ಮಾಯಕೊಂಡ ಕ್ಷೇತ್ರದಲ್ಲಿ ಗಾಯತ್ರಿ ಸಿದ್ದೇಶ್ವರ್ ಮತಪ್ರಚಾರ

ಸಂಜೆವಾಣಿ ವಾರ್ತೆ

ದಾವಣಗೆರೆ.ಏ.೨ : ದೇಶದಲ್ಲಿ 65 ವರ್ಷಗಳಲ್ಲಿ ಆಗದ ಅಭಿವೃದ್ಧಿ ಕೆಲಸಗಳು ಕೇವಲ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿ ತೋರಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ತಿಳಿಸಿದರು.ಮಾಯಕೊಂಡ ವಿಧಾನಸಭಾ ಕ್ಷೇತ್ರದ ಅಣಜಿ ಮತ್ತು ಆನಗೋಡು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮತಯಾಚನೆ ನಡೆಸಿ ಮಾತನಾಡಿದ ಅವರು, 65 ವರ್ಷಗಳ ಕಾಲ ಕಾಂಗ್ರೆಸ್ ಭ್ರಷ್ಟಾಚಾರ ಮಾಡಿದ ಪರಿಣಾಮ ದೇಶ ಅಭಿವೃದ್ಧಿ ಕಂಡಿರಲಿಲ್ಲ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 10 ವರ್ಷದಲ್ಲೇ ಭಾರತ ವಿಶ್ವಗುರು ಆಗುವತ್ತಾ ಸಾಗುತ್ತಿದೆ ಎಂದರು.ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತಾಗಿದೆ. ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತ ನೀಡುವ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಸಂಕಲ್ಪದೊಂದಿಗೆ ಎಲ್ಲರೂ ನನಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿ ಗೆಲ್ಲಿಸಿ ದೆಹಲಿಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.ಕಳೆದ ಚುನಾವಣೆಯಲ್ಲಿ ಮೋದಿ ಜೀ ಅವರು ದಾವಣಗೆರೆಗೆ ಬಂದಾಗ ನೀವು ದೆಹಲಿಗೆ ಕಮಲ ಕಳುಹಿಸಿ, ನಾನು ಲಕ್ಷ್ಮೀ ಕಳುಹಿಸುತ್ತೇನೆ ಎಂದಿದ್ದರು. ಕೊಟ್ಟ ಮಾತಿನಂತೆ ಮೋದಿ ಜೀ ಅವರು ದಾವಣಗೆರೆಗೆ ಸ್ಮಾರ್ಟ್ ಸಿಟಿ ಸೇರಿದಂತೆ ಅನೇಕ ಯೋಜನೆಗಳನ್ನು ಲಕ್ಷ್ಮೀ ರೂಪದಲ್ಲಿ ಕಳುಹಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ ಎಂದರು.ಮತಯಾಚನೆಗೆ ತೆರಳಿದ ಗ್ರಾಮಗಳಲ್ಲಿ ಅಭಿಮಾನಿಗಳು  ಕಾರ್ಯಕರ್ತರು, ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡರು. ಗ್ರಾಮಗಳ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದು ಪುನೀತರಾದುರು.ಪ್ರಚಾರದಲ್ಲಿ ಮುಖಂಡರಾದ ಅಣಬೇರು ಜೀವನಮೂರ್ತಿ,  ರಾಜ್ಯ ಯುವ ಮೋರ್ಚಾದ ಉಪಾಧ್ಯಕ್ಷ ಜಿ,ಎಸ್ ಶ್ಯಾಮ್, ಬಿ.ಟಿ. ಸಿದ್ದಪ್ಪ, ಜಿ.ಎಸ್.ಅಶ್ವಿನಿ, ಎಲ್.ರಾಜೀವ್, ಆಲೂರು ನಿಂಗರಾಜ್, ಮಂಡಲ ಅಧ್ಯಕ್ಷ ದೇವೇಂದ್ರಪ್ಪ, ಹನುಮಂತ ನಾಯ್ಕ್, ಗ್ಯಾರಳ್ಳಿ ಶಿವಕುಮಾರ್, ಜಯಮ್ಮ, ಅನಿಲ್ ಕುಮಾರ್ ನಾಯ್ಕ್, ಕವಿತಾ ಜಯಣ್ಣ ಸೇರಿದಂತೆ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಸಾಥ್ ನೀಡಿದರು‌.