ಮಾನಸಿಕ ಒತ್ತಡ ನಿವಾರಣೆಗೆ ಕ್ರೀಡೆ ಅವಶ್ಯಕ: ಶಾಸಕ ರಹೀಂಖಾನ್

ಬೀದರ್: ಜ.12:ಎರಡು ದಿನಗಳ ರಾಜ್ಯ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆ ನಗರದಲ್ಲಿ ಬುಧವಾರ ಆರಂಭಗೊಂಡಿತು.

ಶಾಸಕ ರಹೀಂಖಾನ್ ಕ್ರೀಡಾಕೂಟ ಉದ್ಘಾಟಿಸಿ, ನೌಕರರು ಮಾನಸಿಕ ಒತ್ತಡದಿಂದ ಹೊರ ಬರಲು ಕ್ರೀಡೆಗಳು ಅವಶ್ಯಕವಾಗಿವೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ಮಾತನಾಡಿ, ಜಿಲ್ಲೆಯ ನೌಕರರು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು. ರಾಜ್ಯಮಟ್ಟದ ಕ್ರೀಡಾಕೂಟದಲ್ಲೂ ಪ್ರತಿಭೆ ಪ್ರದರ್ಶಿಸಬೇಕು. ಈ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಸಲಹೆ ಮಾಡಿದರು.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ ಮಾತನಾಡಿ, ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಸದೃಢತೆ ಕಾಯ್ದುಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ, ನೌಕರರ ಸಂಘದ ಪದಾಧಿಕಾರಿಗಳು ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ನೌಕರರಲ್ಲಿ ಇರುವ ಕ್ರೀಡಾ ಪ್ರತಿಭೆಯನ್ನು ಪ್ರೋತ್ಸಾಹಿಸಲು ಪ್ರತಿ ವರ್ಷ ಜಿಲ್ಲಾಮಟ್ಟದ ಕ್ರೀಡಾಕೂಟ ಹಮ್ಮಿಕೊಳ್ಳಲಾಗುತ್ತಿದೆ. ನೌಕರರು ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಕ್ರೀಡಾ ಪ್ರೇಮ ಮೆರೆಯಬೇಕು ಎಂದು ಹೇಳಿದರು.

ಸರ್ಕಾರಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಜು ಸೂರ್ಯವಂಶಿ ಪ್ರತಿಜ್ಞಾ ವಿಧಿ ಬೋಧಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕ ಕಿಶೋರಬಾಬು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಅಮೃತ ಎನ್. ಅಷ್ಟಗಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ನೀಲಕಂಠಪ್ಪ ಎಸ್, ನೌಕರರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಡಾ. ವೈಶಾಲಿ, ಪಾಂಡುರಂಗ ಬೆಲ್ದಾರ್, ಸಂಘಟನಾ ಕಾರ್ಯದರ್ಶಿಗಳಾದ ಎಂ.ಎ. ಸತ್ತಾರ್, ಸುಧಾಕರ ಶೇರಿಕಾರ್, ಸಹ ಕಾರ್ಯದರ್ಶಿ ಮನೋಹರ ಕಾಶಿ, ಜಂಟಿ ಕಾರ್ಯದರ್ಶಿ ಸಾವಿತ್ರಮ್ಮ, ಕ್ರೀಡಾ ಕಾರ್ಯದರ್ಶಿ ಸುಮತಿ ರುದ್ರಾ, ಗೌರವ ಸಲಹೆಗಾರರಾದ ಶಿವರಾಜ ಕಪಲಾಪುರೆ, ಶಿವಶಂಕರ ಟೋಕರೆ, ನಿರ್ದೇಶಕರಾದ ಸುನೀಲ್, ರಾಜಕುಮಾರ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ರಾಜಪ್ಪ ಪಾಟೀಲ, ನಾಗಶೆಟ್ಟಿ ಡುಮಣಿ, ಶಿವಕುಮಾರ ಘಾಟೆ, ರಾಜಕುಮಾರ ಬೇಲೂರೆ, ಲಿಂಗಾನಂದ ಮಹಾಜನ್, ಭೀಮಾಶಂಕರ ಆದೆಪ್ಪ, ಮಲ್ಲಿಕಾರ್ಜುನ ಮೇತ್ರೆ ಮೊದಲಾದವರು ಇದ್ದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಡಾ. ರಾಜಕುಮಾರ ಹೊಸದೊಡ್ಡೆ ನಿರೂಪಿಸಿದರು. ಗೌರವಾಧ್ಯಕ್ಷ ಬಸವರಾಜ ಜಕ್ಕಾ ವಂದಿಸಿದರು.


ಎರಡು ಸಾವಿರ ನೌಕರರು ಭಾಗಿ

ಬೀದರ್: ಜಿಲ್ಲಾಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಎರಡು ಸಾವಿರ ನೌಕರರು ಉತ್ಸಾಹದಿಂದ ಭಾಗವಹಿಸಿದರು.

ಒಳಾಂಗಣ ಕ್ರೀಡಾಂಗಣ ಹಾಗೂ ನೆಹರೂ ಕ್ರೀಡಾಂಗಣದಲ್ಲಿ ಕ್ರೀಡಾ ಸ್ಪರ್ಧೆಗಳು ಹಾಗೂ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಸಾಂಸ್ಕøತಿಕ ಸ್ಪರ್ಧೆಗಳು ನಡೆದವು.

ಮೊದಲ ದಿನ ನಡೆದ ಫುಟ್‍ಬಾಲ್, ವಾಲಿಬಾಲ್, ಥ್ರೋಬಾಲ್, ಕಬಡ್ಡಿ, ಶಾಟ್‍ಪಟ್, ಶಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಕೇರಂ, ಚೆಸ್, ಕುಸ್ತಿ, ವೇಟ್ ಲಿಫ್ಟಿಂಗ್, ಗಾಯನ ಸೇರಿ ವಿವಿಧ ಸ್ಪರ್ಧೆಗಳಲ್ಲಿ ನೌಕರರು ಆಸಕ್ತಿಯಿಂದ ಪಾಲ್ಗೊಂಡರು.

ನಿರ್ಣಾಯಕರಿಗೆ ಟೀ ಶರ್ಟ್ ಹಾಗೂ ಕ್ರೀಡಾಪಟುಗಳಿಗೆ ಟೊಪ್ಪಿಗೆ ವಿತರಿಸಲಾಯಿತು. ಕ್ರೀಡಾಪಟುಗಳಿಗೆ ಬೆಳಿಗ್ಗೆ ಉಪಾಹಾರ, ಚಹಾ, ಮಧ್ಯಾಹ್ನ ಊಟ ಹಾಗೂ ಸಂಜೆ ಚಹಾ ವ್ಯವಸ್ಥೆ ಮಾಡಲಾಗಿತ್ತು.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ನೇತೃತ್ವದ ತಂಡ ಕ್ರೀಡಾಕೂಟದ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಿತ್ತು.