ಮಾನವ ಹಕ್ಕು ಉಲ್ಲಂಘನೆ: ಅಮೆರಿಕಾ ನಿರ್ಬಂಧ

ನ್ಯೂಯಾರ್ಕ್, ಡಿ.೯- ನಾಳೆ ನಡೆಯಲಿರುವ ವಿಶ್ವ ಮಾನವ ಹಕ್ಕುಗಳ ದಿನದ ಹಿನ್ನೆಲೆಯಲ್ಲಿ ಇದೀಗ ಅಮೆರಿಕಾ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇರಾನ್ ಅಧಿಕಾರಿಗಳು ಸೇರಿದಂತೆ ಜಾಗತಿಕ ಮಟ್ಟದಲ್ಲಿ ೩೦ಕ್ಕೂ ಹೆಚ್ಚಿನ ಜನರ ಮೇಲೆ ಅಮೆರಿಕಾ ನಿರ್ಬಂಧ ವಿಧಿಸಿದೆ.
೧೩ ದೇಶಗಳ ೩೭ ಜನರ ಮೇಲೆ ಯುಎಸ್‌ನ ಖಜಾನೆ ಮತ್ತು ವಿದೇಶಾಂಗ ಇಲಾಖೆಗಳು ನಿರ್ಬಂಧಗಳು ಮತ್ತು ವೀಸಾ ನಿಯಂತ್ರಕ ಕ್ರಮಗಳನ್ನು ವಿಧಿಸಿವೆ ಎಂದು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಬ್ರಿಟನ್ ಮತ್ತು ಕೆನಡಾದೊಂದಿಗೆ ಸಮನ್ವಯಗೊಂಡ ಕ್ರಮಗಳಲ್ಲಿ ತಿಳಿಸಿದ್ದಾರೆ. ಯುಎಸ್ ಕಾರ್ಯಾಚರಣೆಗಳಿಗೆ ಜನರನ್ನು ನೇಮಿಸಿಕೊಂಡ ಇಬ್ಬರು ಇರಾನ್ ಗುಪ್ತಚರ ಅಧಿಕಾರಿಗಳನ್ನು ಕೂಡ ಸದ್ಯ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಖಜಾನೆ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ. ೨೦೨೦ ರಲ್ಲಿ ಖುದ್ಸ್ ಫೋರ್ಸ್ ಕಮಾಂಡರ್ ಖಾಸ್ಸೆಮ್ ಸೊಲೈಮಾನಿ ಹತ್ಯೆಗೆ ಪ್ರತೀಕಾರವಾಗಿ ಪ್ರಸ್ತುತ ಮತ್ತು ಮಾಜಿ ಯುಎಸ್ ಸರ್ಕಾರಿ ಅಧಿಕಾರಿಗಳ ಮಾರಣಾಂತಿಕ ಹತ್ಯೆಗೆ ಇವರು ಯೋಜಿಸಿದ್ದರು ಎನ್ನಲಾಗಿದೆ. ಮಾಜಿದ್ ದಸ್ತಜಾನಿ ಫರಾಹಾನಿ ಮತ್ತು ಮುಹಮ್ಮದ್ ಮಹ್ದಿ ಖಾನ್‌ಪೂರ್ ಅರ್ಡೆಸ್ತಾನಿ ಎಂಬ ಇರಾನ್‌ನ ಇಬ್ಬರು ಅಧಿಕಾರಿಗಳು ಅಮೆರಿಕಾದ ಧಾರ್ಮಿಕ ಸ್ಥಳಗಳು, ವ್ಯವಹಾರಗಳು ಮತ್ತು ಇತರ ಸೌಲಭ್ಯಗಳ ಮೇಲೆ ಕೇಂದ್ರೀಕರಿಸಿದ ಕಣ್ಗಾವಲು ಚಟುವಟಿಕೆಗಳಿಗೆ ಜನರನ್ನು ನೇಮಿಸಿಕೊಂಡಿದ್ದರು ಎಂದು ಖಜಾನೆ ಇಲಾಖೆ ತಿಳಿಸಿದೆ. ಇನ್ನು ಇನ್ನು ಕಳೆದ ವರ್ಷದಲ್ಲಿ ಅಮೆರಿಕಾದ ಖಜಾನೆ ಇಲಾಖೆಯು ಮಾನವ ಹಕ್ಕುಗಳ ದುರುಪಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳಿಗಾಗಿ ೧೨ಕ್ಕೂ ಹೆಚ್ಚಿನ ದೇಶಗಳ ೧೫೦ ಕ್ಕೂ ಹೆಚ್ಚು ವ್ಯಕ್ತಿಗಳು ಮತ್ತು ಘಟಕಗಳ ಮೇಲೆ ನಿರ್ಬಂಧ ವಿಧಿಸಿತ್ತು. ಅಲ್ಲದೆ ಅಮೆರಿಕಾದಲ್ಲಿರುವ ಅವರ ಆಸ್ತಿಗಳನ್ನು ಫ್ರೀಜ್ ಮಾಡಿದೆ. ಜೊತೆಗೆ ಅವರೊಂದಿಗೆ ಕೆಲವು ವಹಿವಾಟುಗಳಲ್ಲಿ ತೊಡಗಿರುವ ಅಮೆರಿಕನ್ನರು ಕೂಡ ನಿರ್ಬಂಧಗಳಿಗೆ ಒಳಗಾಗುವ ಅಪಾಯವನ್ನು ಎದುರಿಸುತ್ತಿದ್ದಾರೆ.