ಮಾಯಕೊಂಡ ಕ್ಷೇತ್ರದಲ್ಲಿ ಆಪ್‌ನಿಂದ‌ ಸ್ಪರ್ಧೆ; ಪ್ರೊ. ಎಸ್. ಧರ್ಮನಾಯ್ಕ

ದಾವಣಗೆರೆ.ಜ.೨೨: ಮಾಯಕೊಂಡ ಮೀಸಲು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಮಾಜಿಕ, ಶಿಕ್ಷಣ, ಮೂಲಭೂತ ಸೌಕರ್ಯಗಳಲ್ಲಿ ಅಮೂಲಾಗ್ರ ಬದಲಾವಣೆ ತರುವ ಉದ್ದೇಶದಿಂದ ಆಮ್ ಆದ್ಮಿ ಪಾರ್ಟಿ ಯಿಂದ ಸ್ಪರ್ಧೆ ಮಾಡಲು ಬಯಸುತ್ತಿರುವುದಾಗಿ ಪ್ರೊ. ಎಸ್. ಧರ್ಮನಾಯ್ಕ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮಾಯಕೊಂಡ ಕ್ಷೇತ್ರದಲ್ಲಿ ಪ್ರವಾಸ ನಡೆಸಿದ ಸಂದರ್ಭದಲ್ಲಿ ಅನೇಕ ಕಡೆ ರಸ್ತೆ ಸೌಲಭ್ಯವೇ ಇಲ್ಲದ ಕಾರಣ ಅನೇಕರು ಶಿಕ್ಣಣದಿಂದ ವಂಚಿತರಾಗಿದ್ದು ಕಂಡು ಬಂದಿದೆ. ಎಲ್ಲ ಪಕ್ಷಗಳು ನೀಡಿರುವ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ. ಕ್ಷೇತ್ರದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಆಪ್ ನ ಪ್ರಬಲ ಆಕಾಂಕ್ಷಿ ಆಗಿರುವುದಾಗಿ ತಿಳಿಸಿದರು.ವಿದ್ಯಾರ್ಥಿ ದೆಸೆಯಿಂದಲೂ ದಲಿತ ಸಂಘರ್ಷ, ಚಂದ್ರಗುತ್ತಿ ಬೆತ್ತಲೆ ಸೇವೆ ವಿರುದ್ಧ ಹೋರಾಟ ಮಾಡಿರುವೆ. ಕೆಲಸದಲ್ಲಿ ಇರುವ ಸಂದರ್ಭದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿರುವೆ ಎಂದು ತಿಳಿಸಿದರು.ಈಗ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಈಸ್ಟ್ ಇಂಡಿಯಾ ಕಂಪನಿಯ ಮಾದರಿಯಲ್ಲಿ ಅನೇಕ ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣ ಮಾಡುತ್ತಿದೆ. ಕೊರೊನಾ ಸಂದರ್ಭದಲ್ಲಿ ಅನೇಕರು ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಮೃತಪಟ್ಟಿರುವ ಉದಾಹರಣೆ ಇದೆ. ದೆಹಲಿಯಲ್ಲಿ ಅಧಿಕಾರ ನಡೆಸುತ್ತಿರುವ ಕೇಜ್ರಿವಾಲ್ ಸರ್ಕಾರದಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಆಮ್ ಆದ್ಮಿ ಪಾರ್ಟಿ ಯ ಕೆಲಸ ಕಾರ್ಯ ನೋಡಿ ಆಕರ್ಷಿತವಾಗಿ ಪಕ್ಷ ಸೇರಿರುವೆ ಎಂದರು. ಆನಗೋಡಿ ನಿಂದ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಕ್ಷೇತ್ರದ ವಿವಿಧ ಭಾಗಗಳಲ್ಲಿ ನಡೆಯಲಿದೆ ಎಂದು ತಿಳಿಸಿದರು.ಪಕ್ಷದ ಮುಖಂಡ ಎಸ್. ಕೆ. ಆದಿಲ್ ಖಾನ್ ಮಾತನಾಡಿ, ದಾವಣಗೆರೆ ಜಿಲ್ಲೆಯ ಏಳು ಕ್ಷೇತ್ರದಲ್ಲಿ ಆರು ಕ್ಷೇತ್ರದಲ್ಲಿ ಆಕಾಂಕ್ಷಿಗಳು ಇದ್ದಾರೆ. ದಾವಣಗೆರೆ ದಕ್ಷಿಣದಲ್ಲಿ ಇಬ್ಬರು ಆಕಾಂಕ್ಷಿಗಳಿದ್ದಾರೆ. ಅಭ್ಯರ್ಥಿಯ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.ಪಕ್ಷದ ಸಿ.ಆರ್. ಅರುಣ್ ಕುಮಾರ್, ಜಿಲ್ಲಾ ವೀಕ್ಷಕ ಕೆ. ರವೀಂದ್ರ, ದೊಡ್ಡೇಶ್ ಸುದ್ದಿಗೋಷ್ಠಿಯಲ್ಲಿದ್ದರು.