ಮಾನವ ಮತ್ತು ಮಾನವಿಯ ಸಂಬಂಧಗಳು

ನಮಗೆ ಬಹು ಪುರಾತನವಾದ ಭವ್ಯ ಪರಂಪರೆಯಿದೆ. ರೋಮಾಂಚನ ಗೊಳ್ಳುವಂಥ ಇತಿಹಾಸ ಅದ್ವಿತೀಯವಾದ ಆಧ್ಯಾತ್ಮಿಕ ಹಿನ್ನಲೆ ನಾಗರಿಕತೆಯ ಸುಂದರವಾದ ಚರಿತ್ರೆ, ಅನುಭಾವಪೂರ್ಣ ಬದುಕು, ಸಾಹಿತ್ಯ ಸಿದ್ಧಾಂತಗಳ ಭಂಡಾರ ಏನೆಲ್ಲ ಇದೆ. ಇಷ್ಟೆಲ್ಲ ಹಿನ್ನೆಲೆಯಿದ್ದರೂ ನೆಮ್ಮದಿಯಿಲ್ಲದ ವಾತಾವರಣದಲ್ಲಿ ಬಾಳಬೇಕಾದ ವಿಪರ್ಯಾಸವೂ ಇಂದು ಬಂದೊದಗಿದೆ. ವಾಸ್ತವವಾಗಿ ಇಂದಿನ ಮಾನವನ ಬದುಕು ಭಯ-ಸಂಶಯ-ಅಪನಂಬಿಕೆಗಳ ಬೆಂಕಿಯಲ್ಲಿ ಬಿದ್ದು, ಮೂಕ ಹಿಂಸೆಯನ್ನು ಏಕೆ ಅನುಭವಿಸುತ್ತಿದೆ ? ಎಂಬುದು ಕಾಡುತ್ತಿರುವ ಪ್ರಶ್ನೆ. ಈ ಸ್ಥಿತಿಗೆ ಇಂದು ಹಳಸುತ್ತಿರುವ ನಮ್ಮ ಮಾನವ ಮತ್ತು ಮಾನವೀಯ ಸಂಬಂಧಗಳೂ ಕಾರಣವೆನ್ನಬಹುದು.
ಪ್ರತಿಯೊಬ್ಬ ವ್ಯಕ್ತಿಯು ಎರಡು ನೆಲೆಗಳಲ್ಲಿ ಬದುಕುತ್ತಾನೆ. ಒಂದು ವೈಯಕ್ತಿಕ ನೆಲೆ ಹಾಗೂ ಇನ್ನೊಂದು ಸಾಮಾಜಿಕ ನೆಲೆ. ಇವೆರಡೂ ಪರಸ್ಪರ ಪೂರಕಗಳಾಗಿರಬೇಕು.ಪ್ರತಿಯೊಬ್ಬ ವ್ಯಕ್ತಿಗಳಿಗೆ ಅವರವರದೇ ಆದ ಇಷ್ಟಾನಿಷ್ಟಗಳಿಗಿರುವುದರಿಂದ ಅವುಗಳು ಇತರರ ಆಶೋತ್ತರಗಳಿಗೆ ತೊಡಕಾಗಬಾರದು. ಆದರೆ ಭಿನ್ನ ಮನೋಭಾವದ ವ್ಯಕ್ತಿಗಳ ಆಶೋತ್ತರಗಳು ವಿಭಿನ್ನವಾಗಿರುವುದರಿಂದ, ಎಷ್ಟೋ ಸಂದರ್ಭಗಳಲ್ಲಿ ವಿರುದ್ಧವಾದ ನಡೆಗಳುಂಟಾಗಿ ಸಂಘರ್ಷ ಹುಟ್ಟಿಕೊಳ್ಳುತ್ತದೆ. ಇದನ್ನು ತಪ್ಪಿಸುವುದಕ್ಕಾಗಿಯೇ ಕಾಲಕಾಲದ ಅನುಭವಗಳ ಹಿನ್ನೆಲೆಯಲ್ಲಿ ಸಮಾಜವು ಇತರರಿಗೆ ಅಡ್ಡಿಯಾಗದಂತ ನಿಯಂತ್ರಿಸುವ ನೀತಿ-ನಿಯಮಗಳನ್ನು ಮಾಡಿರುತ್ತದೆ.
ಇಂಥವುಗಳಲ್ಲಿ ಮಾನವ ಸಂಬಂಧಗಳು ಹಾಗೂ ಮಾನವೀಯ ಸಂಬಂಧಗಳು ಪ್ರಮುಖವೆನ್ನಬಹುದು. ಮಾನವ ಸಂಬಂಧಗಳು ವ್ಯಕ್ತಿಗತ ಮೌಲ್ಯಗಳಾದರೆ, ಮಾನವೀಯ ಸಂಬಂಧಗಳು ಸಾಮಾಜಿಕ ಮೌಲ್ಯಗಳೆನಿಸುತ್ತವೆ. ಅವುಗಳ ಅನುಸರಣೆಯ ದೆಸೆಯಲ್ಲಿ ವ್ಯಕ್ತಿಯು ಮಾಡಬೇಕಾದ ಪ್ರಾಮಾಣಿಕತೆ ಮತ್ತು ಆದರ್ಶಗಳನ್ನು ಎಷ್ಟರ ಮಟ್ಟಿಗೆ ಸಾಕಾರಗೊಳಿಸಿಕೊಳ್ಳಬೇಕೆಂಬುದನ್ನು ವಚನಗಳು ನಿರೂಪಿಸುತ್ತವೆ. ವ್ಯಕ್ತಿಯ ಬದುಕು ಸಾರ್ಥಕಗೊಳ್ಳಲು ಈ ಐಹಿಕ ಮೌಲ್ಯಗಳಲ್ಲಿ ನಂಬಿಕೆ ತುಂಬಾ ಪ್ರಧಾನವಾಗಿರುವುದನ್ನು ಗುರುತಿಸಬಹುದು. ಈ ಮಾನವ ಹಾಗೂ ಮಾಣವೀಯ ಸಂಬಂಧಗಳನ್ನು ಕುರಿತುವಚನಕಾರರು ಅಲ್ಲಲ್ಲಿ ತುಂಬಾ ಅರ್ಥಪೂರ್ಣವಾಗಿ ಹೇಳಿದುದನ್ನು ಇಲ್ಲಿ ಚರ್ಚಿಸಬಹುದಾಗಿದೆ.
ಸಂಬಂಧ’ ಎನ್ನುವುದು ಬರಿ ಮಾತಲ್ಲ, ಅದು ನಡೆದು ತೋರಿಸಿದ ದಾರಿ. ’ಸಂಬಂಧ’ಗಳನ್ನು ಪಾಠದ ಮೂಲಕ ಕಲಿಸುವುದು ಸಾಧ್ಯವಿಲ್ಲ, ಭಾಷಣದಿಂ ತಿಳಿಸುವುದು. ಸಾಧ್ಯವಿಲ್ಲ, ಬರವಣಿಗೆಯಿಂದ ತೋರಿಸುವುದೂ ಅಸಾಧ್ಯ. ಆದರೆ ಸಂಬಂಧಗಳನ್ನು ನಡುವಳಿಕೆಯಲ್ಲಿ ತೋರಿಸಿಯೇ ತಿಳಿಸಬೇಕಾಗುತ್ತದೆ. ’ಸಂಬಂಧ’ದ ಪರಿಕಲ್ಪನೆಯನ್ನು ರೀತಿ-ನೀತಿಗಳಲ್ಲಿ ಕಾಣಬೇಕಾಗುತ್ತದೆ. “ಯಾವ ನಡುವಳಿಕೆಯಿಂದ ವ್ಯಕ್ತಿಗೂ ಮತ್ತು ಸಾರ್ವತ್ರಿಕದಿಂದಲೇ ವಿಶಿಷ್ಟತೆಗೆ ಗುರುತನ್ನು ಪಡೆದುಕೊಳ್ಳುವ ಸಮನ್ವಯದ ಪ್ರಕ್ರಿಯೆ ಸುತ್ತಲಿನ ಸಮಾಜಕ್ಕೂ ಒಳ್ಳೆಯದಾಗುತ್ತದೆಯೋ ಆ ನಡುವಳಿಕೆಗಳ ಕಾಣಿಸುವಿಕೆಯೇ ಸಂಬಂಧ, ಈ ’ಸಂಬಂಧ’ ಹೇಗಿರಬೇಕು ಎಂಬುದನ್ನು ಅಲ್ಲಮಪ್ರಭುವಿನ ವಚನದಲ್ಲಿ ಕಾಣಬಹುದು.

“ಶಿಲೆಯೊಳಗಣ ಪಾವಕನಂತೆ
ಉದಕದೊಳಗಣ ಪ್ರತಿಬಿಂಬದಂತೆ
ಬೀಜದೊಳಗಣ ವೃಕ್ಷದಂತೆ
ಶಬ್ದದೊಳಗಣ ನಿಶ್ಯಬ್ದದಂತೆ
ಗುಹೇಶ್ವರಾ ನಿಮ್ಮ ಶರಣ ಸಂಬಂಧ.’

ಈ ವಚನದ ಮೊದಲ ನಾಲ್ಕು ವಾಕ್ಯಗಳಲ್ಲಿ ನಾಲ್ಕು ಹೋಲಿಕೆಗಳಿವೆ ಈ ಹೋಲಿಕೆಗಳ ಉದ್ದೇಶ ಕೊನೆಯ ವಾಕ್ಯವನ್ನು ಅವುಗಳ ಸಮಾನಾಂತರ ನೆಲೆಯಲ್ಲಿ ಸ್ಪಷ್ಟಪಡಿಸುವುದು, ಮೂರ್ತತೆಯ ಮೂಲಕ ಆಮೂರ್ತತೆಯನ್ನು ಕಾಣಿಸುವ ಪ್ರಯತ್ನವಾಗಿಯೂ ಇದನ್ನು ಗ್ರಹಿಸಬಹುದು. ಇಲ್ಲಿ ಗುಹೇಶ್ವರನನ್ನು ಸಂಬೋಧಿಸುವ ಮೂಲಕ ಹೇಳಲಾಗಿದೆ. ಇದರಿಂದ ಒಂದು ಸಂಗತಿ ಸುಸ್ಪಷ್ಟವಾಗುವುದೇನಂದರೆ, ಇಲ್ಲಿ ’ಸಂಬಂಧ’ ಎನ್ನುವುದು ಇದ್ದೂ ಇಲ್ಲದಂತಿರುವುದು ಅಥವಾ ಇಲ್ಲದಂತಿದ್ದರೂ ಇರುವಂತಹದು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇದು ಮುಖ್ಯವಾಗಿ ದೇವ ಹಾಗೂ ಶರಣ ಸಂಬಂಧವನ್ನು ಹೇಳುತ್ತಿದೆ ಎನಿಸಿದರೂ ವಿಶಾಲಾರ್ಥದಲ್ಲಿ ಮಾನವನ ಎಲ್ಲ ಸಂಬಂಧಗಳು ಹೀಗಿರಬೇಕೆಂಬುದರ ಕಡೆಗೆ ದಿಕ್ಸೂಚಿಯಾಗುತ್ತದೆ
ಮಾನವ ಮತ್ತು ಮಾನವೀಯ ಸಂಬಂಧಗಳಲ್ಲಿ ಒಂದು ಕಡೆ ಶರೀರದ ವಿಶಿಷ್ಟತೆ ಹಾಗೂ ಇನ್ನೊಂದೆಡೆ ಆತ್ಮದ ಸಾರ್ವತ್ರಿಕತೆ ಇರುತ್ತದೆ. ಮಿತಿಯೊಳಗಿದ್ದೂ ಅಮಿತನಾಗ ಬೇಕಾದ ಅಗತ್ಯವನ್ನು ’ಮಾನವೀಯ ಸಂಬಂಧಗಳು ಹೇಳುತ್ತವೆ. ಸಾರ್ವತ್ರಿಕತೆಗಾಗಿ ವಿಶಿಷ್ಟತೆಯನ್ನು ಬಿಟ್ಟುಕೊಡುವುದರಲ್ಲಿ ಸಂತೋಷವನ್ನು ಕಾಣುವ ಹಾಗೂ ಸಾರ್ವತ್ರಿಕದಿಂದಲೇ ವಿಶಿಷ್ಟತೆಗೆ ಗುರುತನ್ನು ಪಡೆದುಕೊಳ್ಳುವ ಸಮನ್ವಯದ ಪ್ರಕ್ರಿಯೆ ವಚನಗಳಲ್ಲಿ ವ್ಯಕ್ತವಾಗುತ್ತದೆ.
’ಬಡವಿರ್ದ ಸತಿಯೆಂದು ನಚ್ಚಿರ್ದೆನಯ್ಯಾ
ಕೈವಿಡಿದ ಸಜ್ಜನೆಯೆಂದು ನಂಬಿರ್ದೆನಯ್ಯಾ
ಅಯ್ಯಾ ನಮ್ಮಯ್ಯನ ಕೈನೊಂದಿತು
ತಗೆದು ಕೊಡಾ ಎಲೆ ಬೆಂಡೋಲೆಕಿತ್ತಿ

ಕಳ್ಳನ ಮರೆಗೊಬ್ಬ ಬಲುಗಳ್ಳ ಬಂದಡೆ ಕೂಡಲ ಸರಗೇಶ ದೇವನಲದೆ ಆರೂ ಇಲ್ಲ ಮಾನವ ಸಂಬಂಧಕ್ಕಿಂತ ಮಾನವೀಯ ಸಂಬಂಧವೇ ಮುಖ್ಯವೆನ್ನುವ ಈ ವಚನದ ಪರಿ ಸಾರ್ವತ್ರಿಕತೆಗಾಗಿ ಮಹತ್ವಪಡೆಯುತ್ತದೆ. ಹೆಂಡತಿಯ ಕಿವಿಯಲ್ಲಿರುವ ಒಂದು ಬೆಂಡೋಲೆ ಕಿತ್ತುಕೊಂಡು ಓಡಿಹೋಗುವ ಕಳ್ಳನ ಬೆನ್ನು ಹತ್ತದೆ, ಹೆಂಡತಿಯ ಸಂಬಂಧವನ್ನೇ ಪ್ರಶ್ನಿಸುವ ಬಸವಣ್ಣನವರು, ಮಾನವೀಯತೆಗೆ ಪ್ರಾಮುಖ್ಯತೆ ಕೊಟ್ಟಿರುವುದು ಇಲ್ಲಿ ಗಮನಾರ್ಹ. ರಕ್ತ ಸಂಬಂಧ ವೈಶಿಷ್ಟ್ಯ ಪೂರ್ಣವಾಗಿದ್ದರೂ ಸಹ ಸಾರ್ವತ್ರಿಕತೆಯ ಪ್ರಶ್ನೆ ಬಂದಾಗ ಇದು ಗೌಣವಾಗಿರಬೇಕೆಂಬುದೇ ಇಲ್ಲಿಯ ಆಶಯ ಹಾಗಂತ ಶರಣರು ಮಾನವ ಸಂಬಂಧಗಳನ್ನು ತಿರಸ್ಕರಿಸಲಿಲ್ಲ, ಆ ಸಂಬಂಧಗಳಿಗೆ ತುಳುಕು ಬಿದ್ದಿದ್ದ ಬಂಧನವನ್ನು ಕಳೆಯಲು ಪ್ರಯತ್ನಿಸಿದರು.

ಸಮಾನತೆ ಸಂಬಂಧಿ ನೆಲೆಗಳನ್ನು ತಿಳಿಸುವಾಗ ವಚನಕಾರರು ’ಉಭಯತನವನ್ನು ಮೀರುವ ಬಗ್ಗೆ ಮಾತನಾಡುತ್ತಾರೆ. ಬಸವಣ್ಣನವರು ಸಮಾನತೆಯ ಬಗ್ಗೆ ಮಾತನಾಡುವಾಗ ಹೆಚ್ಚಾಗಿ ವರ್ಗ ಸಂಬಂಧಿ ಸಮಾನತೆಯನ್ನೇ ಕುರಿತು ಹೇಳುತ್ತಿರುವುದು ಗಮನಾರ್ಹ ಅಂಶ.ಜೇಡರ ದಾಸಿಮಯ್ಯನು ತಮ್ಮ ಒಂದು ವಚನದಲ್ಲಿ ಸಮಾನತೆ ಸಂಬಂಧಿಯಾದ ವಿವಿಧ ನೆಲೆಗಳನ್ನು ಗುರುತಿಸುತ್ತಾರೆ.”ಮಡದಿಯ ಪ್ರಾಣಕ್ಕೆ ಮೊಲೆ ಮುಡಿ ಇದ್ದೀತೆ ?

ಒಡೆಯನ ಪ್ರಾಣಕ್ಕೆ ಇದ್ದೀತೆ ಯಜ್ಯೋಪವೀತ ?
ಕಡೆಯಲ್ಲಿದ್ದ ಅಂತ್ಯಜನು ಹಿಡಿದಿದ್ದನೇ ಹಿಡಿಗೋಲ
ನೀ ತೊಡಕಿಕ್ಕಿದ ತೊಡಕನೀ ಲೋಕದ ಜನರೆತ್ತ
ಬಲ್ಲರೈ ರಾಮನಾಥ

ಇದೊಂದು ಲಿಂಗಸಂಬಂಧದ ಬಗ್ಗೆ ಮಾತನಾಡುವ ವಚನವೆಂದು ಮೇಲ್ನೋಟದಲ್ಲಿ ಕಂಡರೂ ವಾಕ್ಯದಿಂದ ವಾಖ್ಯಕ್ಕೆ ಸಮಾನತೆಯ ನೆಲೆ ವಿಭಿನ್ನವಾಗುತ್ತದೆ.
ಮೊದಲ ಸಾಲು ಲಿಂಗಸಂಬಂಧಿ ಸಮಾನತೆ ಬಗ್ಗೆ, ಎರಡನೆಯ ಸಾಲು ವರ್ಗ ಸಂಬಂಧಿ ಸಮಾನತೆಯ ಬಗ್ಗೆ, ಮೂರನೆಯ ಸಾಲು ಜಾತಿ ಸಂಬಂಧಿ ಸಮಾನತೆಯ ಬಗ್ಗೆ ಹೇಳಲಿಚ್ಚಿಸುತ್ತದೆ. ಆದರೆ ಇವು ಸಹಜ ಹುಟ್ಟಿದ ಸಂಗತಿಗಳಲ್ಲಿ ಅವು ಕಟ್ಟಿಕೊಂಡ ಸಂಬಂಧಗಳು ಎಂಬುವುದನ್ನು ಕೊನೆಯ ಸಾಲು ತಿಳಿಸುತ್ತದೆ. ಆಯ್ದಕ್ಕಿ ಲಕ್ಕಮ್ಮನು ’ಸತಿಪತಿ’ ಎಂಬುದು ಸಾಮಾಜಿಕ ವ್ಯವಸ್ಥೆ, ಅರಿವಿಂಗೆ ಲಿಂಗ ಭೇದವಿಲ್ಲ ಆದ್ದರಿಂದ ಇಲ್ಲಿ ತಾರತಮ್ಯ ಎಣಿಸಬಾರದು ಎನ್ನುವುದು ಆಕೆಯ ವಿಚಾರ. ಸರ್ವ ಸಮಾನತೆಯ ನೆಲೆಯಲಿ ಸಹಬಾಳ್ವೆಯ ಸಮಾಜವನ್ನು ಕಟ್ಟಬೇಕೆನ್ನುವುದು ಶರಣರ ಗುರಿಯಾಗಿತ್ತು, ಹೀಗಾಗಿ ವೃತಿ
ಸಂಬಂಧದ ನೆಲೆಯಲ್ಲಿ ಪ್ರತಿಷ್ಠೆಗಿಂತ ಸದ್ಗುಣಗಳನ್ನೇ ಯೋಗ್ಯತೆಯ ಮಾಪಕವಾಗಿಸಿದರು. ಅದರಲ್ಲೂ ಬಸವಣ್ಣ ಸಮಾಜದಲ್ಲಿ ಜಾತ್ಯಾತೀತ ಸಂಬಂಧಗಳನ್ನು ಬೆಳೆಸಲು ನೇತೃತ್ವ ವಹಿಸಿದರು. ಅಂತೆಯೆ ಅವರ ಅನುಭವ ಮಂಟಪದಲ್ಲಿ ಮಡಿವಾಳ ಮಾಚಯ್ಯ
ಡೋಹರ ಕಕ್ಕಯ್ಯ, ಮಾದರ ಹರಳಯ್ಯ, ಅಂಬಿಗರ ಚೌಡಯ್ಯಾ, ತುರುಗಾಹಿ ರಾಮಣ್ಣ ಸಂಕವ ಬಕ್ಕಣ್ಣ, ಸೂಳೆ ಸಂಕವ್ವ, ಸತ್ಯಕ್ಕೆ, ಮೋಳಿಗೆ ಮಹಾದೇವಮ್ಮ, ಅಕ್ಕಮಹಾದೇವಿ ಕಲ್ಯಾಣಮ್ಮ, ಆಯ್ದಕ್ಕಿ ಲಕ್ಕಮ್ಮನಂಥವರು ಮಂತ್ರಿಯೊಂದಿಗೆ ಸರಿಸಮಾನವಾಗಿ ಕುಳಿತು ಆಧ್ಯಾತ್ಮಿಕ ಚಿಂತನೆಯಲ್ಲಿ ಪಾಲ್ಗೊಂಡಿದ್ದರು. ಬಸವಣ್ಣನವರ ಚಿಂತನೆಯಲ್ಲಿ ಜನಸಾಮಾನ್ಯರ ವೈಯಕ್ತಿಕ ನಡುವಳಿಕೆಯ ಸುಧಾರಣೆಯೂ ಮಹತ್ವದ್ದಾಗಿತ್ತು. ಹೀಗಾಗಿ ಅವರು ಅಂದಿನ ಶರಣರ ಕೌಟುಂಬಿಕ
ಸಂಬಂಧಗಳಲ್ಲಿ ಅದನ್ನು ಬೆಳೆಸಿದರು. ಅವರವರೇ ಆತ್ಮಾವಲೋಕನ ಮಾಡಿಕೊಳ್ಳ ಬಹುದಾದ ರೀತಿ ನೀತಿಗಳನ್ನು ನಡೆದು ತೋರಿದರು. ’ಸತಿ-ಪತಿಗಳೊಂದಾದ ಭಕ್ತಿಹಿತವಾಗಿಪ್ಪುದು ಶಿವಂಗೆ’ ಎನ್ನುವ ದಾರಿ ದೀಪ ಹಚ್ಚಿಟ್ಟರು, ಗಂಡ-ಹೆಂಡತಿಯ ಸಂಬಂಧಗಳು ಹೇಗಿರಬೇಕೆಂಬುದಕ್ಕೆ – ಸಮಗಾರ ಹರಳಯ್ಯಾ-ಕಲ್ಯಾಣಮ್ಮ ಆಯ್ದಕ್ಕಿ ಮಾರಯ್ಯ-ಲಕ್ಕಮ್ಮ, ಮೋಳಿಗೆ ಮಾರಯ್ಯ-ಮಹಾದೇವಮ್ಮ, ಉರಿಲಿಂಗ ಪೆದ್ದಿ-ಪುಣ್ಯಸ್ತ್ರೀ ಕಾಳವ್ವ, ಹಡಪದ ಅಪ್ಪಣ್ಣ-ಲಿಂಗಮ್ಮ ಮೊದಲಾದವರನ್ನು ಇಲ್ಲಿ ಹೆಸರಿಸಬಹುದು.ಮಹಾನುಭಾವಿ ಬಸವಣ್ಣನವರು ಜಗತ್ತಿಗೆ ಕೊಟ್ಟ ಅನೇಕ ಕಾಣಿಕೆಗಳಲ್ಲಿ ’ಅನುಭವ ಮಂಟಪ’ವು ಒಂದು. ಇದು ಜಗತ್ತಿನ ಪ್ರಪ್ರಥಮ ಪಾರ್ಲಿಮೆಂಟ್ ಎಂದು ಕರೆಯಿಸಿಕೊಂಡಿದೆ.
ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ, ಹೊಸ ಧರ್ಮದ ಸ್ಥಾಪನೆಗಾಗಿ ಮಾನವ ಹಾಗೂ ಮಾನವೀಯ ಸಂಬಂಧಗಳನ್ನು ಜೋಡಿಸಿದ ಸಂಗಮ ಸ್ಥಾನ ಈ ಅನುಭವ ಮಂಟಪ, ಇಲ್ಲಿ ಯಾವುದೇ ವರ್ಣ, ವರ್ಗ, ಜಾತಿ, ಲಿಂಗ, ಬಡವ, ಬಲ್ಲಿದ, ಉಚ್ಚ-ನೀಚ, ವಿವಾಹಿತ-ಅವಿವಾಹಿತರೆನ್ನದ ಶಿವಭಕ್ತಿ ಸಂಬಂಧಿಗಳು ಇದರ ಸದಸ್ಯರು, ಸ್ತ್ರೀಯರ ಸಂಖ್ಯೆಯು ಗಣನೀಯವಾಗಿದ್ದ ಅನುಭವ ಮಂಟಪದಲ್ಲಿ ನಡೆಯುವ ಎಲ್ಲ ಚರ್ಚೆಗಳಲ್ಲಿ ಅವರು ಸಕ್ರಿಯವಾಗಿ ಭಾಗವಹಿಸಿದ್ದರು. ಇಲ್ಲಿ ಬೆಸದ ಮಾನವ ಸಂಬಂಧಗಳು ಜಗತ್ತಿನ ಇತಿಹಾಸದಲ್ಲಿ ಶರಣತ್ವಗಳಿಸಿದವು. ವಚನಗಳ ಮುಖಾಂತರ ತಮ್ಮಲ್ಲಿ ಅನುಭವಗಳನ್ನು ಕಟ್ಟಿಕೊಟ್ಟರು. ಜ್ಞಾನ-ಅನುಭಾವಗಳಲ್ಲಿ ಅತೀ ಎತ್ತರಕ್ಕೆ ಬೆಳೆದು ನಿಂತು, ರಕ್ತ ಸಂಬಂಧಕ್ಕಿಂತ ಮಾನವೀಯ ಸಂಬಂಧಗಳ ಅತಿ ಶ್ರೇಷ್ಠತೆಯನ್ನು ಸ್ಪಷ್ಟಪಡಿಸಿದರು.
ವಚನಗಳಲ್ಲಿ ಹೆಣ್ಣು-ಗಂಡಿನ ಸಂಬಂಧ ಸಮಾನತೆಯ ನೆಲೆಯಲ್ಲಿ ಕಂಗೊಳಿಸುತ್ತದೆ.ಈ ಮೊದಲು ಸ್ತ್ರೀಯರಿಗೆ ಕೇವಲ ವಿವಾಹ ಒಂದೇ ಮುಖ್ಯ ಸಂಸ್ಕಾರವಾಗಿತ್ತು. ಪತಿಯ ಸಹಾಯವಿಲ್ಲದೇ ಯಾವುದೇ ಧಾರ್ಮಿಕ ಕಾರ್ಯಗಳನ್ನು ಸ್ತ್ರೀಯರು ಮಾಡುವ ಅಧಿಕಾರವಿರಲಿಲ್ಲ ಆದರೆ ಬಸವಣ್ಣನವರು ಸ್ತ್ರೀಯರಿಗೂ ದೇವ ಮಾನವಳಾಗುವ ಸಂಸ್ಕಾರ ನೀಡಿದ್ದರು. ಈ ಸಿದ್ಧಿಗೆ ಅವಶ್ಯವಾದ ಲಿಂಗದೀಕ್ಷೆ, ವಿಭೂತಿ ಧಾರಣೆ, ಮಂತ್ರ ಪಠಣ ಮೊದಲಾದ ಧಾರ್ಮಿಕ ವಿಧಿಗಳಲ್ಲಿ ಪುರುಷನಷ್ಟೇ ಅಧಿಕಾರವನ್ನು ಅವಳಿಗೂನೀಡಿದರು.
ಈ ಧಾರ್ಮಿಕ ಸ್ವಾತಂತ್ರ್ಯದಿಂದ ತಮ್ಮತನವನ್ನು ಕಂಡುಕೊಂಡ ಮಹಿಳೆಯರು ಅನೇಕ ಮೂಢನಂಬಿಕೆಗಳನ್ನು ದೂರೀಕರಿಸಿ ತನ್ನಲ್ಲಿರುವ ಕೀಳರಿಮೆಯಿಂದ ಹೊರ ಬರಲು ಪ್ರಯತ್ನಿಸಿದರು. ವಚನಕಾರರು ಗಂಡು-ಹೆಣ್ಣುಗಳಲ್ಲಿಯ ಭೇದವನ್ನು ತಿರಸ್ಕರಿಸಿದರು ನಡುವೆ ಸುಳಿದಾಡುವಾತ್ಮನು ಹೆಣ್ಣು ಅಲ್ಲ, ಗಂಡೂ ಅಲ್ಲ ಎಂಬುದು ಅವರ ನಿಲುವು, ಸತಿ-ಪತಿ ಸಂಬಂಧದ ಭಕ್ತಿ ಶಿವನಿಗಷ್ಟೇ ಪ್ರಿಯವಲ್ಲ, ಲೌಕಿಕ ಬದುಕಿಗೂ ಶ್ರೇಯಸ್ಕರ. ಬಸವಣ್ಣನು ಮಹಿಳೆಯನ್ನು ಕೇವಲ ಸತಿಯಾಗಿಸುವ, ಅಕ್ಕನಾಗಿಸುವ, ತಾಯಿಯಾಗಿಸುವ ಸಂಬಂಧಕ್ಕಷ್ಟೇ ಸೀಮಿತಗೊಳಿಸಲಿಲ್ಲ. ಅವಳಿಗೆ ಸ್ವಾತಂತ್ರ್ಯ ಮತ್ತು ಸ್ವಾವಲಂಬಿ ಬದುಕನ್ನು ಸಾಗಿಸಲು ಕಾಯಕವನ್ನು ತನ್ನದಾಗಿಸಿಕೊಳ್ಳಲು ಅನುವು ಮಾಡಿಕೊಟ್ಟರು. ಇಲ್ಲಿಯ ಸ್ತ್ರೀ ಅವಲಂಬಿತಳಲ್ಲ, ಕಾಯಕ ಜೀವಿ ಎಂಬುದು ಗಮನಾರ್ಹ.
’ಎಮ್ಮ ತಾಯಿ ನಿಂಬಿಯವ್ವ ನೀರನೆರೆದುಂಬಳು
ಎಮ್ಮಕ್ಕ ಕಂಚಿಯಲ್ಲಿ ಬಾಣಸವ ಮಾಡುವಳು’
ಎಂದು ಬಸವಣ್ಣ ಹೇಳಿರುವುದನ್ನು ಇಲ್ಲಿ ಗಮನಿಸಬಹುದು. ಇಲ್ಲಿರುವ ಅನೇಕ ತಾಯಂದಿರು ಪುರುಷನ ಸತಿಯಾಗಿ ನಿಂತು, ಮಹಾನ್ ಸತಿಯಾಗಿ ಬೆಳೆದ ಪರಿಗಳನ್ನು ನೀಲಾಂಬಿಕೆ, ಗಂಗಾಂಬಿಕೆ, ನಾಗಮ್ಮ, ಲಿಂಗಮ್ಮ, ಲಕ್ಕಮ್ಮ, ಮುಕ್ತಾಯಕ್ಕೆ ಗೊಗ್ಗವ್ವಯಂಥವರಲ್ಲಿ ಕಾಣಬಹುದು.
ಮಾನವನ ಲೌಕಿಕವಾದ ಎಲ್ಲ ಸಂಬಂಧಗಳನ್ನು ದೈವ ಕೇಂದ್ರಿತವಾಗಿ ನೋಡುವ ಬಸವಣ್ಣನವರು ಈ ಮೂಲಕ ಕೆಳವರ್ಗದವರಲ್ಲಿ ವಿಶ್ವಾಸ ತುಂಬಿದರು. ತಂದೆ ನೀನು, ತಾಯಿ ನೀನು, ಬಂಧು, ಬಳಗ, ಎಲ್ಲವೂ ನೀನೇ’ ನೀನಲ್ಲದೆ ಇಲ್ಲಿ ಮತ್ತಾರು ಇಲ್ಲ ಎಂಬುದನ್ನು ಕಾಯಕ ಜೀವಿಗಳ ಮನದಲ್ಲಿ ಗಟ್ಟಿ ಕಾಳಾಗಿಸಿ ಬೆಳೆಸಿದರು.ಇದು ಹಿರಿಯರನ್ನು ಬಂಧುಗಳನ್ನು ಅವಜ್ಞೆಯಿಂದ ನೋಡುವುದನ್ನು ತಪ್ಪಿಸುವುದಿಲ್ಲವೆ? ಮಾನವರ ನಡುವಣ ಸಂಬಂಧವು ಸೌಹಾರ್ದಯುತವಾಗಿ ಸೌಜನ್ಯಯುತ ವಾಗಿದ್ದರೆ ಅಲ್ಲಿಯ ಬದುಕು ತುಂಬಾ ಸುಂದರವಾಗಿರುತ್ತದೆ ಎಂದು ಬಸವಣ್ಣ ನಂಬಿದ್ದರು. ಅದಕ್ಕಾಗಿ ಹಲವು ಸಲ ಈ ಸಂಬಂಧಗಳು ಗಟ್ಟಿಗೊಳ್ಳಲು ನೀತಿ ಪಾಠಗಳನ್ನು ಕಲಿಸಲು ಅವರು ಮರೆಯುವುದಿಲ್ಲ ಸೌಹಾರ್ದ ಬದುಕಿಗೆ ಸ್ಪಂದಿಸದ ಜನರನ್ನು ತರಾಟೆಗೆ ತಗೆದುಕೊಂಡು ಅವರಿಗೆ ಎಚ್ಚರಿಕೆ ಕೊಡುವುದರಲ್ಲೂ ಹಿಂದೆ ಬೀಳುವುದಿಲ್ಲ.

’ಏನಿ ಬಂದಿರಿ, ಹದುಳಿದ್ದಿರೆ ಎಂದಡೆ
ನಿಮ್ಮೆಸಿರಿ ಹಾರಿ ಹೋಹುದೇ?

ಕುಳ್ಳಿರೆಂದಡೆ ನೆಲ ಕುಳಿಹೋಹುದೇ?
ಒಡನೆ ನುಡಿದರೆ ಸಿರ, ಹೊಟ್ಟೆಯೊಡೆವುದೇ?
ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ
ಮೂಗು ಕೊಯ್ದುದು ಮಾಣ್ಣನೆ ಕೂಡಲ ಸಂಗಮದೇವಯ್ಯ?”

ಮಾನವ ಸಂಬಂಧಗಳಲ್ಲಿ ಪ್ರತಿಯೊಬ್ಬರು ಬಯಸುವ ಗುಣಗಳಿವು ಈ ಗುಣಗಳು ವ್ಯಕ್ತಿಗಳಲ್ಲಿ ಹೆಚ್ಚು ಆಳವಾಗಿಯೂ, ವ್ಯಾಪಕವಾಗಿಯೂ ನೆಲೆಗೊಂಡರೆ ವ್ಯಕ್ತಿಗೆ ಸಂತೋಷದಂತೆಯೇ ಸಾಮಾಜಿಕ ನೆಮ್ಮದಿಯೂ ನೆಲೆಯೂರುತ್ತದೆ. ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳುವ ಪರಿಯಾವುದು? ಎಂಬುದರ ಚಿಂತನೆ ಈ ವಚನದಲ್ಲಿದೆ. ವ್ಯಕ್ತಿ ಸಂಬಂಧದ ಮೂಲಕವೇ ಸಾಮಾಜಿಕ ಸಂಬಂಧಗಳನ್ನು ಉನ್ನತ ಮಟ್ಟದಲ್ಲಿ ಗಳಿಸಿದವರು ಬಸವಣ್ಣನವರು.
ಜಾತ್ಯಾತೀತ ಸಮಾಜದ ನಿರ್ಮಾಣ ಬಸವಣ್ಣನ ಕನಸಾಗಿತ್ತು. ಅದನ್ನು ಬಹುಮಟ್ಟಿಗೆ ಅವರೂ ಸಾಧಿಸಿಯೂ ಇದ್ದರು. ಬಸವ ಪುರಾಣದಲ್ಲಿ ಬರುವ ಒಂದು ಪ್ರಸಂಗ ಅವರ ’ಮಾನವೀಯತೆಯನ್ನು ಎತ್ತಿ ತೋರುತ್ತದೆ. ಬಸವ ಯುಗದ ಹಿರಿಯ ಮಾಹೇಶ್ವರನೆನಿಸಿದ್ದ “ಕಂಬಳಿ ನಾಗಿದೆವ’ ಒಮ್ಮೆ ಹೊತ್ತಲ್ಲದ ಹೊತ್ತಿನಲ್ಲಿ ಸಂಬೋಳಿ ಎಂದು ಕಲ್ಯಾಣ ಪಟ್ಟಣದಲ್ಲಿ ನಡೆದು ಹೋಗುತ್ತಿದ್ದ, ಅಂತ್ಯಜನಾಗಿದ್ದವನು ಬರಬಾರದ ಈ ಸಮಯದಲ್ಲಿ ಇತ್ತ ಬಂದನೆಂದು ಕೆಲವರು ಅವನನ್ನು ಕಲ್ಲುಗಳಿಂದ ಹೊಡೆದರು. ರಕ್ತ ಸೋರಿಸಿಕೊಳ್ಳುತ್ತ, ಮೈತುಂಬಾ ಗಾಯಗಳಾಗಿ ಕಣ್ಣು ಕಾಣದೆ ನಡೆದಾಡುತ್ತಿದ್ದ, ಆಗ ರಕ್ಷಣೆಗೆ ಬಂದ ವ್ಯಕ್ತಿ ಅವನನ್ನು ಹಿಡಿದುಕೊಂಡು ನೀವೆಲ್ಲಿಗೆ ಹೋಗಬೇಕು ಕಳಿಸುತ್ತೇನೆ ಎಂದ.
ಆಗ ನಾಗಿದೇವ ಆತನನ್ನು ಅಣ್ಣ ಕಲ್ಯಾಣದಣ್ಣ ಬಸವಣ್ಣ ತಂದೆ ಎಂದನಂತೆ. ರಕ್ಷಿಸಲು ಬಂದವರಿಗೆ ಆಶ್ಚರ್ಯವಾಗಿ ಕೇಳುತ್ತಾರೆ. ಹೌದು ಕಣ್ಣು ಮುಚ್ಚಿಕೊಂಡು ರಕ್ತ ಸುರಿಸಿಕೊಂಡು ಓಡಾಡುವ ನಿನಗೆ ನನ್ನ ಗುರುತು ಹೇಗೆ ಸಿಕ್ಕಿತು ಎಂದಾಗ, ನಮ್ಮಂಥವರನ್ನು ನಡುಬೀದಿಯಲ್ಲಿ ತಬ್ಬಿಕೊಳ್ಳುವವರು ಕಲ್ಯಾಣದಲ್ಲಿ ಯಾರಿದ್ದಾರೆ? ಅಂಥ ಯಾರಾದರೂ ಇದ್ದರೆ ಅವರೊಬ್ಬರೇ ಬಸವಣ್ಣ ಎಂದನಂತೆ. ಆಗ ಗಾಯಗೊಂಡ ಆತನನ್ನು ಕರೆದುಕೊಂಡು ತಮ್ಮ ಮಹಾಮನೆಗೆ ಬಂದು ನೀಲಾ ನೋಡಿಲ್ಲಿ ಯಾರು ಬಂದಿದ್ದಾರೆ ಬಾ ಇಲ್ಲಿ ನೋಡು ಬಾ ಎಂದು ಬಸವಣ್ಣ ಕರೆದಾಗ, ಮೈತುಂಬಾ ರಕ್ತ ಮೆತ್ತಿಕೊಂಡು, ಚಿಂದಿಬಟ್ಟೆಯಲ್ಲಿದ್ದ, ಕಣ್ಣು ಕುರುಡಾಗಿದ್ದ ಆತನನ್ನು ನೋಡಿದ ನೀಲಾಂಬಿಕೆ ’ಗಂಡನಿಗೆ’ ನಿಮಗೆಲ್ಲಿ ಸಿಕ್ಕ ಈ ’ಕೂಡಲ ಸಂಗಮದೇವಾ’ ಎಂದು ಕೇಳುತ್ತಾಳೆ. ಎಂಥ ಮಾನವೀಯ ಸಂಬಂಧಗಳಿವು. ಓದಿದರೆ ಒಂದು ಕ್ಷಣ ಮೈ ಜುಮ್ಮೆನ್ನುವುದಿಲ್ಲವೇ? ಶರಣರು ಇಂಥ ಸಂಬಂಧಗಳನ್ನು ಕಟ್ಟಿ ಬೆಳೆಸಿದ್ದನ್ನು ವಚನಗಳಲ್ಲಿ ಮನಗಾಣಬಹುದು. ಶರಣರು ಕಟ್ಟಬಯಸಿದ್ದ ಸಂಬಂಧಗಳಿಗೆ ಸ್ವಾತಂತ್ರ್ಯ, ಸರ್ವ ಸಮಾನತೆ, ಪರಸ್ಪರ ಬಂಧು ಭಾವಗಳೇ ಮೂಲಾಧಾರಗಳು, ವರ್ಗ ವರ್ಣ, ಲಿಂಗ ಭೇದಗಳಿಲ್ಲದ, ಶಿವಭಕ್ತಿಯೊಂದೇ ಇವುಗಳ ತಳಹದಿ, ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರೆಲ್ಲ ಒಂದೇ ಎಂಬ ಮನೋಧರ್ಮ ಇಲ್ಲಿಯದು. ಜಾತಿರೂಢ ಮೂಲವಾದ ಪರಂಪರೆಯನ್ನು ಅಲ್ಲಗಳೆಯುವ ಇಲ್ಲಿಯ ಸಂಬಂಧಗಳು ಗುಣ ಮೂಲ, ಯೋಗ್ಯತೆ ಮೂಲಗಳಿಗೆ ಮಹತ್ಮಕೊಟ್ಟಿವೆ.

ಅಪ್ಪನು ನಮ್ಮ ಮಾದಾರ ಚನ್ನಯ್ಯ
ಬೊಪ್ಪನು ನಮ್ಮ ಡೋಹರ ಕಕ್ಕಯ್ಯ
ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ
ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ
ಎನ್ನನೇತಕ್ಕರಿಯಿರಿ ಕೂಡಲ ಸಂಗಮದೇವ’

ಇಲ್ಲಿಯ ಬಸವ ಸಿದ್ದಾಂತ ವ್ಯಕ್ತಿ ಶುದ್ಧಿಯಲ್ಲಿ ಬಿಚ್ಚಿಕೊಂಡು ಸಮಾಜ ಶುದ್ಧಿಯಲ್ಲಿ ವಿಸ್ತಾರಗೊಳ್ಳುವುದನ್ನು ಕಾನಬಹುದು. ಅಭೇದ ಸಂಸ್ಕೃತಿಯ ವಾತಾವರಣ ನಿರ್ಮಿಸಲು ಬಸವಣ್ಣ ಕಟ್ಟಿಕೊಡುವ ಇಂಥ ಸಂಬಂಧಗಳು ಆತ್ಮಕಲ್ಯಾಣದ ಜೊತೆಗೆ ಸಮಾಜ ಕಲ್ಯಾಣದ ವಿಷಯಗಳಾಗಿ ನಿಂತಿರುವುದನ್ನು ಅರಿಯಬಹುದು. ಶರಣರ ’ಮಾನವೀಯ ಸಂಬಂಧಗಳ ಬಹುಮುಖ್ಯ ಕಾರ್ಯಗಳು ಶರಣ ಸಮುದಾಯದ ಸಂಘಟನೆ ಅನುಭವ ಮಂಟಪದ ಸ್ಥಾಪನೆ, ಸಿದ್ಧಾಂತಗಳ ರಚನೆ- ಪ್ರಸಾರ, ವಚನ ಸಾಹಿತ್ಯದ ಸೃಷ್ಟಿ ಇತ್ಯಾದಿಗಳಲ್ಲಿ ಕಾಣಸಿಗುತ್ತವೆ,
ಈ ಮೂಲಕ ಶರಣರು ಸಮಾಜಶುದ್ಧಿ ಕಾರ್ಯಕ್ಕೆ ಕೈಹಾಕಿದರು ಸಮಾಜ ಶುದ್ಧವಾಗುವುದೆಂದರೆ ಸಮಾಜದಲ್ಲಿ ಸಮಾನತೆಯನ್ನು ತರುವುದು, ಈ ಸಾಮಾಜಿಕ ಸಮಾನತೆಗೆ ಮೂಲವಾದುದು ’ಆರ್ಥಿಕ ಸಮಾನತೆ’ ಎಂಬುದನ್ನು ಅರಿತಿದ್ದ ಬಸವಣ್ಣ ಈ ಅರ್ಥ ತತ್ವಕ್ಕೆ- ’ಕಾಯಕ-ದಾಸೋಹ’ದ ಸಂಬಂಧವನ್ನು ಕಲ್ಪಿಸಿದ. ಕಾಯಕದಿಂದ ಗಳಿಸಬೇಕು. ದಾಸೋಹದ ಮೂಲಕ ಬಳಸಬೇಕು. ಈ ರೀತಿಯಲ್ಲಿ ಕಲ್ಯಾಣ ರಾಜ್ಯ’ ಕಟ್ಟುವುದು ಬಸವಣ್ಣನ ಉದ್ದೇಶವಾಗಿತ್ತು ಇದೊಂದು ಅದ್ಭುತವಾದ ಕೊಡಿಗೆ ಎನ್ನಬಹುದು.
ಶರಣರು ಕೇವಲ ತಮ್ಮ ಭಾವನೆಗಳನ್ನು ಪ್ರಕಟಿಸಲು ಸಂಬಂಧಗಳನ್ನು ಹೇಳಿಕೊಳ್ಳಲಿಲ್ಲ, ಬದುಕನ್ನು ಸುಂದರಗೊಳಿಸಲು ಅವರು ಶ್ರಮಿಸಿದರು. ಈ ಉತ್ಕಟ ಹೋರಾಟಕ್ಕೆ ಅವರು ಆಯ್ದುಕೊಂಡ ಮಾರ್ಗ ಧಾರ್ಮಿಕವಾದುದು, ಇದಕ್ಕಾಗಿ ಎಲ್ಲರಲ್ಲಿ ಸಮಾನತೆ ತರಲು ’ಅಂಗ-ಲಿಂಗ’ ಸಂಬಂಧದ ಪರಿಕಲ್ಪನೆ ತಂದರು. ’ವ್ಯಕ್ತಿ’ ’ಅಂಗ’ ಭಾವವನ್ನು ನೀಗಿ ’ಲಿಂಗ’ ಸಂಬಂಧವನ್ನು ಆಶ್ರಯಿಸಿಕೊಳ್ಳಬೇಕೆಂದು ಶರಣರು ಹೇಳಿದರು ಇದಕ್ಕಾಗಿ ವ್ಯಕ್ತಿ ಅನುಸರಿಸಬೇಕಾದುದು ಘಟ್‌ಸ್ಥಲಮಾರ್ಗವನ್ನು, ಈ ಮೂಲಕ ವ್ಯಕ್ತಿಯು ಶ್ರದ್ಧೆ, ನಿಷ್ಠೆ, ಎಚ್ಚರಿಕೆ, ಅನುಭವ, ಆನಂದ, ಸಮರಸ ಭಾವಗಳನ್ನು ಹೊಂದುತ್ತ, ಕ್ರಮವಾಗಿ ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ, ಸ್ಥಿತಿಗಳನ್ನು ಪಡೆದು ಲಿಂಗ ಮುಖಿಯಾಗುವುದು ಇದರ ಗುರಿ, ಈ ಮೂಲಕ ವ್ಯಕ್ತಿ ’ಲಿಂಗ-ವ್ಯಕ್ತಿತ್ವ’ ಪಡೆದು ಸಮಾಜದಲ್ಲಿ ಶರಣನಾಗಿ ನಿಲ್ಲುವುದನ್ನು ತುಂಬಾ ವೈಜ್ಞಾನಿಕವಾಗಿ ಸಾಧಿಸಿ ತೋರಿಸಿದರು.
ವಚನಗಳಲ್ಲಿ ಪ್ರತಿಪಾದಿತವಾಗಿರುವ ’ಸಾಮಾಜಿಕ ಜವಾಬ್ದಾರಿಗೆ ಗುರು-ಲಿಂಗ-ಜಂಗಮ ತತ್ವಗಳ ಸಂಬಂಧ ಪ್ರಮುಖ ಆಶಯ “ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂಬ ಸೂತ್ರದಡಿಯಲ್ಲಿ ಈ ತತ್ವಗಳು ಕಾರ್ಯಗೈಯಬೇಕು ’ಗುರು-ಶಿಷ್ಯ ಸಂಬಂಧ ಶರೀರ ಪ್ರಾಣದಂತೆ ಭಿನ್ನವಿಲ್ಲದೆ ಇರಬೇಕು’ ಎನ್ನುತ್ತಾನೆ ಆದಯ್ಯ, ಈ ಸಂಬಂಧ ಘನವಾದುದು ಸಮಾಜ ಕಲ್ಯಾಣಕ್ಕೆ ಮಾರ್ಗದರ್ಶಕ ಗುರು ತನ್ನಂತಹ ಶಿಷ್ಯನ ನಿರ್ಮಾಣ ಆತನ ಕಾರ್ಯ ಹೀಗಾಗಿ ಗುರು-ಶಿಷ್ಯರ ಸಂಬಂಧ ’ತೆರೆಯಡಗಿದ ಸಾಗರದೊಳಗೆ ಆಕಾಶ ಬಿಂಬದಿ ಅಂಬರ ಜಲವನೊಳಕೊಂಡಂತೆ ಗುರು-ಶಿಷ್ಯ ಸಂಬಂಧವಿರಬೇಕು. ಇಂಥ ಗುರು-ಲಿಂಗಿ-ಜಂಗಮರಾರು ಎಂಬುದನ್ನು ನಾಗಲಾಂಬಿಕೆಯ ವಚನವೊಂದರಲ್ಲಿ ಅರಿಯಬೇಕು.
ಗುರು ಸಂಬಂಧಿ ಗುರುಭಕ್ತಯ್ಯನು ಲಿಂಗ ಸಂಬಂಧಿ ಪ್ರಭು ದೇವರು ಜಂಗಮ ಸಂಬಂಧಿ ಸಿದ್ಧರಾಮನು ಪ್ರಸಾದ ಸಂಬಂಧಿ ಮರುಳ ಶಂಕರದೇವರು ಪ್ರಾಣಲಿಂಗ ಸಂಬಂಧಿ ಅನಿಮಿಷದೇವರು ಶರಣ ಸಂಬಂಧಿ ಘಟ್ಟಿವಾಳಯ್ಯನು ಐಕ್ಯ ಸಂಬಂಧಿ ಅಜಗಣ್ಣಯ್ಯನು ಸರ್ವಾಚಾರ ಸಂಬಂಧಿ ಚನ್ನಬಸವಣ್ಣನು

ಇಂತವರ ಸಂಬಂಧ ಎನ್ನ ಸವಾಂಗದಲ್ಲಿ ನಿಂದು ಬಸವಣ್ಣ ಪ್ರಿಯ ಚನ್ನಸಂಗಯ್ಯನ ಹೃದಯ ಕಮಲದಲ್ಲಿ ನಿಜನಿವಾಸಿಯಾಗಿದ್ದನು. ಈ ಎಲ್ಲ ಶರಣರ ಸಂಘದಿಂದ ತಾನು ಸಾಲೋಕ್ಯ ಪಡೆದೆನೆಂದು ಇಲ್ಲಿ ಹೇಳಿರುವುದನ್ನು ಗಮನಿಸಬೇಕು. ಗಂಡು-ಹೆಣ್ಣಿನಲ್ಲಿ ಅಭೇದ ಕಲ್ಪಿಸುವ ನಿಟ್ಟಿನಲ್ಲಿ ಶರಣ ಸತಿ-ಲಿಂಗಪತಿ ಸಂಬಂಧ ವಚನಗಳಲ್ಲಿ ಯಥೇಚ್ಛವಾಗಿ ಕಾಣಸಿಗುತ್ತದೆ. ಎಮ್ಮ ನಲ್ಲನವ್ವಾನಲ್ಲರಿಗೆ ನಲ್ಲನು ವಂಚನೆಗೆ ನೆರೆಯನು, ನಿರ್ವಂಚನೆಗೆ ನರೆವನು ಉರಿಲಿಂಗದೇವನು’ಎನ್ನುತ್ತಾನೆ ಉರಿಲಿಂಗದೇವ. ಶರಣಸತಿಯಾಗಿ ಲಿಂಗ ಪತಿಯನ್ನು ಆ ಶರಣ ವರ್ಣಿಸುವ ಪರಿ ಅನನ್ಯವಾದುದು.

’ಒಬ್ಬನೆ ಗುರುವನಿವನು ಒಬ್ಬನೆ ಚಲುವನಿವನು
ಒಬ್ಬನೆ ಧನಪತಿ ಕೇಳಾ ಕೆಳದಿ
ಇವಗೆ ಹಿರಿಯರಿಲ್ಲ ಇವಗೆ ಒಡೆಯರಿಲ್ಲ
ಇಂತಪ್ಪ ನಲ್ಲನು ಲೇಸು ಕಾಣೆಲಗೆ’ |
ಇಂಥ ನಲ್ಲನೊಂದಿಗೆ ಒಂದಾಗುವ ಪರಿಯನ್ನು ಹೃದಯತುಂಬಿ ವರ್ಣಿಸುತ್ತಾರೆ.
ಇದರೊಂದಿಗೆ – ಸಮಾಜ ಸಂಬಂಧ, ನಡೆ-ನುಡಿ ಸಂಬಂಧ, ದೇವ-ಭಕ್ತರ ಸಂಬಂಧ,ಧರ್ಮ-ಭಕ್ತಿಯ ಸಂಬಂಧ ಆಚಾರ-ವಿಚಾರಗಳ ಸಂಬಂಧ-ಅಂತರಂಗ-ಬಹಿರಂಗಗಳ ಸಂಬಂಧದಂತಹ ಅನೇಕ ವಿಷಯಗಳ ಕೂಡಲ ಸಂಗಮ ವಚನ ಸಾಹಿತ್ಯ, ಅಲ್ಲಿ ಮಾನವೀಯ ಸಂಬಂಧಗಳ ಅನೇಕ ಎಳೆಗಳು ಕಾಣಸಿಗುತ್ತಿದ್ದು, ಮಾನವರು ಅವುಗಳನ್ನು ತುಂಬಾ ಎಚ್ಚರಿಕೆಯಿಂದ ಎತ್ತಿಟ್ಟುಕೊಂಡು ಜೋಡಿಸಿ ತಮಗೆ ಬೇಕಾದಂತೆ ನೇಯ್ದುಕೊಂಡು ಜೀವನಕ್ಕೆ ಉಪಯೋಗಿಸಬೇಕಾಗಿದೆ ಎಂದು ಹೇಳಬಹುದು.

ಡಾ.ಸೋಮನಾಥ ಯಾಳವಾರ, ಹಿರಿಯ ಸಾಹಿತಿಗಳು,
ಹುಮನಾಬಾದ್, ಜೀ.ಬೀದರ್.