ಮಾನಸಿಕ ರೋಗ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ

ರಾಯಚೂರು,ಅ.೧೧- ಪ್ರಸ್ತುತ ದಿನಮಾನಗಳಲ್ಲಿ ಆಧುನಿಕ ತಂತ್ರಜ್ಞಾನದಿಂದ ಜನರು ಸಂಬಂಧಗಳನ್ನು ಮರೆತು ಹೋಗುತ್ತಿದ್ದು, ಇದರಿಂದ ಮಾನಸಿಕ ಖಿನ್ನತೆಗೂ ಒಳಗಾಗುತ್ತಿದ್ದಾರೆ ಆದ್ದರಿಂದ ಮಾನಸಿಕ ರೋಗ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರನ್ನು ಸಂಪರ್ಕಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದಯಾನಂದ ಎಂ.ಬೇಲೂರೆ ಅವರು ಹೇಳಿದರು.
ಅವರು ಅ.೧೧ರ(ಬುಧವಾರ) ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೃಷ್ಣಾ ಸಭಾಂಗಣದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಬಕಾರಿ ಇಲಾಖೆ, ರಿಮ್ಸ್, ನವೋದಯ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಭಾರತೀಯ ಮನೋವೈದ್ಯಕೀಯ ಸಂಘ ಕರ್ನಾಟಕ ಶಾಖೆಯ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ದೈನಂದಿನ ಕೆಲಸದ ಒತ್ತಡ, ಕೌಟುಂಬಿಕ ಕಾರಣಗಳು ಹಾಗೂ ಆರ್ಥಿಕ ಸಮಸ್ಯೆಗಳಿಗೆ ಒಳಗಾಗಿ ಮಾನಸಿಕ ಖಿನ್ನತೆ ಹೆಚ್ಚಾಗುತ್ತಿದ್ದು, ಇದರಿಂದ ವ್ಯಕ್ತಿಯು ಆತ್ಮಹತ್ಯೆಯಂತಹ ಅಪರಾದಗಳಿಗೆ ಮುಂದಾಗುತ್ತಾನೆ ಆದ್ದರಿಂದ ಯಾವುದೇ ಸಮಸ್ಯೆಗಳು ಇದ್ದಲ್ಲಿ ವೈಯಕ್ತಿಕ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಮಾನಸಿಕ ವೈದ್ಯರನ್ನು ಸಂಪರ್ಕಿಸಿ ಸಮಾಲೋಚನೆ ಮಾಡಿಕೊಳ್ಳುವುದು ಉತ್ತಮ ಎಂದು ತಿಳಿಸಿದರು.
ಇದೇ ವೇಳೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಲಬುರಗಿ ವಿಭಾಗೀಯ ನಿರ್ದೇಶಕ ಡಾ.ಶರಣಪ್ಪ ಅವರು ಮಾತನಾಡಿ, ಮಾನಸಿಕ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಮತ್ತು ಇಲಾಖೆಯಿಂದ ಮಾನಸಿಕ ರೋಗ ಲಕ್ಷಣ ಹೊಂದಿರುವ ವ್ಯಕ್ತಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು ಮಾತನಾಡಿ, ಇಂದಿನ ದಿನಮಾನಗಳಲ್ಲಿ ಮಕ್ಕಳ ಮೇಲೆ ಹೆಚ್ಚಿನ ಶಿಕ್ಷಣದ ಒತ್ತಡ ಹೇರುವುದರಿಂದ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ ಅದೇ ರೀತಿ ಮನುಷ್ಯನಿಗೆ ಸಾಮಾನ್ಯವಾಗಿ ಆರ್ಥಿಕ ಒತ್ತಡ ಸೇರಿದಂತೆ ಹಲವು ಅನುವಂಶೀಯ ಕಾಯಿಲೆಗಳಿಂದ ಮಾನಸಿಕ ರೋಗಕ್ಕೆ ಗುರಿಯಾಗುತ್ತಾನೆ ಅಂತಹ ಸಮಸ್ಯೆಗಳು ಕಂಡುಬಂದಲ್ಲಿ ಮಾನಸಿಕ ಆರೋಗ್ಯ ತಂಡದೊಂದಿಗೆ ಸಮಾಲೋಚನೆ ನಡೆಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಹಿರಿಯ ಮನೋವೈದ್ಯ ಡಾ.ಮನೋಹರ.ವೈ.ಪತ್ತಾರ ಅವರು ಮಾತನಾಡಿ, ಮಾನವ ಹಕ್ಕು ಹಾಗೂ ಮಾನಸಿಕ ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಮಾನಸಿಕ ಆರೋಗ್ಯ ಬಿಗಡಾಯಿಸಿದಾಗ ವ್ಯಕ್ತಿಯು ಮಾನವ ಹಕ್ಕುಗಳ ಉಲ್ಲಂಘನೆಗೆ ಮುಂದಾಗುತ್ತಾನೆ ಅದೇ ರೀತಿ ಮಾನವ ಹಕ್ಕುಗಳನ್ನು ವ್ಯಕ್ತಿಯಿಂದ ಕಸಿದುಕೊಂಡಾಗ ಆತ ಮಾನಸಿಕ ರೋಗಕ್ಕೆ ತುತ್ತಾಗುತ್ತಾನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯಭಾಸ್ಕರ, ಜಿಲ್ಲಾ ಮಾನಸಿ ಆರೋಗ್ಯ ಕಾರ್ಯಕ್ರಮದ ಅನುಷ್ಠಾನಾಧಿಕಾರಿ ಡಾ.ಯಶೋಧ.ಎನ್, ನವೋದಯ ವೈದ್ಯಕೀಯ ಮಹಾವಿದ್ಯಾಲಯದ ಉಪನ್ಯಾಸಕಿ ಡಾ.ಲಾವಣ್ಯ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.