ಮಾನಸಿಕ ಆರೋಗ್ಯ, ಹಸಿರು ಪರಿಸರ ರಕ್ಷಣೆ ಮತ್ತು ನೀರಿನ ಸದ್ಬಳಕೆಗೆ ಬಗ್ಗೆ ಜಾಗೃತಿ ಮುಖ್ಯ: ಕಿರಣ್ ಪ್ರಸಾದ್ ರೈ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ. 25:- ನಮ್ಮ ಸುತ್ತಮುತ್ತಲಿನ ಪರಿಸರ ರಕ್ಷಣೆ ಹಾಗೂ ನೀರಿ ಸದ್ಬಳಕೆ ಮಾಡಿಕೊಳ್ಳಲು ಮೊದಲು ಮಾನಸಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ರೋಟರಿ 3181ರ ಮೆಡಲ್ ಆರೋಗ್ಯ ಮುಖ್ಯಸ್ಥ ರೋ. ಕಿರಣ್ ಪ್ರಸಾದ್ ರೈ ತಿಳಿಸಿದರು.
ನಗರದ ಜೆಎಸ್‍ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ರೋಟರಿ ಜಿಲ್ಲೆ 3181ರ ಮುಖ್ಯಸ್ಥರು, ರೋಟರಿ ಸಂಸ್ಥೆ, ರೋಟರಿ ಸಿಲ್ಕ್‍ಸಿಟಿ ಹಾಗೂ ಜೆಎಸ್‍ಎಸ್ ಮಹಿಳಾ ಕಾಲೇಜಿನ ಸಹಯೋಗದಲ್ಲಿ ನಡೆದ ಮಾನಸಿಕ ಆರೋಗ್ಯ ನೀರಿನ ಸದ್ಬಳಕೆ ಮತ್ತು ಹಸಿರು ಉಳಿಸುವ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೋಟರಿ ಜಿಲ್ಲೆ 3181ರಿಂದ ವಲಯ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು, ಕುಂದೋಳ ಗಣೇಶ್ ಅವರ ಜಾದೂ ಮೂಲಕ ಪರಿಸರ ಸಂರಕ್ಷಣೆ ನೀರು ಸದ್ಬಳಕೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇತ್ತಿಚಿನ ದಿನಗಳಲ್ಲಿ ನೀರು ಎಷ್ಟು ಮುಖ್ಯ ಎಂದು ಎಲ್ಲರಿಗೂ ಅರಿವಾಗುತ್ತಿದೆ. ಹೀಗಾಗಿ ಪರಿಸರ ಸಂರಕ್ಷಣೆ ಮಾಡುವ ರೋಟರಿ ಅಭಿಯಾನಕ್ಕೆ ಎಲ್ಲರು ಕೈಜೋಡಿಸಬೇಕು. ಗಿಡಗಳನ್ನು ನೆಟ್ಟು ಬೆಳೆಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಇದಕ್ಕು ಮಿಗಲಾಗಿ ನಮ್ಮ ಮಾನಸಿಕ ಆರೋಗ್ಯವನ್ನು ವೃದ್ದಿಸಿಕೊಂಡರೆ ಎಲ್ಲವು ಸಾಧ್ಯವಾಗುತ್ತದೆ ಎಂದರು.
ರೋಟರಿ ಸಹಾಯಕ ಗೌರ್ನರ್ ಆರ್. ಪ್ರಕಾಶ್ ಮಾತನಾಡಿ, ರೋಟರಿ 3181ರ ವಲಯದ ಎಲ್ಲಾ ಗೌರ್ನರ್‍ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ. ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಪರಿಸರ ಸಂರಕ್ಷಣೆ. ನೀರಿನ ಸದ್ಬಳಕೆ ಕುರಿತು ಜಾಗೃತಿ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ಜೆಎಸ್‍ಎಸ್ ಕಾಲೇಜು ಕ್ಯಾಂಪಸ್ ನಡೆಸಿದೆ. ನಿಮ್ಮೆಲ್ಲರ ಆಶಯದ ಜೊತೆಗೆ ನಾವು ಸಹ ಕೈ ಜೋಡಿಸಿ ಪರಿಸರ ಸಂರಕ್ಷಣೆಯಲ್ಲಿ ಬದ್ದರಾಗಿದ್ದೇವೆ ಎಂದರು.
ಜಾದುಗಾರರಾದ ಕುಂದೋಳ್ ಗಣೇಶ್ ಅವರು ಜಾದೂ ಮೂಲಕ ನೀರಿನ ಸಂರಕ್ಷಣೆ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ದಿಸಿಕೊಳ್ಳುವ ಬಗ್ಗೆ ಪ್ರದರ್ಶನ ನೀಡಿ, ಆತ್ಮಹತ್ಯೆ ತಡೆಯಲು ಅನುಸರಿಸಬೇಕಾದ ಕ್ರಮವನ್ನು ಮಾನಸಿಕ ಶಕ್ತಿಯನ್ನು ವೃದ್ದಿಸಿಕೊಳ್ಳುವ ಕುರಿತು ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಛೇರ್ಮನ್ ಆಫ್ ಪ್ರಾಜೆಕ್ಟ್ ರೋ. ಸತೀಶ್ ಬೋಲಾರ್, ಕಾಲೇಜಿನ ಪ್ರಾಂಶುಪಾಲ ಡಾ. ಮಹದೇವಸ್ವಾಮಿ, ರೋ. ಶುಭೋದಯ ಕುಮಾರ್ ದಾಸ್, ಜೋನ್ 2ರ ಸಹಾಯಕ ಗೌರ್ನರ್ ವಿನೋದ್ ಗುರುವಾ, ಜೋನ್ 3ರ ಸಹಾಯಕ ಗೌರ್ನರ್ ರೊ. ಶಿವಾನಿ ಬಾಳಿಗ, ರೋ. ಪಿ.ಡಿ. ಶೆಟ್ಟಿ, ನರರೋಗ ತಜ್ಞರಾದ ಡಾ. ಅನಂತನ್, ರೋಟರಿ ಅಧ್ಯಕ್ಷ ಚಂದ್ರಪ್ರಭಜೈನ್, ಸಿಲ್ಕ್ ಸಿಟಿ ಅಧ್ಯಕ್ಷ ಅಕ್ಷಯಕುಮಾರ್, ಕಾರ್ಯದರ್ಶಿ ಅಬ್ದುಲ್ ಅಜೀಜ್ (ದೀನಾ), ಕಾರ್ಯದರ್ಶಿ ವಿನೋಧ್, ಜೆಎಸ್‍ಎಸ್ ಪಿಆರ್‍ಓ ಆರ್.ಎಂ.ಸ್ವಾಮಿ. ರೋಟರಿಯನ್‍ಗಳಾದ ಜಿ.ಆರ್. ಆಶ್ವಥ್‍ನಾರಾಯಣ್, ಶ್ರೀನಿವಾಸ್‍ಶೆಟ್ಟಿ ಮೊದಲಾದವರು ಇದ್ದರು.