
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.6: ಈ ಬಾರಿಯ ಮುಂಗಾರು ಮಳೆ ಅಭಾವದಿಂದ ಬಿತ್ತನೆ ಮಾಡಿದ್ದ ಬೆಳೆಗಳು ಒಣಗಿ ಹೋಗಿರುವುದರಿಂದ ಮಾಯಕೊಂಡ ವಿಧಾನಸಭಾ ಕ್ಷೇತ್ರವನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡುವಂತೆ ಶಾಸಕ ಕೆ.ಎಸ್.ಬಸವಂತಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಕ್ಷೇತ್ರದ ಕೆಲವು ರೈತ ಮುಖಂಡರು ಶಾಸಕರೊಂದಿಗೆ ನಿಯೋಗ ತೆರಳಿದ್ದಾಗ ಶಾಸಕರು ಬರ ಪರಿಸ್ಥಿತಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದರು.ಈ ಬಾರಿ ಆರಂಭದಲ್ಲಿಯೇ ಮುಂಗಾರು ಮಳೆ ಕೈಕೊಟ್ಟಿತ್ತು. ಬಳಿಕ ಮಧ್ಯದಲ್ಲಿ ಸುರಿದ ಮಳೆಯಿಂದಾಗಿ ಮೆಕ್ಕೆಜೋಳ, ರಾಗಿ ಸೇರಿದಂತೆ ಇನ್ನಿತರೆ ಧಾನ್ಯಗಳ ಬೀಜಗಳನ್ನು ಬಿತ್ತನೆ ಮಾಡಿದ್ದರು. ಆದರೆ ಮಳೆಯ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆಗಳು ಒಣಗಿ ಹೋಗಿದ್ದು, ಇದರಿಂದ ರೈತರು ತತ್ತರಿಸಿ ಹೋಗಿದ್ದಾರೆ. ಅಲ್ಲದೇ, ಮಳೆ ಇಲ್ಲದೆ ಅಂತರ್ಜಲ ಮಟ್ಟ ಕುಸಿದ ಪರಿಣಾಮ ಅಡಿಕೆ ತೋಟಗಳು ಒಣಗುವಂತಾಗಿದೆ. ಹೀಗಾಗಿ ಮಾಯಕೊಂಡ ಕ್ಷೇತ್ರವನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ಅಣಜಿ ಚಂದ್ರಣ್ಣ, ಹೆದ್ನೆ ರಾಜೇಂದ್ರ, ಲೋಕೇಶ್, ರುದ್ರನಕಟ್ಟೆ ಸ್ವಾಮಿ, ಶಂಭಣ್ಣ ಸೇರಿದಂತೆ ಇನ್ನಿತರರಿದ್ದರು.