ಮಾನಸಿಕ ಶುಧ್ದಿಗಾಗಿ ಪೂಜೆ – ಡಾ.ಕಲಾವತಿ


ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.15: ಮಾನವ ತನ್ನ ಬೇಡಿಕೆಗಳನ್ನು ಹೊಂದಲು ಮಾರುಕಟ್ಟೆಗೆ ತೆರಳುವಂತೆ ಮಹತ್ತರಗಳಿಗೆ, ಲಾಭಗಳಿಗಾಗಿ ಗುಡಿಗುಂಡಾರಗಳಿಗೆ ತೆರಳುತ್ತಾನೆ. ಅಲ್ಪ ಕಾಣಿಕೆಯನ್ನು ದೇವರಿಗೆ ನೀಡಿ ಮಹತ್ ಕೋರಿಕೆಯನ್ನು ಮುಂದಿಡುತ್ತಾನೆ. ಇಲ್ಲಿ ದೇವರು ವ್ಯಾಪಾರಿಯಾಗಿದ್ದು ಭಕ್ತನ ಬೇಡಿಕೆಗಳನ್ನು ಪೂರೈಸುವ ಧಾತನಾಗುತ್ತಾನೆ. ದೇವರಲ್ಲಿ ಕಾಡುವ ದೇವರು, ನೀಡುವ ದೇವರೆಂದು ಕಂಡುಕೊಂಡ ಭಕ್ತ, ಕಾಡುವ ದೇವರಿಗೆ ಬಲಿಯನ್ನು, ನೀಡುವ ದೇವರಿಗೆ ಆಕರ್ಷಣೀಯ ಕಾಣಿಕೆಗಳನ್ನು ನೀಡುತ್ತಾನೆಂದು ಮೋಕಾ ಗ್ರಾಮದ ಸರ್ಕಾರಿ ಪ್ರಥಮ ಧರ್ಜೆ ಕಾಲೇಜಿನ ಸಹ ಪ್ರಾದ್ಯಾಪಕಿ, ಕನ್ನಡ ವಿಭಾಗದ ಮುಖ್ಯಸ್ಥರು ಆದ ಡಾ. ಕಲಾವತಿ ಅಭಿಪ್ರಾಯಪಟ್ಟರು.
ಬಳ್ಳಾರಿಯ ಗಾಂದಿನಗರದಲ್ಲಿರುವ ಶ್ರೀ ಗುರು ತಿಪ್ಪೇರುದ್ರ ಪ್ರೌಡಶಾಲೆಯಲ್ಲಿ ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ 278ನೇ ಮಹಾಮನೆ ಲಿಂ. ಬಸಯ್ಯ ವೀರಭದ್ರಯ್ಯ ಹೊಸೂರ್ ಮಠ್ ದತ್ತಿ, ಲಿಂ. ಕೊಟ್ರಯ್ಯ ವೀರಭದ್ರಯ್ಯ ಹೊಸೂರ್ ಮಠ್ ದತ್ತಿ, ಲಿಂ. ಶ್ರೀಮತಿ ತುಳಜಮ್ಮ ಲಕ್ಷ್ಮಪ್ಪ ಜಾಧವ್ ದತ್ತಿ ಮತ್ತು ಲಿಂ. ಕೆ.ಬಿ ಹನುಮಂತರಾಯ ದತ್ತಿ ಕಾರ್ಯಕ್ರಮದಲ್ಲಿ “ ಶರಣರ ಕಲ್ಪನೆಯಲ್ಲಿ ಪೂಜೆ” ಎಂಬ ವಿಷಯ ಕುರಿತು ಮಾತನಾಡುತ್ತಾ ಶರಣರು ದೇವರನ್ನು ಹೊರಗೆ ಕಲ್ಲು, ಮಣ್ಣು, ಲೋಹಗಳಲ್ಲಿ ಕಾಣಲಿಲ್ಲ ತಮ್ಮೊಳಗೆ ತಾವೇ ದೈವವನ್ನು ದರ್ಶಿಸಿದರು. ದೇಹವನ್ನು ದೇವಾಲಯದಂತೆ ಪವಿತ್ರೀಕರಿಸಿಕೊಂಡು, ಮಾನಸಿಕ ಶುದ್ದತೆಯನ್ನು ಕಾಯ್ದುಕೊಳ್ಳುವುದೇ ನಿಜವಾದ ಪೂಜೆ. ಕೊಡುಕೊಳ್ಳುವ ವ್ಯವಹಾರ ಪೂಜೆಯಲ್ಲ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಗುರು ತಿಪ್ಪೇರುದ್ರ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಎಸ್.ಎನ್ ರುದ್ರಪ್ಪ, ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯೇ ಪೂಜೆಯಾಗಬೇಕು ನೀವು ಓದದೇ ದೇವರಲ್ಲಿ ಉತ್ತೀರ್ಣನನ್ನಾಗಿಸು ಎಂದು ಬೇಡಿದರೆ ದೇವರ ಓದಿ ಪರೀಕ್ಷೆ ಬರೆಯುವನೇ ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿ, ಶರಣರು ತಿಳಿಸಿದಂತೆ ಕಾಯಕವೇ ಪೂಜೆಯಾಗಬೇಕು, ಕಾಯಕದಲ್ಲಿಯೇ ದೇವರನ್ನು ದರ್ಶಿಸಬೇಕು ಎಂದು ಹೇಳಿದರು.
ಶ್ರೀ ಗುರು ತಿಪ್ಪೇರುದ್ರ ಶಿಕ್ಷಣ ಸಂಸ್ಥೆಯ ಕಾರ್ಯಧರ್ಶಿ ಹಾಗು ಮಹಾವಿದ್ಯಾಲಯದ ಪ್ರಾಚಾರ್ಯರಾದ ಜಿ ನಾಗರಾಜ್‍ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ತಮ್ಮ ಓದಿನಲ್ಲಿ ಸಾಧನೆಯನ್ನು ಪ್ರದರ್ಶಿಸಿ ದೇವರ ಒಲುಮೆಯನ್ನು ಪಡೆಯಬೇಕು. ದೇವಾಲಯ ಪುಣ್ಯಕ್ಷೇತ್ರ ಮುಂತಾದವುಗಳನ್ನು ಸುತ್ತಿ ಅಲೆಯುವುದಲ್ಲ ಎಂದರು.
ವಿದ್ಯಾರ್ಥಿನಿ ಚಿನ್ಮಯಿ ವಚನ ಪ್ರಾರ್ಥನೆ ಮಾಡಿದರು, ಶಿಕ್ಷಕಿ ಸೌಮ್ಯ ಸ್ವಾಗತ ಕೋರಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಪರಿಷತ್ ಅದ್ಯಕ್ಷ ಕೆ.ಬಿ ಸಿದ್ದಲಿಂಗಪ್ಪ ದತ್ತಿ ಪರಿಚಯಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಶಾಲೆಯ ನಿರ್ದೇಶಕಿ ಶ್ರೀಮತಿ ಮಂಜುಳ, ಮುಖ್ಯಗುರುಗಳಾದ ಇಲಿಯಾಸ್ ಉಪಸ್ಥಿತರಿದ್ದರು. ಅತಿಥಿಗಳನ್ನು ಸನ್ಮಾನಿಸುವ ಮೂಲಕ ಕಾರ್ಯಕ್ರಮ ಮಂಗಳವಾಯಿತು.