ಮಾನ್ವಿ ಬಿಜೆಪಿ ಟಿಕೆಟಿಗಾಗಿ ಮಹಿಳಾ ಅಭ್ಯರ್ಥಿಗಳಿಂದ ಬಾರಿ ಕಸರತ್ತು

ಚಂದ್ರಶೇಖರ ಮದ್ಲಾಪೂರ
ಮಾನ್ವಿ,ಏ.೦೭-೨೦೨೩ ರ ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗಿರುವ ಹಿನ್ನೆಲೆಯಲ್ಲಿ ಮಾನ್ವಿ ತಾಲೂಕಿನ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯೂ ಕೂಡ ಅಧಿಕವಾಗುತ್ತಿವೆ, ಇಂತಹ ಸನ್ನಿವೇಶದಲ್ಲಿ ಈ ಕ್ಷೇತ್ರದ ಬಿಜೆಪಿ ಟಿಕೆಟಿಗಾಗಿ ಹಾಸನ ಜಿಲ್ಲೆಯ ಮೂಲದ ಸಿ. ವಿಜಯಲಕ್ಷ್ಮಿ ಹಾಗೂ ದೇವದುರ್ಗ ತಾಲೂಕಿನ ಸುಜಾತ ಪಾಟೀಲ ಎನ್ನುವ ಮಹಿಳಾ ಅಭ್ಯರ್ಥಿಗಳು ಕೂಡ ಟಿಕೆಟ್ ಪಡೆಯುವುದಕ್ಕಾಗಿ ರಾಜ್ಯ ಹಾಗೂ ರಾಷ್ಟ್ರೀಯ ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದು ರಾಜ್ಯದ ನಾಯಕರು ನಮ್ಮನ್ನು ಒಪ್ಪಿ ಟಿಕೆಟ್ ನೀಡಿದಲ್ಲಿ ಖಂಡಿತವಾಗಿ ನಾವು ಸ್ಪರ್ಧಿಸಲು ಸಿದ್ಧತೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.
ಹಾಸನ ಜಿಲ್ಲೆಯ ಅರಸಿಕೇರೆ ತಾಲೂಕಿನವರಾದ ಸಿ.ವಿಜಯಲಕ್ಷ್ಮಿ ಬಿಜೆಪಿ ಪಕ್ಷದ ಸಕ್ರೀಯ ರಾಜಕಾರಣಿಯಾಗಿದ್ದು ಅರಸೀಕೆರೆ ನಗರ ಸಭೆಯ ಮಾಜಿ ಸದಸ್ಯರಾಗಿ,ರಾಷ್ಟ್ರೀಯ ಪರಿಶಿಷ್ಟ ವರ್ಗದ ಮಾಜಿ ಉಪಾಧ್ಯಕ್ಷರಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ. ಕೋಟೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿ ಸೇರಿದಂತೆ ಬಿಜೆಪಿ ಪಕ್ಷದ ರಾಜ್ಯದ ಮಹಿಳಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿರುವ ಇವರು ಈ ಬಾರಿ ಮಾನ್ವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆಯುವುದಕ್ಕಾಗಿ ರಾಜ್ಯ ನಾಯಕರ ಮುಂದೆ ತಮ್ಮ ಬೇಡಿಕೆಯನ್ನು ಸಲ್ಲಿಸಿದ್ದು ಟಿಕೆಟ್ ಗಾಗಿ ಕಾಯ್ದು ಕುಳಿತಿದ್ದಾರೆ ಎಂದು ತಿಳಿದು ಬಂದಿದೆ.
ಅದರಂತೆಯೇ ದೇವದುರ್ಗ ತಾಲೂಕಿನ ಜಂಬಲದಿನ್ನಿ ಗ್ರಾಮದ ಸುಜಾತ ಪಾಟೀಲ ಇವರು ಕೂಡ ಮಾನ್ವಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದು ಇವರು ಕಳೆದ ೧೨-೧೫ ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಕ್ರೀಯವಾಗಿ ಪಕ್ಷ ಸಂಘಟನೆ ಮಾಡಿಕೊಂಡಿ ಬಂದಿರುವ ಇವರು ಕಳೆದ ೨೦೦೮ ರಲ್ಲಿ ದೇವದುರ್ಗ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಹಾಗೂ ರಾಜ್ಯ ಬಿಜೆಪಿ ಪಕ್ಷದ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದು ಈಗ ರಾಜ್ಯ ಬಿಜೆಪಿ ಪಕ್ಷದ ಕಾರ್ಯಕಾರಿಣಿ ಸದಸ್ಯರಾಗಿ ಕೆಲಸ ಮಾಡುತ್ತಿದ್ದು ಮಾನ್ವಿ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದು ಇದನ್ನು ರಾಜ್ಯದ ನಾಯಕರ ಮುಂದೆ ಪ್ರಸ್ತಾಪವನ್ನು ಮಾಡಲಾಗಿದ್ದು ನಮ್ಮ ಪಕ್ಷದ ನಾಯಕರು ಒಪ್ಪಿಕೊಂಡರೆ ನಾನು ಖಂಡಿತವಾಗಿ ಸ್ಪರ್ಧೆ ಮಾಡುವುದಕ್ಕೆ ಸಿದ್ಧಳಿದ್ದು ಇದಕ್ಕೆ ಸಂಬಂಧಿಸಿದಂತೆ ರಾಜ್ಯ,ಜಿಲ್ಲಾ,ತಾಲೂಕಿನ ಎಲ್ಲ ನಾಯಕರ ಸಂಪರ್ಕದಲ್ಲಿದ್ದೇನೆ ಖಂಡಿತವಾಗಿ ನನಗೆ ಟಿಕೆಟ್ ನೀಡುತ್ತಾರೆ ಎನ್ನುವ ಭರವಸೆ ನನಗಿದೆ ಎಂದು ತಿಳಿಸಿದರು.
ಈಗಾಗಲೇ ಮಾನ್ವಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಆಕಾಂಕ್ಷಿಗಳಾಗಿ ಮಾಜಿ ಶಾಸಕ ಗಂಗಾಧರ ನಾಯಕ, ಮಾನಪ್ಪ ನಾಯಕ, ಅಯ್ಯಪ್ಪ ನಾಯಕ ಈ ಮೂರು ಜನರು ಬಿಜೆಪಿ ಟಿಕೆಟಿಗಾಗಿ ಬಾರಿ ಕಸರತ್ತು ನಡೆಸಿದ್ದು ಇವರುಗಳ ಮಧ್ಯೆ ಮಹಿಳೆಯರಿಗೆ ಟಿಕೆಟ್ ನೀಡುವಂತೆ ಈ ಮಹಿಳಾ ಉರಿಯಾಳುಗಳು ಟಿಕೆಟಿಗಾಗಿ ಶತಪ್ರಯತ್ನ ನಡೆಸಿದ್ದು ರಾಜ್ಯದ ಬಿಜೆಪಿ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತದೆ ಎನ್ನುವುದನ್ನು ಇನ್ನೂ ಎರಡು-ಮೂರು ದಿನಗಳವರೆಗೆ ಕಾಯ್ದು ನೋಡಬೇಕಾಗಿದೆ.