ಮಾನ್ವಿ ರಸ್ತೆಯಲ್ಲಿ ನಿತ್ಯ ಅಪಘಾತ

ಓರ್ವ ವೃದ್ಧನ ಕಾಲು ಮುರಿತ; ವೃದ್ಧೆಗೆ ಹಲ್ಲು ಮುರಿದು ಆಸ್ಪತ್ರೆಗೆ ದಾಖಲು
ಸಿರವಾರ. ಡಿ.೨೧-ಸಿರವಾರ-ಮಾನ್ವಿ ಮುಖ್ಯ ರಸ್ತೆಯ ಜಾಲಾಪೂರು ಕ್ಯಾಂಪ್ ಹಾಗೂ ಚಾಗಭಾವಿ ಕ್ರಾಸ್ ನಡುವೆ ಪದೇ-ಪದೇ ಅಪಘಾತಗಳು ಸಂಭವಿಸಿದ್ದರಿಂದ ಅಪಘಾತ ಸ್ಥಳಗಳಲ್ಲಿ ರಸ್ತೆಗೆ (ಸ್ಪೀಡ್ ಬ್ರೇಕರ್) ಹಮ್ಸ್ ಹಾಕಿಸಿದ್ದರ ಪರಿಣಾಮ ಅದರಿಂದಲೂ ಅಪಘಾತಗಳು ಸಂಭವಿಸಿವೆ.
ಕಳೆದ ಒಂದು ತಿಂಗಳ ಅಂತರದಲ್ಲಿ ೧೫ಕ್ಕೂ ಅಧಿಕ ಅಪಘಾತಗಳು ಈ ರಸ್ತೆಯಲ್ಲಿ ಜರುಗಿವೆ. ಅಪಘಾತ ತಡೆಯಲು ವಾರದ ಹಿಂದೆಯಷ್ಟೆ ಈ ಹಮ್ಸ್‌ಗಳನ್ನು ಹಾಕಲಾಗಿದ್ದು ಹಮ್ಸ್ ಹಾಕಿದ ದಿನವೇ ೬ ಅಪಘಾತಗಳು ಜರುಗಿವೆ.
ಭಾನುವಾರ ಇಬ್ಬರು ವೃದ್ಧರು ಅದೇ ಹಮ್ಸ್‌ಗಳಲ್ಲಿ ಅಪಘಾತಕ್ಕೀಡಾಗಿ ಓರ್ವ ವೃದ್ಧ ಕಾಲು ಮುರಿದುಕೊಂಡಿದ್ದರೆ ಮತ್ತೊಬ್ಬ ವೃದ್ಧೆ ಬಾಯಿಯ ಹಲ್ಲುಗಳು ಮುರಿದು ಬಲವಾದ ಪೆಟ್ಟು ಬಿದ್ದಿವೆ.
ಸೋನಮ್ಮ ಗಂಡ ಗೋನಪ್ಪ ವಯಸ್ಸು-೫೫ ಇವರು ಸುಂಕೇಶ್ವರ ತಾಂಡದಿಂದ ಬಂಡೆಗುಡ್ಡಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಸಿರವಾರ-ಮಾನ್ವಿ ಮುಖ್ಯ ರಸ್ತೆಯ ಜಾಲಾಪೂರು ಕ್ಯಾಂಪ್ ಹಾಗೂ ಚಾಗಭಾವಿ ಕ್ರಾಸ್ ನಡುವೆ ಅಪಘಾತ ತಡೆಯಲು ಹಾಕಿದ್ದ ಹಮ್ಸ್‌ನಲ್ಲಿ ಬೈಕ್ ಆಯಾ ತಪ್ಪಿ ಬಿದ್ದಿದ್ದರಿಂದ ಹಲ್ಲು ಮುರಿದು ಸಿರವಾರ ಪ್ರಾಥಮಿಕ ಆಸ್ಪತ್ರೆಗೆ ಬರುವಷ್ಟರಲ್ಲಿ ಅದೇ ರಸ್ತೆ ಅದೇ ಸ್ಥಳದಲ್ಲಿ ಮತ್ತೋರ್ವ ವೃದ್ಧ ಹನುಮಂತ ವಯಸ್ಸು-೬೦ ವಂದಲಿ ಗ್ರಾಮದಿಂದ ಮಾಚನೂರು ಗ್ರಾಮಕ್ಕೆ ಹೋಗುತ್ತಿದ್ದ ವೇಳೆ ಬೈಕ್ ನಿಂದ ಬಿದ್ದು ಕಾಲು ಮುರಿದಿದೆ.