ಮಾನಸಿಕ ನೆಮ್ಮದಿ, ಆರೋಗ್ಯಕ್ಕೆ ಧ್ಯಾನ ಅತ್ಯಗತ್ಯ

ಹುಬ್ಬಳ್ಳಿ,ಜ5: ಮಾನಸಿಕ ನೆಮ್ಮದಿ, ಸಮಯದ ಸದ್ಭಳಕೆಗಾಗಿ ಹಾಗೂ ಆರೋಗ್ಯಕ್ಕಾಗಿ ಪ್ರತಿನಿತ್ಯ ಧ್ಯಾನ ಮಾಡುವುದು ಅತ್ಯಗತ್ಯ ಎಂದು ಪಿರಾಮಿಡ್ ಸ್ಪಿರುಚ್ಯುವಲ್ ಸೊಸೈಟೀಸ್ ಮೂವಮೆಂಟ್‍ನ ಬ್ರಹ್ಮರ್ಷಿ ಸುಭಾಸ್ ಪತ್ರೀಜಿ ಹೇಳಿದರು.
ನಗರದ ನೃಪತುಂಗ ಬೆಟ್ಟದ ಬಳಿಯಿರುವ ಪಿರಾಮಿಡ್ ಧ್ಯಾನ ಮಂದಿರದಲ್ಲಿ ಆಯೋಜಿಸಿದ್ದ ಧ್ಯಾನ, ಸತ್ಸಂಗ, ಸಂಭ್ರಮದಲ್ಲಿ ಮಾತನಾಡಿದ ಅವರು, ಧ್ಯಾನದಿಂದಾಗಿ ಚಂಚಲ ಮನಸ್ಸಿನಿಂದ ಮುಕ್ತಿಗೊಳ್ಳಬಹುದಾಗಿದ್ದು, ಇದರಿಂದ ಸರ್ವಸ್ವ ಪಡೆಯುವುದರ ಜೊತೆಗೆ ಕಾಯಿಲೆಗಳಿಂದ ದೂರ ಇರಬಹುದಾಗಿದೆ ಎಂದು ತಿಳಿಸಿದರು.
ಧ್ಯಾನ ಕೇವಲ ಮನೆಯಲ್ಲಿಯೇ ಸರಳವಾಗಿ ಮಾಡಬಹುದಾಗಿದ್ದು, ಕಣ್ಣು ಮುಚ್ಚಿ ಕುಳಿತು ಕೈ ಕಾಲುಗಳನ್ನು ಜೋಡಿಸಿ ಉಸಿರಾಟ ಮೇಲೆ ನಿಗಾವಹಿಸಿ ಕೊಡುವುದೆ ಧ್ಯಾನವಾಗಿದೆ.
ಧ್ಯಾನದಿಂದ ಮುಕ್ತಿ ದೊರೆಯುತ್ತಿದೆ. ಎಲ್ಲದಕ್ಕೂ ಆದಿಯಾಗಿರುವ ಧ್ಯಾನವನ್ನು ಪ್ರತಿಯೊಬ್ಬರು ಜೀವನದಲ್ಲಿ ನಿತ್ಯ ಕನಿಷ್ಠ ಅರ್ಧಗಂಟೆಯಾದರೂ ಅಳವಡಿಸಿಕೊಂಡರೆ ಉತ್ತಮ ಎಂದರು.
ಪಿರಾಮಿಡ್ ಧ್ಯಾನಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸಾಹುಕಾರ ಮಾತನಾಡಿ, ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರೂ ನಿರ್ದಿಷ್ಟ ಸಮಯವಿಲ್ಲದೆ ಕನಿಷ್ಟ ಮನಸ್ಥಿತಿಗೆ ತಲುಪಿದ್ದೇವೆ. ಇರುವ ಸಮಯದಲ್ಲಿಯೇ ಅಲ್ಪ ಸಮಯವನ್ನು ಧ್ಯಾನ ಮತ್ತು ಯೋಗಕ್ಕೆ ಮೀಸಲಿಡಬೇಕು ಎಂದ ಅವರು ನಮ್ಮ ಪೂರ್ವಜರ ಧೀರ್ಘಾಯುಷ್ಯದ ಹಿಂದೆ ಧ್ಯಾನದ ಕೊಡುಗೆ ಅಪಾರವಿದೆ ಎಂದರು.
ಕಾರ್ಯಕ್ರಮದಲ್ಲಿ ಮತ್ತೋರ್ವ ಉದ್ಯಮಿ ವಿನಾಯಕ ಆಕಳವಾಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಧ್ಯಾನದ ಕುರಿತು ಸೂಕ್ತ ಮಾಹಿತಿ ಕೊರತೆಯಿಂದಾಗಿ ಯುವ ಪೀಳಿಗೆ ಇದರಿಂದ ದೂರವಾಗುತ್ತಿರುವುದು ಅಸಮಾಧಾನಕರ ಎಂದಿದ್ದಾರೆ.
ಒತ್ತಡ ನಿವಾರಣೆಗೆ ಧ್ಯಾನ ಉತ್ತಮ ಸಾಧನೆಯಾಗಿದ್ದು, ಇಲ್ಲಿನ ಪಿರಾಮಿಡ್ ಧ್ಯಾನ ಮಾಡಲಿಕ್ಕೆ ದೊಡ್ಡ ಕೊಡುಗೆಯಾಗಿದೆ. ಇದನ್ನು ಪ್ರತಿಯೊಬ್ಬರೂ ಸದ್ಭಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಧ್ಯಾನ ಶಿಕ್ಷಕಿ ವಿಶಾಲಾಕ್ಷಿ ಆಕಳವಾಡಿ, ನೀಲಕಂಠ ಆಕಳವಾಡಿ, ಚನ್ನು ಹೊಸಮನಿ, ವಿಜಯಕುಮಾರ ಶೆಟ್ಟರ್, ಬಸವರಾಜ ಹೊಸಮನಿ, ಜೀವನ ವಸ್ತ್ರದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.