ಮಾನಸಿಕವಾಗಿ ಸದೃಢರಾಗಲು ಯೋಗ ಸಹಕಾರಿ : ಸಿಪಿಐ ಇಕ್ಕಳಕಿ

ಔರಾದ :ಜೂ.22: ದೈಹಿಕವಾಗಿ ಸದೃಢರಾಗಲು ವ್ಯಾಯಾಮ ಮತ್ತು ಮಾನಸಿಕ ಒತ್ತಡ ನಿವಾರಣೆಗೆ ಪ್ರತಿಯೊಬ್ಬರು ಬದುಕಿನಲ್ಲಿ ಯೋಗ್ಯಾಭ್ಯಾಸ ರೂಢಿಸಿಕೊಳ್ಳುವಂತೆ ಔರಾದ್ ಸಿಪಿಐ ಮಲ್ಲಿಕಾರ್ಜುನ ಇಕ್ಕಳಕಿ ಕರೆ ನೀಡಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಎಂಎನ್‍ಟಿ ಶಾಲೆ ಹಾಗೂ ಪತಂಜಲಿ ಯೋಗಪೀಠ ಸಹಯೋಗದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಆಯೋಜಿಸಿದ ಮ್ಯಾರಥಾನ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, ಮನಸ್ಸಿನ ನಿಯಂತ್ರಣಕ್ಕೆ ಯೋಗ ಮಹತ್ವದ ಪಾತ್ರ ವಹಿಸುತ್ತದೆ ಯೋಗದಿಂದ ಏಕಾಗ್ರತೆ ಹೆಚ್ಚುತ್ತದೆ. ವೈಯಕ್ತಿಕ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿಯಿಂದ ಇರಲು ಸಾಧ್ಯ ಆಗುತ್ತದೆ. ಈ ನಿಟ್ಟಿನಲ್ಲಿ ನಿರಂತರವಾಗಿ ಯೋಗ ಶಿಬಿರಗಳು ನಡೆಯಬೇಕು ಎಂದರು.

ಎಂಎನ್‍ಟಿ ಶಾಲೆ ಮುಖ್ಯಸ್ಥ ನಾಗಸೇನ್ ತಾರೆ ಅವರು ಮಾತನಾಡಿ, ಯೋಗ ಭಾರತ ದೇಶ ವಿಶ್ವಕ್ಕೆ ನೀಡಿರುವ ಬಹುದೊಡ್ಡ ಕಾಣಿಕೆಯಾಗಿದೆ. ಪ್ರಸ್ತುತ ದಿನಮಾನಗಳಲ್ಲಿ ಇದರ ಮಹತ್ವ ಅರಿತು ವಿಶ್ವಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗಾಚರಣೆಗೆ ಮನ್ನಣೆ ನೀಡಿದೆ ಎಂದರು.

ಪಟ್ಟಣದ ವಿವಿಧ ಬೀದಿಗಳಲ್ಲಿ ಮ್ಯಾರಥಾನ್ :
ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮ್ಯಾರಥಾನ್ ಜರುಗಿತು. ಬಸವೇಶ್ವರ ವೃತ್ತದಿಂದ ಬಸ್ ನಿಲ್ದಾಣ, ತಾಪಂ ಕಛೇರಿ, ಕನ್ನಡಾಂಬೆ ವೃತ್ತ, ಉಪಬಂದಿಖಾನೆ, ಪಪಂ ನೂತನ ಕಟ್ಟಡ ಮಾರ್ಗವಾಗಿ ಪತ್ರಿಸ್ವಾಮಿ ಪದವಿಪೂರ್ವ ಕಾಲೇಜಿನಲ್ಲಿ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದಲ್ಲಿ ಯೋಗ ಶಿಕ್ಷಕ ರಾಜೇಂದ್ರ ನಾಯ್ಕ್, ಕಮಲನಗರ ತಾಪಂ ಇಒ ಶಿವಕುಮಾರ ಘಾಟೆ, ಶಿವಾಜಿರಾವ ಪಾಟೀಲ್, ಶಾಮಸುಂದರ್ ಖಾನಾಪೂರ್, ಯಶವಂತ ಡೊಂಬಾಳೆ, ಗುರುನಾಥ ವಟಗೆ, ಧನರಾಜ ಮಾನೆ, ಚಂದ್ರಕಾಂತ ಘುಳೆ, ಪ್ರಕಾಶ ಅಲ್ಮಾಜೆ, ದೀಪಕ ಕಾಂಬಳೆ, ಅಶೋಕ ಶೆಂಬೆಳ್ಳೆ, ಶೈಲೇಸ್ ಮಾಳಗೆ, ಶೇಷರಾವ ಮೇತ್ರೆ, ಸೇರಿದಂತೆ ಶಾಲಾ ಸಿಬ್ಬಂದಿ ಹಾಗೂ ನೂರಾರು ಜನ ಪಾಲ್ಗೊಂಡಿದ್ದರು.