ಮಾನ, ಮರ್ಯಾದೆ ಇದ್ದರೆ “ಸ್ಟೇ” ಏಕೆ ತೆಗೆದುಕೊಳ್ಳಬೇಕಿತ್ತು: ಕುಮಾರಸ್ವಾಮಿ ಪ್ರಶ್ನೆ

ಕಲಬುರಗಿ,ಮಾ.25-ಸಚಿವ ಡಾ.ಸುಧಾಕರ ಅವರ “ಏಕ ಪತ್ನಿ ವೃತಸ್ಥ” ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಅವರಿಗೆ ಮಾನ, ಮರ್ಯಾದೆ ಇದ್ದರೆ “ಸ್ಟೇ” ಏಕೆ ತೆಗೆದುಕೊಳ್ಳಬೇಕಿತ್ತು ಎಂದು ಪ್ರಶ್ನಿಸಿದರು.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಮನಸ್ಸಿಲ್ಲ. ಸಿ.ಡಿ. ವಿಚಾರಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ. ಸಿ.ಡಿ. ಅವರೇ ಮಾಡಿಕೊಂಡ ಸ್ವಯಂಕೃತ ಅಪರಾಧ. ಕಾಂಗ್ರೆಸ್ ನಾಯಕರ ಪದ ಬಳಕೆ ಕೂಡ ಸರಿಯಿಲ್ಲ. ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಎರಡೂ ಪಕ್ಷಗಳಿಗೆ ಸಮಯವಿಲ್ಲ. ಬದಲಾಗಿ ಬತ್ತಲಾಗುವ ವಿಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸಿ.ಡಿ.ವಿಚಾರಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಗೆ ರಕ್ಷಣೆ ಬೇಕಾದರೆ ವಿಧಾನಸಭಾ ಅಧ್ಯಕ್ಷರ ಮುಂದೆ ಬರಲಿ, ನ್ಯಾಯ ಬೇಕಾದರೆ ಸಂತ್ರಸ್ತ ಮಹಿಳೆಯ ಧೈರ್ಯದಿಂದ ಹೊರಬಂದು ಹೇಳಬೇಕು, ಕಾಂಗ್ರೆಸ್ ನವರು ಹೊಡೆದ ಹಾಗೆ ಮಾಡುತ್ತಿದ್ದಾರೆ. ಬಿಜೆಪಿಯವರು ಅತ್ತಹಾಗೆ ನಾಟಕ ಮಾಡುತ್ತಿದ್ದಾರೆ. ಜೂಡಿಷಿಯಲ್ ತನಿಖೆ ಮಾಡಿ ಏನು ಮಾಡುತ್ತೀರಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಉಪ ಚುನಾವಣೆ ಮುಂದಿನ ರಾಜಕೀಯ ಮತ್ತು ಪಕ್ಷಕ್ಕೆ ಮಹತ್ವದ್ದಾಗಿದ್ದು, ಈ ಉಪ ಚುನಾವಣೆಯನ್ನು ಸವಾಲಾಗಿ ತಗೆದುಕೊಂಡಿದ್ದೇವೆ. ರಾಜ್ಯದಲ್ಲಿ ಮೈತ್ರಿ ಸರ್ಕಾರದ ಪತನದ ನಂತರ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಸರ್ಕಾರ ಬಂದು ಎರಡು ವರ್ಷವಾದರೂ ಯಾವುದೇ ಗುಣಾತ್ಮಕ ಕಾರ್ಯಕ್ರಮಗಳಿಗೆ ಸರ್ಕಾರ ಚಾಲನೆ ನೀಡಿಲ್ಲ. ಸಿಎಂ ಸಾಲ ಮಾಡಿದ್ದು ತುಪ್ಪ ತಿನ್ನಲಿಕ್ಕೆ ಅಲ್ಲಾ ಅಂತ ಹೇಳಿದ್ದಾರೆ. ಅನವಶ್ಯಕವಾಗಿ ಕೊರೊನಾ ಸಮಯದಲ್ಲಿ ಬೋರ್ಡ್ ಗಳಿಗೆ ಕಾರ್ಯಕರ್ತ ರನ್ನು ನೇಮಕ ಮಾಡಿದ್ದಾರೆ. ಅವರಿಗೆ ಸಚಿವ ಸಂಪುಟ ಸ್ಥಾನಮಾನ ನೀಡಿದ್ದಾರೆ. ಅವರ ಸ್ವೇಚ್ಛಾಚಾರಕ್ಕೆ ಹಣ ಬಳಕೆಯಾಗುತ್ತಿದೆ ಎಂದು ಆರೋಪಿಸಿದರು.
ಅನೇಕ ಕಡೆ ರೈತರು ಬೆಲೆ ಸಿಗದೇ ತಾವೇ ಬೆಳೆದ ಬೆಳೆಯನ್ನು ನಾಶ ಮಾಡುತ್ತಿದ್ದಾರೆ. ಈ ಸರ್ಕಾರ ಜನರನ್ನು ನೆಮ್ಮದಿಯಿಂದ ಬದಕಲು ಬಿಟ್ಟಿಲ್ಲ ಎಂದರು.
ರಾಜ್ಯವನ್ನು ಸರ್ಕಾರ ದಿವಾಳಿತನಕ್ಕೆ ತೆಗೆದುಕೊಂಡು ಹೋಗುತ್ತಿದೆ. ಹೀಗೆ ಆದ್ರೆ ರಾಜ್ಯಕ್ಕೆ ಮುಂದಿನ ದಿನಗಳಲ್ಲಿ ಕೆಟ್ಟ ದಿನಗಳು ಬರಲಿವೆ.ಹೀಗಾಗಿ ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಬೇಕಾಗಿದೆ ಎಂದರು.
ಸಿಂದಗಿ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಅನ್ನೋದನ್ನು ಪೈನಲ್ ಮಾಡಿಲ್ಲ. ಬಸವ ಕಲ್ಯಾಣ ಅಭ್ಯರ್ಥಿಯಾಗಲು ಬಿಜೆಪಿ ಟಿಕೆಟ್ ಆಕಾಂಕ್ಷಿಯೋರ್ವ ನಾಯಕರಿಗೆ ದೊಡ್ಡ ಮಟ್ಟದ ದೇಣಿಗೆ ನೀಡಿದ್ದಾರೆ.ಗಾಬರಿಯಾಗುವ ಮೊತ್ತವನ್ನು ಅಭ್ಯರ್ಥಿಯೋರ್ವ ನೀಡಿದ್ದಾರೆ ಎಂದು ಆರೋಪ ಮಾಡಿದರು.
ಸಿದ್ದರಾಮಯ್ಯವವರ ಕಾಲದಲ್ಲಿ ಒಂದು ಲಕ್ಷ ಸ್ಟೋ ಖರೀದಿ ಮಾಡಿದ್ದರು. ಆದರೆ. ಆ ಸ್ಟೋ ಖರೀದಿ ಮಾಡಲಿಕ್ಕೆ ಎಷ್ಟು ಕೋಟಿ ಖರ್ಚಾಗಿದೆ ಎಷ್ಟು ಜನರಿಗೆ ಕೊಟ್ಟಿದ್ದಾರೆ ಅಂತ ಸಿದ್ದರಾಮಯ್ಯನವರೇ ಹೇಳಬೇಕು ಎಂದು ಆಗ್ರಹಿಸಿದರು.
ವಿಧಾನಸೌಧದಲ್ಲಿ ಸಿದ್ದರಾಮಯ್ಯನವರು ಪಂಚೆ ತಗೆದುಕೊಂಡಿದ್ದು, ಬೆತ್ತಲೇ ವಿಚಾರವೇ ಚರ್ಚೆಯಾಯಿತೇ ವಿನ: ಜನರ ಸಮಸ್ಯೆ ಬಗ್ಗೆ ಚರ್ಚೆಯಾಗಲಿಲ್ಲ. ರಾಜ್ಯ ಬಿಜೆಪಿ ಸರ್ಕಾರ
ಕುತಂತ್ರದಿಂದ ಅಧಿಕಾರಕ್ಕೆ ಬಂದಿದೆ. ಕೇಂದ್ರದ ನಾಯಕರು ಕೂಡಾ ರಾಜ್ಯ ಬಿಜೆಪಿ ಸರ್ಕಾರಕ್ಕೆ ಸ್ವತಂತ್ರವಾಗಿ ಅಧಿಕಾರ ನಡೆಸಲು ಬಿಟ್ಟಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಹಂತಹಂತವಾಗಿ ನಾಶ ಮಾಡುತ್ತಿದೆ ಎಂದರು.