ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಹೆಚ್ಚಳ

ಕಾಗವಾಡ : ನ.23:ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ಯುವಕರು ಒಂದಿಲ್ಲ ಒಂದು ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಯುವಕರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿಗೆ ಒಳಗಾಗುತ್ತಿದ್ದಾರೆ. ಆ ಯುವಕರನ್ನು ಮಾನಸಿಕ ಒತ್ತಡದಿಂದ ಹೊರತರಲು ತಾಸಗಾಂವದ ಸರ್ಕಾರಿ ಮಹಿಳಾ ಕಾಲೇಜು ಮಾರ್ಗದರ್ಶನ ಶಿಬಿರವನ್ನು ಏರ್ಪಡಿಸಿದ್ದು, ಸಮಯೋಚಿತವಾಗಿದೆ ಎಂದು ಮಿರಜದ ನಿರ್ಮಲ ಹಾಸ್ಪಿಟಲ್ ವ್ಯಸನಮುಕ್ತಿ ಕೇಂದ್ರದ ವೈದ್ಯಾಧಿಕಾರಿ ಡಾ. ಚಂದ್ರಶೇಖರ ಹಳಿಂಗಳಿ ಹೇಳಿದರು.
ಅವರು ಸೋಮವಾರ ದಿ. 21 ರಂದು ತಾಸಗಾಂವ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಯುವಕರಿಗಾಗಿ ಏರ್ಪಡಿಸಲಾಗಿದ್ದ ಮಾರ್ಗದರ್ಶನ ಶಿಬಿರವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಇಂದಿನ ಯುವಕರು ಯಾವುದೇ ಮಾನಸಿಕ ಒತ್ತಡಕ್ಕೆ ಒಳಗಾಗದೇ ಒತ್ತಡ ಮುಕ್ತರಾಗಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧನೆ ಮಾಡಿ ಗುರಿ ಮುಟ್ಟುವುದು ಅತ್ಯವಶ್ಯವಾಗಿದೆ. ಕಾರಣ ಜೀವನದಲ್ಲಿ ಎಷ್ಟೇ ಸಮಸ್ಯೆಗಳು ಎದುರಾದರು ಧೈರ್ಯದಿಂದ ಎದುರಿಸಿ ಸಫಲರಾಗಿ ಎಂದು ಕಿವಿಮಾತು ಹೇಳಿದರು.
ಈ ಸಮಯದಲ್ಲಿ ಪ್ರಾಚಾರ್ಯ ಸಂಜಯ ಪರದೇಶಿ, ಉಪ ಪ್ರಾಚಾರ್ಯ ವ್ಹಿ.ಎಂ. ಕುಲಕರ್ಣಿ, ಡಾ. ಶಾಲ್ಮಲಾ ಕುಲಕರ್ಣಿ ಸೇರಿದಂತೆ ವಿದ್ಯಾಲಯದ ಪ್ರಥಮ ಹಾಗೂ ದ್ವೀತಿಯ ವರ್ಗದ ವಿದ್ಯಾರ್ಥಿಗಳು ಶಿಕ್ಷಕರು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.