ಮಾನವ ಹಕ್ಕುಗಳ ಪ್ರತಿಪಾದಕ ಬಸವಣ್ಣ: ಎಲ್.ಹೆಚ್.ಅರುಣ್‌ಕುಮಾರ್

ಸಂಜೆವಾಣಿ ವಾರ್ತೆ

ದಾವಣಗೆರೆ.ಮೇ.16: ಬಸವಣ್ಣನವರು ಜಾತಿ, ಧರ್ಮ, ವರ್ಗ, ಲಿಂಗಾಧಾರಿತ, ಅಸಮಾನತೆ ಇಲ್ಲದ ಸಮಬಾಳಿನ ಸಮತೆಯ ಸಮಾಜ ಕಟ್ಟಲು ಹೋರಾಡಿದ ಮಾನವ ಹಕ್ಕುಗಳ ಪ್ರತಿಪಾದಕ ಎಂದು ದಾವಣಗೆರೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್ ಕುಮಾರ್ ಹೇಳಿದರು.ನಗರದ ಕೆ.ಬಿ.ಬಡಾವಣೆಯಲ್ಲಿನ ಸ್ಪೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಕಾರ್ಯಾಲಯದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮವನ್ನು ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕಾಯಕ ಜೀವಿಗಳು, ದಲಿತರು, ದಮನಿತರು, ಮಹಿಳೆಯರನ್ನು ವಚನ ಚಳುವಳಿಯಲ್ಲಿ ಪಾಲ್ಗೊಳ್ಳುವಲ್ಲಿ ಪ್ರೇರೇಪಿಸಿದ ಬಸವಣ್ಣ, ಆ ಮೂಲಕ ಸಮಾನತೆ, ಜಾತ್ಯಾತೀತ, ಭ್ರಾತೃತ್ವದ ಸಮಾಜ ನಿರ್ಮಾಣಕ್ಕೆ ಪಣ ತೊಟ್ಟಿದ್ದರು. ಅಲ್ಲದೇ ಸಾಮಾಜಿಕ ಕ್ರಾಂತಿಯ ಬೀಜಗಳನ್ನು ಬಿತ್ತಿದ ಮಹಾನ್ ಮಾನವತಾವಾದಿ ಹರಿಕಾರ ಎಂದು ಹೇಳಿದರು.ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ ಮಾತನಾಡಿ, ಬಸವಣ್ಣನವರು ಎಲ್ಲರಿಗೂ ವೈಚಾರಿಕ ಗುರುವಾಗಿದ್ದು, ಅಂಧಶ್ರದ್ದೆ, ಮೂಢನಂಬಿಕೆ, ಶೋಷಣೆಗಳ ವಿರುದ್ದ ಹೋರಾಟ ನಡೆಸಿ, ಜನರನ್ನು ಜಾಗೃತಿಗೊಳಿಸಿದರು ಎಂದು ಹೇಳಿದರು.ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದ ಗೌರವಾಧ್ಯಕ್ಷ ಎಂ.ಎಸ್.ನಾಗರಾಜಪ್ಪ ಮಾತನಾಡಿ, ಬಸವಣ್ಣವರ ವಚನಗಳೇ ಸಂವಿಧಾನದ ಆಶಯಗಳಾಗಿದ್ದು, ಅವರು ನಿರ್ಮಿಸಿದ ಅನುಭವ ಮಂಟಪ ಪ್ರಜಾಪ್ರಭುತ್ವದ ಮೊದಲ ಸಂಸತ್ತು ಆಗಿತ್ತು ಎಂದರು.ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಎಂ.ಪರಮೇಶ್ವರಪ್ಪ ಸಿರಿಗೆರೆ ಮಾತನಾಡಿ, ವಚನ ಚಳುವಳಿ ಮೂಲಕ ಮಹಿಳಾ ಹೋರಾಟಗಾರರನ್ನು ಬೆಳಕಿಗೆ ತಂದ ಶರಣರ ಪರಂಪರೆ ನಮಗೆಲ್ಲರಿಗೂ ಆದರ್ಶವಾಗಿದೆ ಎಂದರು.ಸಾಹಿತಿ ಡಾ.ಎ.ಶಿವನಗೌಡ ಕಡಬಗೆರೆ ಮಾತನಾಡಿ, ಕಾಯಕ ಸಂಸ್ಕೃತಿಯ ಮೂಲಕ ನಾಡಿನ ಸಾಂಸ್ಕೃತಿಕ ಹೋರಾಟಗಾರರಾಗಿ ಹೊರ ಹೊಮ್ಮಿದ ಬಸವಣ್ಣನವರ ಆದರ್ಶಗಳು ಇಂದಿನ ಯುವಜನರಿಗೆ ಸ್ಫೂರ್ತಿಯಾಗಿವೆ ಎಂದು ಹೇಳಿದರು.ಈ ವೇಳೆ ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ಎನ್.ಎಸ್.ರಾಜು ಸ್ವಾಗತಿಸಿದರು. ಸಾಹಿತಿ ಎಸ್.ಸಿದ್ದೇಶ್ ಕುರ್ಕಿ ಕಾರ್ಯಕ್ರಮ ನಿರೂಪಿಸಿದರು. ಎಂ.ಎಸ್.ಶಿವಕುಮಾರ ಸ್ವಾಮಿ ವಂದಿಸಿದರು. ಕಾರ್ಯಕ್ರಮದಲ್ಲಿ ವಕೀಲ ಆರ್.ಯೋಗೇಶ್ವರಪ್ಪ ಇದ್ದರು.