನಲಾಗಿದೆ. ಕಳೆದ ರಾತ್ರಿ ಶಿವಲಿಂಗಪ್ಪ ಭೂಶೆಟ್ಟಿ ಅವರು ಕೈಲಾಸ ನಗರದಲ್ಲಿರುವ ಬಾಡಿಗೆ ಮನೆ ಬಳಿ ನಿಂತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕೊಲೆಯಾದ ಶಿವಲಿಂಗಪ್ಪ ಭೂಶೆಟ್ಟಿ ಹಾಗೂ ರಾಜಪ್ಪ ಪೀರಪ್ಪ ಮಾದಗೊಂಡ ಕುಟುಂಬದವರ ನಡುವೆ ಆಸ್ತಿ ವಿವಾದವಿತ್ತು. ಈ ವಿವಾದದ ಹಿನ್ನೆಲೆಯಲ್ಲಿ ರಾಜಪ್ಪ ಮಾದಗೊಂಡ ಹಾಗೂ ಆತನ ಪುತ್ರರು ಸೇರಿ ಈ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಭೂಶೆಟ್ಟಿ ಸಂಬಂಧಿಕರು ಆರೋಪಿಸಿದ್ದಾರೆ.
ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.