ಮಾನಸಿಕ ಒತ್ತಡ ತಗ್ಗಿಸಲು ಚಿತ್ರಕಲೆ ಸಹಕಾರಿ

ದಾವಣಗೆರೆ: ಮನುಷ್ಯನಲ್ಲಿರುವ ಮಾನಸಿಕ ಒತ್ತಡ ತಗ್ಗಿಸಲು ಸಾಹಿತ್ಯ, ಸಂಗೀತ ಹಾಗೂ ಚಿತ್ರಕಲೆ ಸಹಕಾರಿಯಾಗಿದೆ ಎಂದು ಬ್ರಾಹ್ಮಣ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ನಳಿನಿ ಅಚ್ಯುತ್ ಅಭಿಪ್ರಾಯಪಟ್ಟರು.
ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಸಂಕಲನ ಚಿತ್ರಕುಟೀರದಲ್ಲಿ ಬುಧವಾರ ಸಂಕಲನ ಸಮೂಹ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ’ದೀಪ್ತಿ ಜೋಷಿಯವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ದೃಶ್ಯ ದರ್ಶನ’ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯ ದಿನನಿತ್ಯದ ಜೀವನದ ಜಂಜಾಟಳಿಂದ ಹೊರ ಬಂದು ನೆಮ್ಮದಿ ಪಡಿಯಲಿಕ್ಕಾಗಿ ಸಂಗೀತ, ಸಾಹಿತ್ಯ, ಚಿತ್ರಕಲೆಗಳ ಮೊರೆ ಹೋಗುತ್ತಾನೆ. ಅಲ್ಲದೆ, ಮನುಷ್ಯನಲ್ಲಿರುವ ಮಾನಸಿಕ ಒತ್ತಡವನ್ನು ತಗ್ಗಿಸಲು ಇವುಗಳು ಸಹಕಾರಿಯಾಗಿವೆ ಎಂದರು.
ಪೋಷಕರು ತಮ್ಮ ಮಕ್ಕಳನ್ನು ಕೇವಲ ರ್‍ಯಾಂಕ್ ಮತ್ತು ಅಂಕಗಳಿಕೆಗೆ ಮಾತ್ರ ಸೀಮಿತ ಗೊಳಿಸದೆ, ಅವರಲ್ಲಿರುವ ಸಾಹಿತ್ಯ, ಸಂಗೀತ, ಚಿತ್ರಕತೆಗಳಂತಹ ಸುಪ್ತ ಪ್ರತಿಭೆಗಳನ್ನು ಅನಾವರಣ ಗೊಳಿಸಲು ನೀರೆರೆದು ಪೋಷಿಸಬೇಕು ಎಂದು ಕಿವಿಮಾತು ಹೇಳಿದರು.
ಲೆಕ್ಕಪತ್ರ ಅಂಕಿ ಅಂಶಗಳ ಕೆಲಸದ ಒತ್ತಡಗಳ ಮದ್ಯೆ ಇರುವ ಕಲಾವಿದೆ ದೀಪ್ತಿ ಜೋಷಿಯಂತವರು ಕಲಾಕೃತಿಗೆ ಭಾವನೆ ಹಾಗೂ ಜೀವ ತುಂಬುವುದು ಬಹಳ ಕಷ್ಟದ ಕೆಲಸವಾಗಿದೆ. ಆದರೆ, ದೀಪ್ತಿ ಕುಂಚ ಹಿಡಿದು ಎಲ್ಲರ ಮನ ಮೆಚ್ಚುವಂತಹ ಚಿತ್ರಗಳನ್ನು ರಚಿಸಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಿಭೆ ಎಲ್ಲರಲ್ಲೂ ಇರುತ್ತದೆ. ಆದರೆ, ಅದನ್ನು ಅನಾವರಣ ಗೊಳಿಸಲು ಸೂಕ್ತ ವೇದಿಕೆ ಬೇಕಾಗುತ್ತದೆ. ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರ ತರಲು ಪೋಷಕರ ಪ್ರೋತ್ಸಾಹದ ಜೊತೆಗೆ ಶಿಕ್ಷಕರ ಸಹಕಾರ ಸಹ ಅವಶ್ಯವಾಗಿ ಬೇಕಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ದೃಶ್ಯ ಕಲಾ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಸಂತೋಷಕುಮಾರ ಕುಲಕರ್ಣಿ, ಪೋಷಕರು ಮಕ್ಕಳಿಗೆ ಕೇವಲ ಶೈಕ್ಷಣಿಕ ವ್ಯಾಸಂಗದ ಬಗ್ಗೆ ಹಾಗೂ ಡಾಕ್ಟರ್, ಇಂಜಿನಿಯರ್ ಆಗಬೇಕು ಎಂದಷ್ಟೇ ಒತ್ತಡ ಹೇರಬಾರದು. ಚಿತ್ರಕಲೆ, ಸಂಗೀತ ಸೇರಿದಂತೆ ಅವರಲ್ಲಿ ಅಡಗಿರುವ ಪಠ್ಯೇತ್ತರ ಚಟುವಟಿಕೆಗಳ ಪ್ರತಿಭಾ ಪ್ರದರ್ಶನಕ್ಕೆ ಆಸಕ್ತಿ ತೋರಬೇಕು. ಪ್ರತಿಭೆ ಚಿಗುರುವ ಸಮಯದಲ್ಲಿ ಅದನ್ನು ಚಿವುಟದೇ ಗುರುತಿಸಿ, ಪ್ರೋತ್ಸಾಹಿಸಬೇಕು ಎಂದರು.
ಚಿತ್ರ ಕಲಾವಿದೆ ದೀಪ್ತಿ ಜೋಷಿ ಮಾತನಾಡಿ, ನನಗೆ ಚಿತ್ರಕಲೆಯಲ್ಲಿ ಚಿಕ್ಕಂದಿನಿಂದಲೂ ಆಸಕ್ತಿ ಇತ್ತು. ನನ್ನ ಓದಿನ ಜೊತೆಗೆ ಚಿತ್ರಕಲೆಯನ್ನೂ ರೂಢಿಸಿಕೊಂಡೆನು. ನನ್ನ ಕಲಾ ಆಸಕ್ತಿಗೆ ನನ್ನ ತಂದೆ ತಾಯಿ ಸಹಕಾರ ನೀಡಿದರು. ನನ್ನ ಲೆಕ್ಕ ಪರಿಶೋಧನೆಯ ಕೆಲಸದ ಒತ್ತಡಗಳ ಮಧ್ಯೆಯೂ ಸಹ ಚಿತ್ರಕಲೆ ಕಡೆಗೆ ಗಮನ ಹರಿಸುವುದರಿಂದ ನನ್ನ ಮನಸ್ಸಿಗೆ ಉಲ್ಲಾಸ ಸಿಗುತ್ತದೆ ಹಾಗೂ ಮನಸ್ಸಿನ ಒತ್ತಡಗಳಿಗೆ ವಿರಾಮ ಹಾಡಿದಂತಾಗಿದೆ. ಹೊಸದನ್ನು ಕಲಿಯಲು ಆಸಕ್ತಿ ಇರುವ ಮಕ್ಕಳಿಗೆ ಪೋಷಕರು, ಶಿಕ್ಷಕರು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ದೃಶ್ಯ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರವೀಂದ್ರ ಎಸ್.ಕಮ್ಮಾರ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ, ಕಲಾವಿದ ರವೀಂದ್ರ ಅರಳಗುಪ್ಪಿ, ಸಂಲನ ಸಂಸ್ಥೆಯ ಕಾರ್ಯದರ್ಶಿ ಎಂ.ಜಿ.ಉಷಾ, ದತ್ತಾತ್ರೇಯ ಭಟ್, ಚಿತ್ರ ಕಲಾವಿದೆ ದೀಪ್ತಿ ಜೋಷಿ ಪೋಷಕರಾದ ರಘು ಜೋಷಿ, ಸುಶೀಲಾ ಜೋಷಿ ಸೇರಿದಂತೆ ಇತರರು ಇದ್ದರು