ಮಾನವ ಸಾಮ್ರಾಜ್ಯ ನಿರ್ಮಿಸಿದ ಪಟ್ಟದ್ದೇವರು: ಬಿರಾದಾರ

ಭಾಲ್ಕಿ:ಎ.23: ಲಿಂ.ಡಾ.ಚನ್ನಬಸವ ಪಟ್ಟದ್ದೇವರು ದೀನ-ದಲಿತರಿಗೆ, ಶೋಷಿತರಿಗೆ ಸಮಾನತೆಯ ಬದುಕನ್ನು ನೀಡಿ ಮಾನವತಾ ಸಾಮ್ರಾಜ್ಯ ನಿರ್ಮಿಸಿದ್ದರು ಎಂದು ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಡಾ.ನಾಗಶೆಟ್ಟಿ ಬಿರಾದಾರ ಹೇಳಿದರು.

ಪಟ್ಟಣದ ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಟ್ಟದೇವರ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಗಡಿಭಾಗದ ಬೀದರ್‌ ಜಿಲ್ಲೆಯಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಶಿಕ್ಷಣ ನೀಡಿ ಈ ಭಾಗ ಸುಧಾರಿಸಲು ಪ್ರಯತ್ನಿಸಿದ್ದರು. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ತಮ್ಮ ಶಿಷ್ಯರಾದ ಲೋಕನಾಯಕ ಭೀಮಣ್ಣಾ ಖಂಡ್ರೆ ಜೊತೆ ಪಾಲ್ಗೊಂಡು ಈ ಭಾಗವನ್ನು ಕರ್ನಾಟಕದಲ್ಲಿ ಸೇರಿಸಿದ್ದರು’ ಎಂದರು.’ಪಟ್ಟದ್ದೇವರು ಬಸವತತ್ವದ ವಿಚಾರಧಾರೆಗಳನ್ನು ಮನೆಮನೆಗೆ ಮುಟ್ಟಿಸಿದ ವಿಭೂತಿ ಪುರುಷರಾಗಿದ್ದರು’ ಎಂದು ಹೇಳಿದರು.
ಬಿಕೆಐಟಿ ಉಪ ಪ್ರಾಚಾರ್ಯ ಪಿ.ಎನ್.ದಿವಾಕರ್‌, ಅಕ್ಕಮಹಾದೇವಿ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಅಂಕುಶ ಢೋಲೆ ಮಾತನಾಡಿದರು.

ಸಿ.ಬಿ.ಕಾಲೇಜಿನ ಪ್ರಾಚಾರ್ಯ ಸೂರ್ಯಕಾಂತ ಧನ್ಯೆ, ಅಕ್ಕಮಹಾದೇವಿ ಪ್ರೌಢಶಾಲೆಯ ಮುಖ್ಯಶಿಕ್ಷಕ ರೇವಣಸಿದ್ದಪ್ಪಾ ದ್ಯಾಸಾ, ಪ್ರಮುಖರಾದ ಕಮಲಾ ಸಿರ್ಸೆ, ಮೀನಾ ಪಾಟೀಲ, ಸೋಮನಾಥ ಮೂಲಗೆ, ವಿಜಯಕುಮಾರ ಬರದಾಪುರೆ, ಸಂಗ್ರಾಮ ಮುದಾಳೆ, ಅಶೋಕಕುಮಾರ ಹಲಕೂಡೆ, ರಾಜಕುಮಾರ ಬೆಲ್ದಾಳೆ, ಗುರುನಾಥ ಸೈನೀರ ಇದ್ದರು.