ಮಾನ ಮಾರ್ಯದೆ ಬಿಟ್ಟ ಬಿಜೆಪಿಯಿಂದ ಪ್ರತಿಭಟನೆ

ಸಂಜೆವಾಣಿ ನ್ಯೂಸ್
ಮೈಸೂರು: ಜು.05:- ರಾಜ್ಯದ ಸರ್ಕಾರ ಹಾಗೂ ಜನರ ಪರವಾಗಿ ಕೇಂದ್ರಕ್ಕೆ ನಿಯೋಗ ಕರೆದೊಯ್ದು ಅಕ್ಕಿ ಕೇಳಬೇಕಾದ ಬಿಜೆಪಿ ಪ್ರತಿಭಟನೆ ಮಾನ ಮಾರ್ಯದೆ ಬಿಟ್ಟಿರುವುದರ ಪ್ರತೀಕ ಎಂದು ಕೆಪಿಸಿಸಿ ವಕ್ತಾರ ಎ.ಎನ್.ನಟರಾಜ್ ಗೌಡ ಕಿಡಿಕಾರಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಜನತೆಗೆ ಅಕ್ಕಿ ಕೊಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸದ ಬಿಜೆಪಿಯ 66 ಶಾಸಕರು ಮತ್ತು 26 ಸಂಸದರು ನಾಡದ್ರೋಹಿಗಳಾಗಿದ್ದಾರೆ. ಬಿಜೆಪಿಯವರ ಪ್ರತಿಭಟನೆ ಯಾರ ವಿರುದ್ಧ? ಮಾಡುತ್ತಿದ್ದಾರೆ. ಅಕ್ಕಿಕೊಡದ ಕೇಂದ್ರ ಬಿಜೆಪಿ ವಿರುದ್ಧವೇ ರಾಜ್ಯಕ್ಕೆ ಅನ್ಯಾಯ ಮಾಡದಿರುವಂತೆ ಧ್ವನಿ ಎತ್ತದ ಬಿಜೆಪಿ ನಾಯಕರಿಗೆ ಜನತೆಯ ಹಿತ ಮುಖ್ಯವಲ್ಲ. ಇದು ನಾಚಿಕೆಗೇಡು ಎಂದು ಟೀಕಿಸಿದರು.
ದೇಶದ ಗೋದಾಮುಗಳಲ್ಲಿ 731 ಲಕ್ಷ ಮೆಟ್ರಿಕ್ ಟನ್ ಅಕ್ಕಿ, ಗೋಧಿ ದಾಸ್ತಾನಿದೆ. ಒಂದು ವರ್ಷಕ್ಕೆ ಇಡೀ ದೇಶಕ್ಕೆ 550 ಲಕ್ಷ ಮೆಟ್ರಿಕ್ ಟನ್ ದವಸ ಅಗತ್ಯವಿದೆ. 180 ಲಕ್ಷ ಮೆಟ್ರಿಕ ಟನ್ ದವಸ ಧಾನ್ಯ ಹೆಚ್ಚುವರಿ ದಾಸ್ತಾನಿದೆ. 70 ದೇಶಗಳಿಗೆ ಅಕ್ಕಿ ಕೊಡಲಾಗುತ್ತಿದೆ. 29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಎಥೆನಾಲ್‍ಗೆ ನೀಡಲಾಗಿದೆ ಎಂದು ವಿವರಿಸಿದರು.
ಅಕ್ಕಿ ಇದ್ದು ಕೊಡದ ಕೇಂದ್ರ ಸರಕಾರವೂ ಕಾಂಗ್ರೆಸ್ ಗ್ಯಾರಂಟಿಗಳನ್ನು ವಿಫಲಗೊಳಿಸುವ ಸಂಚು ನಡೆಸಿದೆ. ಆದರೆ, ಕಾಂಗ್ರೆಸ್ ಗ್ಯಾರಂಟಿಗಳನ್ನು ಇತರೆ ರಾಜ್ಯಗಳು ವಿಸ್ತರಿಸಲಿವೆ. ಬಿಜೆಪಿಗೆ ತಕ್ಕ ಪಾಠ ಕಲಿಸಲಿವೆ. ಅಕ್ಕಿ ಸಿಗದ ಹಿನ್ನೆಲೆಯಲ್ಲಿ 4.42 ಕೋಟಿ ಜನರಿಗೆ 5 ಕೆಜಿ ಅಕ್ಕಿ, ಇನ್ನೈದು ಕೆಜಿ ಅಕ್ಕಿಗೆ 34 ರೂ.ಗಳಂತೆ ನೀಡಲು ಸರಕಾರ ಮುಂದಾಗಿರುವುದು ಅಭೂತಪೂರ್ವ ಸಂಗತಿ ಮತ್ತು ದೇಶದ ಯಾವ ರಾಜ್ಯವೂ ಜಾರಿಗೆ ತರದ ಕ್ರಾಂತಿಕಾರಕ ಕಾರ್ಯಕ್ರಮ ಎಂದು ಹೇಳಿದರು.
ಆತಂರಿಕ ಪ್ರಜಾಪ್ರಭುತ್ವವಿಲ್ಲ: ಯಾವ ಬಣ ಹೆಚ್ಚು ಪ್ರತಿಭಟನೆ ಮಾಡುತ್ತದೆ ಎಂಬುದರ ಆಧಾರದ ಮೇಲೆ ಪ್ರತಿಪಕ್ಷ ಮತ್ತು ರಾಜ್ಯಾಧ್ಯಕ್ಷ ನೇಮಕ ಮಾಡಲಾಗಿದೆ ಎಂಬಂತೆ ಬಿಜೆಪಿ ನಾಯಕರು ಬಣಗಳಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಪಕ್ಷ ನಾಯಕ ಆಯ್ಕೆ ಕಸರತ್ತು ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂಬುದನ್ನು ಸೂಚಿಸುತ್ತದೆ. ಶಾಸಕಾಂಗ ಪಕ್ಷದ ಸಭೆ ನಡೆಸಿ ಆಯ್ಕೆ ಮಾಡುವ ಪದ್ಧತಿ ಇಲ್ಲ. ನಾಗ್ಬುರದ ಕೇಶವಾಕೃಪದಿಂದ ಆದೇಶದ ಮೇರೆಗೆ ಆಯ್ಕೆ ನಡೆಯುತ್ತಿದೆ. ಬಿಜೆಪಿಯ ಬಣ್ಣ ಕಳಚಿದೆ. ಅದರ ಬಣ್ಣ ಕೇಸರಿ ಅಲ್ಲ. ಕಪ್ಪು ಎಂದು ಟೀಕಾಪ್ರಹಾರ ನಡೆಸಿದರು.
ಬಿಜೆಪಿ ನಾಯಕರು ಅಧಿಕಾರದಲ್ಲಿದ್ದಾಗ ಕೆಲಸ ಮಾಡುವುದಿಲ್ಲ. ಕೆಲಸ ಮಾಡುವವರನ್ನು ಸಹಿಸುವುದಿಲ್ಲ. 2024ರ ಚುನಾವಣೆಯಲ್ಲಿ ಎನ್‍ಡಿಎ ಸರ್ಕಾರವನ್ನು ಜನರು ಮನೆಗೆ ಕಳುಹಿಸಲಿದ್ದಾರೆ. ರಾಜ್ಯದಲ್ಲಿ 25 ಸೀಟುಗಳು ಕಾಂಗ್ರೆಸ್ ಗೆಲ್ಲಲಿರುವುದು ಜನರ ಭಾವನೆಯಿಂದಲೇ ತಿಳಿಯುತ್ತಿದೆ. 200 ಯೂನಿಟ್ ಉಚಿತ ವಿದ್ಯುತ್ ವಿದ್ಯುತ್ ಪೂರೈಕೆಯ ಗೃಹಜ್ಯೊ?ತಿ ಯೋಜನೆಗೆ 1 ಕೋಟಿ ಜನರು ಅರ್ಜಿ ಸಲ್ಲಿಸಿದ್ದಾರೆ. ಇದು ಕತ್ತಲಿನಿಂದ ಬೆಳಕಿನೆಡೆಗಿನ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್‍ಕುಮಾರ್ ಮಾತನಾಡಿ, ನಿಗಮ ಮಂಡಳಿಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾ ಮತ್ತು ತಾಲ್ಲೂಕುವಾರು ಸಮಿತಿ ಮಾಡಿದ್ದು, ಆಕಾಂಕ್ಷಿಗಳು ಜು.15ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಹರಿಗೆ ಹುದ್ದೆ ದೊರೆಯಲಿದೆ ಎಂದು ಹೇಳಿದರು. ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಮಾದ್ಯಮ ವಕ್ತಾರ ಮಹೇಶ್ ಇನ್ನಿತರರು ಉಪಸ್ಥಿತರಿದ್ದರು.