ಮಾನಸಿಕ ಆರೋಗ್ಯವೆಂದರೆ ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಸ್ವಸ್ಥವಾಗಿರುವದು

ಕಲಬುರಗಿ:ಅ.11: ಜಸ್ಟಿಸ್ ಶಿವರಾಜ ವಿ. ಪಾಟೀಲ ಫೌಂಡೇಶನ್ (ರಿ) ಮತ್ತು ಸರ್ವಜ್ಞ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ” ಹಾಗೂ ಖ್ಯಾತ ಮನೋವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ ರಚಿತ “ಪರೀಕ್ಷಾ ಸಂಭ್ರಮ ಮತ್ತು Enjoy the Exam” ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಪ್ರತಿಮಾ ಕಾಮರೆಡ್ಡಿ ಅರಿವಳಿಕೆ ಶಾಸ್ತ್ರದ ಪ್ರಾಧ್ಯಾಪಕರು ಅವರು ಮಾತನಾಡುತ್ತ, ಪ್ರತಿಯೊಬ್ಬರಿಗೂ ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಇರಬೇಕು. ಜನರಲ್ಲಿ ಜಾಗೃತಿ ಮೂಡಬೇಕು. ಮಾನಸಿಕ ಆರೋಗ್ಯವೆಂದರೆ ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಸ್ವಸ್ಥವಾಗಿರುವದು. ಜೀವನ ಸುಂದ್ರರವಾಗಿರಿಸಿಕೊಳ್ಳಲು ಸಾಧಕರ ಮಾರ್ಗದರ್ಶನವೂ ಮುಖ್ಯವಾಗಿರುತ್ತದೆ. ಕಷ್ಟಗಳು ಸಮಸ್ಯೆಗಳು ಬಂದಾಗ ಅವು ನಮಗೆ ಸ್ಫೂರ್ತಿ ನೀಡುತ್ತವೆ. ನಮ್ಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಹಕ್ಕಾಗಿದೆ. ಮಾನಸಿಕ ಅನಾರೋಗ್ಯ ಇದೊಂದು ನೆಗಡಿ ಕೆಮ್ಮು ಇದ್ದಂತೆ ಒಂದು ರೋಗ. ಇದು ಕಡಿಮೆ ಆಗುತ್ತದೆ. ಮಾನಸಿಕ ಅನಾರೋಗ್ಯಕ್ಕೆ ಒಳಗಾದಾಗ ಕೌನ್ಸಿಲಿಂಗ್ ಮಾಡಬೇಕು. ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು. ಆರೋಗ್ಯದ ಬಗ್ಗೆ ತಿಳುವಳಿಕೆ ಹೊಂದಿರಬೇಕು. ಮೆದುಳಿನಲ್ಲಿನ ರಾಸಾಯನಿಕ ಕ್ರಿಯೆಗಳಿಂದ ಈ ರೀತಿ ಮಾನಸಿಕ ಅನಾರೋಗ್ಯ ಎಂದಾಗುತ್ತದೆ ಆಗ ತನ್ನ ಮನಸ್ಸಿನ ವಿಚಾರಗಳನ್ನು ತಮ್ಮ ಆತ್ಮೀಯರಲ್ಲಿ ಹೇಳಿಕೊಳ್ಳಬೇಕು. ಒಂಟಿತನ ಇರಬಾರದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒತ್ತಡದ ಬದುಕಿನಲ್ಲಿ ಖಿನ್ನತೆಗೆ ಒಳಗಾಗದೆ ಸಂತೋಷವಾಗಿರಬೇಕು. ನಮ್ಮ ಬುದ್ದಿ, ಮನಸ್ಸನ್ನು ಸಧೃಡವಾಗಿರಿಸಕೊಂಡು ಬದುಕನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು. ಮನಸ್ಸು ಮಲೀನವಾಗಿರಿಸಿಕೊಳ್ಳದೆ ಸ್ವಚ್ಛವಾಗಿರಿಸಿಕೊಳ್ಳಬೇಕೆಂದರು.

ಮುಂದುವರೆದು ಮಾತನಾಡುತ್ತ, ಬೇಸಿಕ್ ಲೈಫ್ ಸಪೋರ್ಟ್ ಬಗ್ಗೆ ತಿಳಿಸಿದರು. ಹೃದಯಾಘಾತದಿಂದ ವ್ಯಕ್ತಿ ಕೆಳಗೆ ಬಿದ್ದಾಗ ಪ್ರಥಮ ಚಿಕಿತ್ಸೆ ನೀಡುವ ವಿಧಾನ ಕುರಿತು ವಿವರಿಸಿದರು. ವ್ಯಕ್ತಿಯ ಮೆದುಳು ನಿಷ್ಕ್ರಿಯವಾದಾಗ ಕೇವಲ ಮೂರು ನಿಮಿಷಗಳವರೆಗೆ ಕೆಲಸ ಮಾಡುತ್ತದೆ. ಆ ಸಂದರ್ಭದಲ್ಲಿ ರಕ್ತ ಸಂಚಲನ ಉಂಟು ಮಾಡುವದನ್ನು ಶ್ವಾಸಕೋಶ, ಉಸಿರಾಟದ ತೊಂದರೆ ಹೇಗೆ ನಿವಾರಿಸಬೇಕೆಂದು ತಿಳಿಸಿದರು. ವ್ಯಕ್ತಿ ರಸ್ತೆಯ ಮೇಲೆ ಬಿದ್ದರೆ ಅವನನ್ನು ಸುರಕ್ಷಿತ ಸ್ಥಳಕ್ಕೆ  ಕರೆದುಕೊಂಡು ಹೋಗಿ ಚಿಕಿತ್ಸೆ ನೀಡುವ ವಿಧಾನ, ಹೃದಯಾಘಾತದ ಮೆದುಳಿನ ನಿಷ್ಕ್ರಿಯೆ ಆದಾಗ ಪ್ರಥಮ ಚಿಕಿತ್ಸಾ ವಿಧಾನ ಕುರಿತು ತಿಳಿಸಿದರು. ಬೇರೇ ದೇಶಗಳ ಹಾಗೆ ನಮ್ಮಲ್ಲಿಯೂ ಕೂಡ ಬಸ್‍ಸ್ಟ್ಯಾಂಡ್, ರೇಲ್ವೇ ನಿಲ್ದಾಣಗಳಂತಹ ಸ್ಥಳಗಳಲ್ಲಿ ಮುಂದುವರೆದ ಹೃದಯಸ್ಥಂಭನ ತಡೆಯುವ ಫಿಬ್ರಿಲೇಟರ್ ಅಳವಡಿಸಬೇಕೆಂದು ಸಲಹೆ ನೀಡಿದರು.
ಪ್ರೊ. ನರೇಂದ್ರ ಬಡಶೇಷಿ ನಿವೃತ್ತ ಪ್ರಾಧ್ಯಾಪಕರು ಅವರು ಪುಸ್ತಕ ಕುರಿತು ಮಾತನಾಡುತ್ತ, ಪುಸ್ತಕ ಎಂದರೆ ಕಾಗದವಲ್ಲ ಜ್ಞಾನದ ಭಂಡಾರ. ಇದೊಂದು ಪವಿತ್ರವಾದ ಕೆಲಸವಾಗಿದೆ. ಪುಸ್ತಕಗಳು ನಮಗೆ ಸ್ಫೂರ್ತಿ ನೀಡುತ್ತವೆ. ಕತ್ತಲಿನಲ್ಲಿನ ಒಂದೊಂದು ಬೆಳಕು ಇದ್ದಂತೆ ದಾರಿ ದೀಪವಾಗಿವೆ. ಪುಸ್ತಕ ಓದಲು ಮನಸ್ಸು ಇರಬೇಕು. ಇಡೀ ವಿಶ್ವವನ್ನು ತಿಳಿದುಕೊಳ್ಳಬಹುದು. ಮನಸ್ಸನ್ನು ಅರ್ಥಮಾಡಿಕೊಳ್ಳುವದು ಕಷ್ಟವಾಗಿದೆ. ವಿದ್ಯಾರ್ಥಿಯ ಭವಿಷ್ಯ ರೂಪಿಸಿಕೊಳ್ಳಲು ಜ್ಞಾನಬೇಕು. ಜ್ಞಾನದ ಸಮುದ್ರದಲ್ಲಿ ಪುಸ್ತಕಗಳು ದೀಪವಿದ್ದಂತೆ ಗುರಿ ಮುಟ್ಟಿಸುತ್ತವೆ. ಸಾಧನೆ ಮಾಡಲು ಪ್ರೇರಣೆ ನೀಡುತ್ತವೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ಉತ್ತಮವಾಗಿ ಓದಬೇಕು. ಪರೀಕ್ಷೆಯಲ್ಲಿ ನೂರಕ್ಕಿಂತ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿದಾಗ ನೂರಕ್ಕೆ ನೂರು ಅಂಕಗಳು ಖಂಡಿತ ಬರುತ್ತವೆ. ಅದಕ್ಕೆ ಚೆನ್ನಾಗಿ ಓದುವ, ಬರೆಯುವ ಹವ್ಯಾಸ ರೂಢಿಸಿ ಕೊಳ್ಳಬೇಕು. ಹಾರ್ಡ್ ವರ್ಕ್ ಮಾಡಿದಾಗಲೇ ಸ್ಮಾರ್ಟ್ ವರ್ಕ್ ಮಾಡಲು ಸಾಧ್ಯವಾಗುತ್ತದೆ. ಆಗ ಪರೀಕ್ಷಾ ಭಯ ಇರುವುದಿಲ್ಲ. ಜೀವನದಲ್ಲಿ ಪ್ರಾಮಾಣಿಕತೆ, ಕಠಿಣ ಪರಿಶ್ರಮವಿದ್ದಲ್ಲಿ ಯಶಸ್ಸು ಸಿಗುತ್ತದೆ. ನಮ್ಮ ವಿಚಾರಗಳು ಭಾವನೆಗಳು ಸಕಾರಾತ್ಮಕವಾಗಿರಬೇಕು. ಕಣ್ಣಿನಲ್ಲಿ ಕನಸುಗಳಿರಬೇಕು. ಕನಸು ನನಸಾಗಿಸುವ ಗುರಿ, ಛಲ, ಸ್ವಯಂ ಪ್ರೇರಣೆ ಹೊಂದಿರಬೇಕು. ಸಾಮಾನ್ಯವಾಗಿ ಎಲ್ಲರಲ್ಲಿಯೂ ಒಂದೇ ಸಾಮಥ್ರ್ಯವಿರುತ್ತದೆ, ಜ್ಞಾನವಿರುತ್ತದೆ. ಆದರೆ ಅವರ ಪ್ರತಿಭೆಗೆ ತಕ್ಕಂತೆ ಅವರು ಯಶಸ್ಸು ಪಡೆಯುತ್ತಾರೆ.  
ವಿದ್ಯಾರ್ಥಿಗಳು ಪರೀಕ್ಷಾ ಭಯದಿಂದ ದೂರವಿದ್ದು, ಪರೀಕ್ಷಾ ಸಂದರ್ಭದಲ್ಲಿರಬೇಕು. ಆರಂಭದಿಂದಲೇ ಶೃದ್ಧೆಯಿಂದ ಕಲಿತರೆ ಕಲಿತದ್ದನ್ನು ಮನನ ಮಾಡಿಕೊಂಡು ನೆನಪಿನಿಂದ ಬರೆದರೆ ಪರೀಕ್ಷೆ ಭಯ ಇರುವುದಿಲ್ಲ. ಪರೀಕ್ಷೆ ಎಂದರೆ ವಿದ್ಯಾಭ್ಯಾಸದ ಒಂದು ಭಾಗ. ಬೆಳವಣಿಗೆಯ ಸಂಭ್ರಮ. ಪರೀಕ್ಷೆ ಚಿಂತೆ ಬಿಟ್ಟು ಎಲ್ಲಿ ಯಾವಾಗ ಹೇಗೆ ಓದಬೇಕು. ಪರೀಕ್ಷೆಯನ್ನು ಸಂಭ್ರಮದಿಂದ ಸ್ವಾಗತಿಸಬೇಕೆಂದು ಪ್ರೇರೇಪಿಸಿದರು. ವಿದ್ಯಾರ್ಥಿಗೆ ಭಾಷೆ ಮಾಧ್ಯಮಕ್ಕಿಂತ ಕಲಿತ ವಿದ್ಯೆ, ಮನಸ್ಸಿನ ಭಾವನೆ, ಬರೆಯುವ ಸಾಮಥ್ರ್ಯ ಮುಖ್ಯ. ತಾನು ಗುರುಗಳಿಂದ ಗೆಳೆಯರಿಂದ ಟೆಕ್ನಾಲಜಿಯಿಂದ ಪುಸ್ತಕದಿಂದ ಪಡೆದ ಜ್ಞಾನವನ್ನು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಹಾಯವಾಗುತ್ತದೆ. ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಪರೀಕ್ಷೆಯಲ್ಲಿ ಆಗಲಿ, ಜೀವನದಲ್ಲಾಗಲಿ ಶಾರ್ಟ್‍ಕಟ್ ಪದ್ಧತಿ ಅನುಸರಿಸಬಾರದು ಏಕಾಗ್ರತೆಯಿಂದ ಓದಿದಾಗ ಜ್ಞಾನ ತಲೆಗೆ ಹತ್ತುತ್ತದೆ. ನಾನು ಸಾಧನೆ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಮೂಡುತ್ತದೆ. ಪರೀಕ್ಷಾ ಭಯ ನಿವಾರಣೆ ಆಗುತ್ತದೆ ಎಂದು ಪ್ರೋತ್ಸಾಹಿಸಿದರು. ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ಅವರು ಜೀವನ ಸಾಧನೆ ಅದ್ಭುತವಾದದು, ಅಮೂಲ್ಯವಾದದು ಎಂದರು.
ಪ್ರೊ. ಚನ್ನಾರಡ್ಡಿ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಡಾ. ಸಿ.ಆರ್. ಚಂದ್ರಶೇಖರ ಖ್ಯಾತ ಮನೋವೈದ್ಯರು ಲಕ್ಷಾಂತರ ಜನರಿಗೆ ಮಾನಸಿಕ ಆರೋಗ್ಯದ ಕುರಿತು ಅರಿವು ಮೂಡಿಸಿದ್ದಾರೆ. ಆರೋಗ್ಯ ಸುಧಾರಿಸಿದ್ದಾರೆ, ಕಷ್ಟದಲ್ಲಿರುವವರಿಗೆ ಸ್ಪಂದಿಸಿದ್ದಾರೆ, ಸ್ವಸ್ಥ ಸಮಾಜ ನಿರ್ಮಿಸಲು ಶ್ರಮಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಏಕಾಗ್ರತೆಯಿಂದ ಕಠಿಣ ಪರಿಶ್ರಮದಿಂದ ಓದಿ, ಓದಿದನ್ನು ಪುನರಾವರ್ತನೆ ಮಾಡಿಕೊಂಡು ಸಂಭ್ರಮದಿಂದ, ಭಯವಿಲ್ಲದೆ ಪರೀಕ್ಷೆ ಬರೆದು ಜೀವನದಲ್ಲಿ ಯಶಸ್ಸು ಪಡೆಯಬೇಕು. ಸಮಾಜಕ್ಕೆ ಸಾಧ್ಯವಾದಷ್ಟು ಸೇವೆ ಸಲ್ಲಿಸಬೇಕು. ಯಾವುದೇ ದುಷ್ಚಟಕ್ಕೆ ಒಳಗಾಗದೆ ಸಕಾರಾತ್ಮಕವಾದ ಭಾವನೆಗಳನ್ನು ಹೊಂದಿರಬೇಕು. ಓದುವ ಹವ್ಯಾಸ, ಜ್ಞಾನದ ಒಳಹರಿವು, ಉತ್ತಮ ಚಿಂತನೆ, ಶ್ರೇಷ್ಠ ವ್ಯಕ್ತಿಗಳ ಸಾಧನೆ ಬಗ್ಗೆ ಅರಿವು, ಉತ್ತಮ ಅಧ್ಯಯನದಲ್ಲಿ ತನ್ನನ್ನು ತೊಡಗಿಸಿಕೊಂಡು ಮಾನಸಿಕ ಆರೋಗ್ಯ ಸ್ಥಿರವಾಗಿಟ್ಟುಕೊಂಡು ಪ್ರಾಮಾಣಿಕವಾಗಿ ಕೆಲಸಮಾಡಿದರೆ ಆ ವ್ಯಕ್ತಿ ಸಾಮಾನ್ಯಯಾಗಿದ್ದರೂ ಅಸಾಮಾನ್ಯ ವ್ಯಕ್ತಿಯಾಗಿ ಹೊರಹೊಮ್ಮುತ್ತಾನೆ ಎಂದರು. ಗೌರವಾನ್ವಿತ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ಅವರ ಅದ್ಭುತ ಸಾಧನೆ, ಸಮಾಜ ಸೇವೆ, ಅವರ ಮಾನವೀಯ ಮೌಲ್ಯಗಳು ನಮ್ಮ ಬದುಕಿಗೆ ದಾರಿದೀಪ ಅವರಂತೆ ಸಾಧನೆ ಮಾಡಬೇಕೆಂದು ಪ್ರೇರೇಪಿಸಿದರು. ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಎಸ್.ಎಸ್.ಹಿರೇಮಠ ಪ್ರಕಾಶಕರು, ಷಡಕ್ಷರಸ್ವಾಮಿ ದಿಗ್ಗಾಂವ್‍ಕರ್ ಟ್ರಸ್ಟ್, ಶ್ರೀ ಅಭಿಷೇಕ್ ಚನ್ನಾರಡ್ಡಿ ಪಾಟೀಲ ಮುಖ್ಯ ಶೈಕ್ಷಣಿಕ ನಿರ್ದೇಶಕರು ಸರ್ವಜ್ಞ ಶಿಕ್ಷಣ ಸಂಸ್ಥೆ ಕಲಬುರಗಿ, ಶ್ರೀಮತಿ ಸಂಗೀತಾ ಅಭಿಷೇಕ್ ಪಾಟೀಲ ಶೈಕ್ಷಣಿಕ ನಿರ್ದೇಶಕರು ಸರ್ವಜ್ಞ ಚಿಣ್ಣರ ಲೋಕ, ಶ್ರೀಮತಿ ವಿನುತಾ ಆರ್.ಬಿ. ಶ್ರೀ ಪ್ರಶಾಂತ ಕುಲಕರ್ಣಿ, ಶ್ರೀ ಪ್ರಭುಗೌಡ ಸಿದ್ಧಾರೆಡ್ಡಿ, ಶ್ರೀ ಕರುಣೇಶ್ ಹಿರೇಮಠ, ಶ್ರೀ ಗುರುರಾಜ ಕುಲಕರ್ಣಿ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶ್ರೀ ಎಂ.ಸಿ.ಕಿರೇದಳ್ಳಿ ಪ್ರಾಚಾರ್ಯರು ಸರ್ವಜ್ಞ ಕಾಲೇಜು ಅವರು ವಂದಿಸಿದರು. ಕು. ಸೃಜಲ್ಯ, ವೀರಶ್ರೀ ಸಂಗಡಿಗರು, ವಿದ್ಯಾರ್ಥಿಗಳು ಪ್ರಾರ್ಥಿಸಿದರು.