ಮಾನಸಿಕ ಆರೋಗ್ಯ ಪ್ರಾಮುಖ್ಯತೆಗೆ ಸಲಹೆ

ದೈಹಿಕ ಆರೋಗ್ಯಕ್ಕೆ ನೀಡುವ ಪ್ರಾಮುಖ್ಯವನ್ನು ಸಮಾಜ ಮಾನಸಿಕ ಆರೋಗ್ಯಕ್ಕೆ ನೀಡುತ್ತಿಲ್ಲ. ದೇಶದಲ್ಲಿ ಶೇ.೧೦ರಿಂದ ೧೨ರಷ್ಟು ಮಂದಿ ಮಾನಸಿಕ ರೋಗಗಳಿಂದ ಬಳಲುತ್ತಿದ್ದಾರೆ. ಶೇ.೧ರಷ್ಟು ಜನರಲ್ಲಿ ತೀವ್ರತರ ಸಮಸ್ಯೆ ಇದೆ. ಶೇ.೩ರಷ್ಟು ಮಂದಿ ಆಸ್ಪತ್ರೆಯಲ್ಲಿದ್ದು, ಶೇ.೯೭ ಮಂದಿ ಹೊರಗಿದ್ದಾರೆ. ಇಂತಹವರಿಗೆ ಅರಿವು ಮೂಡಿಸಬೇಕಿದೆ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರದ ಮಾರ್ಗದರ್ಶಕ ಎನ್.ಕುಮಾರ್ ತಿಳಿಸಿದರು.
ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ನ್ಯಾಯಾಂಗ ಇಲಾಖೆಯಿಂದ ದೇವರಾಜ ಅರಸು ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯದ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಮನುಷ್ಯ ತನ್ನ ಭಾವನೆ, ಆಲೋಚನೆ ಹಾಗೂ ವರ್ತನೆಗಳಲ್ಲಿ ವ್ಯತ್ಯಾಸವಾದಾಗ ಅದನ್ನು ವ್ಯಕ್ತಪಡಿಸಲು ಹಿಂಜರಿಯುತ್ತಾನೆ. ಸಮಾಜ ತನ್ನನ್ನು ಕೀಳಾಗಿ ಹಾಗೂ ತಾರತಮ್ಯದಿಂದ ನೋಡಬಹುದು ಎಂಬ ಕಾರಣಕ್ಕೆ ಮಾನಸಿಕ ಸಮಸ್ಯೆಯನ್ನು ಯಾರೊಂದಿಗೂ ಹೇಳಿಕೊಳ್ಳುವುದಿಲ್ಲ. ಉಲ್ಬಣಗೊಂಡಾಗ ಮನೆಯವರು ಭೂತ ಪ್ರೇತ ಅಥವಾ ದೆವ್ವದ ಕಾಟವೆಂದು ಅಥವಾ ಮಾಟ ಮಂತ್ರದ ಪ್ರಯೋಗವಿರಬಹುದೆಂದು ತಿಳಿಯುತ್ತಾರೆ ಎಂದರು.
ದೈಹಿಕ ರೋಗ ಬಂದರೆ ಚಿಕಿತ್ಸೆ ಕೊಡಿಸುತ್ತಾರೆ. ಚಿಕಿತ್ಸೆಗೆ ದುಡ್ಡು ಖರ್ಚಾಗುತ್ತದೆ, ಬೇರೆ ಯಾರಿಗೂ ಇದರಿಂದ ತೊಂದರೆ ಆಗಲ್ಲ. ಆದರೆ, ಮಾನಸಿಕ ರೋಗಿಗೆ ಸರಿಯಾದ ಚಿಕಿತ್ಸೆ ಸಿಗದಿದ್ದರೆ ಇಡೀ ಕುಟುಂಬ ಮಾನಸಿಕ ರೋಗದಿಂದ ಬಳಲಬೇಕಾಗುತ್ತದೆ. ಹೀಗಾಗಿ, ವಿದ್ಯಾವಂತರು, ಅಧಿಕಾರಿ ವರ್ಗದ ಮೇಲೆ ದೊಡ್ಡ ಜವಾಬ್ದಾರಿ ಇದೆ ಎಂದು ಹೇಳಿದರು.
ಮಾನಸಿಕ ಕಾಯಿಲೆಗೆ ಲೈಂಗಿಕ ಸಮಸ್ಯೆಯೇ ಬಹುಮುಖ್ಯ ಕಾರಣವಾಗಿದೆ. ವಿಚ್ಛೇದನಕ್ಕೆ ಮುಖ್ಯ ಕಾರಣ ಲೈಂಗಿಕ ಸಮಸ್ಯೆ. ಇದು ವಿದ್ಯಾವಂತರಲ್ಲಿಯೇ ಅಧಿಕ. ವಿಚ್ಛೇದನಕ್ಕೆ ಮಾನಸಿಕ ರೋಗವೂ ಒಂದು ಕಾರಣ. ಲೈಂಗಿಕ ವಿಚಾರ ಬಹಳ ಮಡಿವಂತಿಕೆ, ಸಂಕೋಚದ ವಿಚಾರ ಆಗಿದೆ. ಮುಕ್ತವಾಗಿ ಚರ್ಚಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.ಮಾನಸಿಕ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ಕೊಡಬೇಕು. ಗೌರವ ಕೊಡಬೇಕು. ತಾರತಮ್ಯ ಮಾಡುವಂತಿಲ್ಲ. ದೈಹಿಕ ರೋಗಿಗಳಿಗೆ ನೀಡುವ ಎಲ್ಲಾ ಅನುಕೂಲಗಳನ್ನು ಕಲ್ಪಿಸಬೇಕು ಎಂದು ಕಿವಿಮಾತು ಹೇಳಿದರು.
ಮಾನಸಿಕವಾಗಿ ಅಸ್ವಸ್ಥವಾದ ವ್ಯಕ್ತಿಯನ್ನು ಪೊಲೀಸರು ಸ್ವಾಧೀನಕ್ಕೆ ಪಡೆದು ಆಸ್ಪತ್ರೆಗೆ ಸೇರಿಸಬಹುದು. ಮನೆಯಲ್ಲಿ ಮಾನಸಿಕ ರೋಗಿಗೆ ಕುಟುಂಬದಿಂದ ತೊಂದರೆ ಆಗುತ್ತಿದ್ದರೆ ಮಧ್ಯ ಪ್ರವೇಶಿಸಿದರೆ ಪೊಲೀಸರು ಆಸ್ಪತ್ರೆಗೆ ಸೇರಿಸಬೇಕು ಎಂದರು. ಆತ್ಮಹತ್ಯೆ ಮಾಡಿಕೊಂಡು ಬದುಕುಳಿದರೆ ಆತನನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಬೇಕು. ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು. ಈ ವಿಚಾರ ಪೊಲೀಸರಿಗೆ ಗೊತ್ತಿರಬೇಕು. ಪೊಲೀಸ್ ಜವಾಬ್ದಾರಿ ಹೆಚ್ಚಿದೆ. ಆರೋಗ್ಯ ಇಲಾಖೆ, ಕಾನೂನು ಇಲಾಖೆ, ಪೊಲೀಸ್ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಒಟ್ಟಿಗೆ ಕೆಲಸ ಮಾಡಬೇಕು. ಮಾನಸಿಕ ಆರೋಗ್ಯ ಸಂಬಂಧ ಅರಿವು ಕಾರ್ಯಾಗಾರಗಳನ್ನು ನಿಯಮಿತವಾಗಿ ಆಯೋಜಿಸಬೇಕು ಎಂದು ಹೇಳಿದರು.ಮಾನಸಿಕ ಆರೋಗ್ಯದಲ್ಲಿ ಕರ್ನಾಟಕ ದೇಶದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದರಿಂದ ಸಮಾಜ ಹಾಗೂ ದೇಶಕ್ಕೆ ಒಳ್ಳೆಯದು ಎಂದು ಸಲಹೆ ನೀಡಿದರು.
ಜಿಪಂ ಸಿಇಒ ಯುಕೇಶ್ ಕುಮಾರ್ ಮಾತನಾಡಿ, ಜೀವನ ಜಠಿಲವಾಗುತ್ತಿದೆ. ಎಲ್ಲಾ ಇದ್ದರೂ ನೆಮ್ಮದಿ ಇಲ್ಲವಾಗಿದೆ. ಸರ್ಕಾರಿ ನೌಕರರು ಜನರಿಗೆ ಹತ್ತಿರವಾಗಿರುತ್ತಾರೆ. ಸವಾಲು ಇದ್ದೇ ಇರುತ್ತದೆ. ಜನರ ನಿರೀಕ್ಷೆಯು ಹೆಚ್ಚಿದೆ. ಅಧಿಕಾರಿಗಳಿಗೆ ಒತ್ತಡ, ಕೌಟುಂಬಿಕ ಸಮಸ್ಯೆಗಳಿವೆ. ಹಿರಿಯ ಅಧಿಕಾರಿಗಳಿಗೆ ಕಾರ್ಯಾಗಾರ ನಡೆಸಲಾಗುವುದು ಎಂದರು.
ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಶುಕ್ಲಾಕ್ಷ ಪಾಲನ್ ಮಾತನಾಡಿ, ಮಾನಸಿಕ ಆರೋಗ್ಯದ ಬಗ್ಗೆ ಜನರಿಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ರಾಜ್ಯದಲ್ಲಿ ನಡೆಯುತ್ತಿರುವ ೨೮ನೇ ಕಾರ್ಯಕ್ರಮ. ಎಲ್ಲಾ ಜಿಲ್ಲೆಗಳಲ್ಲಿ ಆಯೋಜನೆ ಮಾಡಲಾಗುತ್ತಿದೆ. ನಮಗೆ ದೈಹಿಕ ಆರೋಗ್ಯವಷ್ಟೇ ಸಾಲದು, ಮಾನಸಿಕ ಆರೋಗ್ಯ ತುಂಬಾ ಅಗತ್ಯ. ಶೇ.೧೦೦ ಮಾನಸಿಕ ಆರೋಗ್ಯವಂತ ವ್ಯಕ್ತಿ ಸಿಗುವುದು ಕಷ್ಟ. ಮಾನಸಿಕ ಅನಾರೋಗ್ಯ ಇದ್ದವರು ತಮ್ಮ ಸಮಸ್ಯೆ ಹೇಳಿಕೊಳ್ಳುವುದಿಲ್ಲ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಯಶಂಕರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ ಎಸ್.ಹೊಸಮನಿ, ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರದ ಉಪನಿರ್ದೇಶಕಿ ಡಾ.ಪಿ.ರಜನಿ, ವಕೀಲ ಎಂ.ಎನ್.ಉಮಾಶಂಕರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗದೀಶ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯಕುಮಾರ್, ಜಿಲ್ಲಾ ಮಾನಸಿಕ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಅನುಷ್ಠಾನಾಧಿಕಾರಿ ಡಾ.ಎನ್.ಸಿ.ನಾರಾಯಣಸ್ವಾಮಿ, ಪ್ರಾಂಶುಪಾಲ ಡಾ.ಕೆ.ಪ್ರಭಾಕರ್, ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಡಾ.ಪಿ.ಎಸ್.ಸತ್ಯನಾರಾಯಣ ರಾವ್ ಇದ್ದರು.