ಮಾಯಕೊಂಡ ಮೀಸಲು ಕ್ಷೇತ್ರದಲ್ಲಿ ಬೋವಿ ಸಮಾಜಕ್ಕೆ ಟಿಕೆಟ್ ನೀಡಲು ಒತ್ತಾಯ

ದಾವಣಗೆರೆ.ಮಾ.೧: ದಾವಣಗೆರೆ ಜಿಲ್ಲೆಯಲ್ಲಿ ಇರುವ ಭೋವಿ ಸಮಾಜದ ಜನಸಂಖ್ಯೆ ಆಧಾರದಲ್ಲಿ ಮಾಯಕೊಂಡ ಮೀಸಲು ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು ಎಂದು ಜಿಲ್ಲಾ ಭೋವಿ ಸಮಾಜ ರಾಷ್ಟ್ರೀಯ ಪಕ್ಷಗಳಿಗೆ ಮನವಿ ಮಾಡಿದೆ.ಸುದ್ದಿಗೋಷ್ಠಿ‌ ಯಲ್ಲಿ ಮಾತನಾಡಿದ ಸಮಾಜದ ಜಿಲ್ಲಾ ಅಧ್ಯಕ್ಷ ಎಚ್.‌ಜಯಣ್ಣ, ದಾವಣಗೆರೆ ಜಿಲ್ಲೆಯಲ್ಲಿ ಎರಡೂವರೆ ಲಕ್ಷ ಒಳಗೊಂಡಂತೆ 35 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ಈವರೆಗೆ ಯಾವುದೇ ರಾಷ್ಟ್ರೀಯ ಪಕ್ಷಗಳು ಸೂಕ್ತ ರಾಜಕೀಯ ಸ್ಥಾನಮಾನ, ಟಿಕೆಟ್ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಮಾಯಕೊಂಡ ಮೀಸಲು ಕ್ಷೇತ್ರದಲ್ಲಿ ಭೋವಿ ಸಮಾಜದ ಮತಗಳು 18, 500 ಕ್ಕೂ ಹೆಚ್ಚಿದೆ. ಕ್ಷೇತ್ರದಲ್ಲಿ ಈವರೆಗೆ ಯಾವುದೇ ಪಕ್ಷಗಳು ಟಿಕೆಟ್ ನೀಡಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಮಾಯಕೊಂಡ ಕ್ಷೇತ್ರದಲ್ಲಿ ಭೋವಿ ಸಮಾಜದವರಿಗೆ ಟಿಕೆಟ್ ಕೊಡುವ ಮೂಲಕ ಸಾಮಾಜಿಕ ನ್ಯಾಯ ಒದಗಿ ಸಬೇಕು ಎಂದು ತಿಳಿಸಿದರು.ಕಾಂಗ್ರೆಸ್ ನಲ್ಲಿ ಡಿ. ಬಸವರಾಜ್, ಡಾ.‌‌ವೈ.‌ರಾಮಪ್ಪ, ಎಚ್. ಆನಂದಪ್ಪ ಹಾಗೂ ಬಿಜೆಪಿಯಲ್ಲಿ ಜಿ.ಎಸ್. ಶ್ಯಾಮ್ ಆಕಾಂಕ್ಷಿತರಿದ್ದಾರೆ. ರಾಷ್ಟ್ರೀಯ ಪಕ್ಷಗಳು ನಮ್ಮ ಸಮಾಜದ ಒತ್ತಡಕ್ಕೆ ಸ್ಪಂದಿಸಿ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.ಜಗಳೂರು ಕ್ಷೇತ್ರದಲ್ಲಿ ನಿರ್ಣಾಯಕ 23 ಸಾವಿರದಷ್ಟು ಮತದಾರರಿದ್ದಾರೆ. ಚನ್ನಗಿರಿ ಯಲ್ಲಿ 14 ಸಾವಿರ, ಹೊನ್ನಾಳಿ ಯಲ್ಲಿ 13, ಹರಿಹರದಲ್ಲಿ ಎಂಟು, ದಾವಣಗೆರೆ ದಕ್ಷಿಣ ಮತ್ತು ಉತ್ತರದಲ್ಲಿ 15 ಸಾವಿರದಷ್ಟು ಮತದಾರರಿದ್ದಾರೆ ಎಂದು ತಿಳಿಸಿದರು.ಮಾಯಕೊಂಡ ಮೀಸಲು ಕ್ಷೇತ್ರದಲ್ಲಿ ಯಾವ ರಾಷ್ಟ್ರೀಯ ಪಕ್ಷಗಳು ಟಿಕೆಟ್ ನೀಡಿದರೆ ಇಡೀ ಸಮಾಜ ಒಂದಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.ಜಿಲ್ಲಾ ಕಾರ್ಯಾಧ್ಯಕ್ಷ ಬಿ. ಗೋಪಾಲ್, ‌ಕಾರ್ಯದರ್ಶಿ ಬಿ.ಸಿ. ಮಂಜಪ್ಪ, ವೈ.ಇ. ವಿಜಯ್ ಕುಮಾರ್, ಹನುಮಂತಪ್ಪ, ಭೀಮೇಶ್, ತಿಪ್ಪೇಸ್ವಾಮಿ,  ಟಿ.ಬಿ. ವೀರಭದ್ರಪ್ಪ ಇತರರು ಸುದ್ದಿಗೋಷ್ಠಿ‌ ಯಲ್ಲಿದ್ದರು.