ಮಾನವ ಸರಪಳಿ – ಸಹಿ ಸಂಗ್ರಹಣೆ

ಧಾರವಾಡ, ಏ3: ಇಂದು ಧಾರವಾಡದ ಅಂಜುಮನ್ ಕಾಲೇಜಿನ ಮುಂಭಾಗದ ರಾಣಾ ಪ್ರತಾಪ್ ಸಿಂಗ್ ವೃತದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆ-2024ರ ಪ್ರಯುಕ್ತ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಮತಕ್ಷೇತ್ರ ವ್ಯಾಪ್ತಿಯಲ್ಲಿನ ಪದವಿ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಧಾರವಾಡ ಜಿಲ್ಲಾ ಮಟ್ಟದ ಮಾನವ ಸರಪಳಿ ಹಾಗೂ ಸಹಿ ಸಂಗ್ರಹಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿಗಳೂ ಆಗಿರುವ

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ಈಶ್ವರ ಉಳ್ಳಾಗಡ್ಡಿ ಅವರು ಸಹಿ ಸಂಗ್ರಹಣಾ ಅಭಿಯಾನಕ್ಕೆ ಚಾಲನೆ ನೀಡಿದರು.

ಕಲಾಭವನದಿಂದ ಜಾಥಾ ಮುಖಾಂತರ ಜ್ಯುಬ್ಲಿ ಸರ್ಕಲ್ ನಲ್ಲಿ ಮಾನವ ಸರಪಳಿ ಹಾಗೂ ಪ್ರತಿಜ್ಞಾವಿಧಿಯನ್ನು ಭೋದಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲೂಕ ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪದವಿ ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಇ.ಎಲ್.ಸಿ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.

ಉಪನ್ಯಾಸಕರಿಗೆ ಮತದಾನದ ಜಾಗೃತಿ:

ಇಂದು ಪ್ರೀಸಂ ಪದವಿ ಪೂರ್ವ ಕಾಲೇಜಿನಲ್ಲಿ ಲೋಕಸಭಾ ಚುನಾವಣೆ-2024 ರ ಪ್ರಯುಕ್ತ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಮತಕ್ಷೇತ್ರ ವ್ಯಾಪ್ತಿಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ದ್ವಿತೀಯ ಪಿ.ಯು.ಸಿ ಮೌಲ್ಯಮಾಪನ ಕೇಂದ್ರಕ್ಕೆ ಭೇಟಿ ನೀಡಿ, ವಿವಿಧ ಜಿಲ್ಲೆಗಳಿಂದ ಮೌಲ್ಯಮಾಪಕರಾಗಿ ಬಂದಂತಹ ಉಪನ್ಯಾಸಕರಿಗೆ ಮತದಾನದ ಜಾಗೃತಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿಗಳಾದ ಸ್ವರೂಪ ಟಿ.ಕೆ. ಅವರು ಉದ್ಘಾಟಿಸಿದರು.

ಪ್ರತಿಯೊಬ್ಬರಿಗೂ ಮತದಾನದ ಮೌಲ್ಯದ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಧಾರವಾಡ ಜಿಲ್ಲೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಕ್ಯಾಂಪಸ್ ರಾಯಭಾರಿಗಳ ಸಹಯೋಗದೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಬೇಕು. ಅಲ್ಲದೇ ಮತದಾನ ಪ್ರಮಾಣವನ್ನು ಕಳೆದ ಬಾರಿಗಿಂತ ಹೆಚ್ಚಾಗಲೇಬೇಕು ಎಂದು ಅವರು ಸೂಚಿಸಿದರು.

ಕೆ.ಎಂ. ಶೇಖ್ ಅವರು ಮತದಾರರ ಪ್ರತಿಜ್ಞಾವಿಧಿಯನ್ನು ಭೋದಿಸಿದರು.
ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಸುರೇಶ, ಪ್ರೀಸಂ ಕಾಲೇಜಿನ ಪ್ರಾಚಾರ್ಯರಾದ ಸಂಜು ಹುಲ್ಲರ, ವಿವಿಧ ಇಲಾಖೆಗಳ ಅಧಿಕಾರಿಗಳು, ಉಪನ್ಯಾಸಕರು, ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿದಂತೆ ಇತರರು ಹಾಜರಿದ್ದರು.