
ಕಲಬುರಗಿ : ಸೆ.3:ಪರಿಸರ ಕೇಂದ್ರಿತ ವಿಕಾಸದಿಂದ ಮಾತ್ರ ಪ್ರಜಾಹಿತ ಕಾಪಾಡಲು ಸಾಧ್ಯವಾಗುತ್ತದೆ. ಮಾನವ ಕೇಂದ್ರಿತ ಅಭಿವೃದ್ಧಿ ಅಪಾಯಕಾರಿ ಆಗಬಲ್ಲದು ಎಂದು ಭಾರತ ವಿಕಾಸ ಸಂಗಮದ ಸಂಸ್ಥಾಪಕ ಕೆ.ಎನ್.ಗೋವಿಂದಾಚಾರ್ಯ ಹೇಳಿದರು.
ಕಲಬುರಗಿಯ ಖಮಿತ್ಕರ್ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿದ್ದ ಭಾರತ ವಿಕಾಸ ಸಂಗಮದ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಆರ್ಥಿಕತೆ, ನೈತಿಕತೆ ಮತ್ತು ಪರಿಸರದ ವಿಕಾಸವೇ ಈ ದೇಶದ ಅಭಿವೃದ್ಧಿಯ ಮೂಲ ಸೂತ್ರವಾಗಬೇಕು. ಸ್ವದೇಶಿ ಹಾಗೂ ವಿಕೇಂದ್ರೀಕೃತ ವ್ಯವಸ್ಥೆಯ ದಾರಿಯಲ್ಲಿ ಸಾಗಿದಾಗ ಮಾತ್ರ ಭಾರತದ ಮೂಲ ಅಸ್ಮಿತೆ ಉಳಿಸಿಕೊಳ್ಳಲು ಸಾಧ್ಯ ಎಂದರು.
ಪ್ರಾಸ್ತಾವಿಕ ಮಾತನಾಡಿದ ವಿಕಾಸ ಅಕಾಡೆಮಿ ಮುಖ್ಯಸ್ಥರಾದ ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಅವರು, 2025 ರಲ್ಲಿ ನಡೆಯಲಿರುವ ಭಾರತ ವಿಕಾಸ ಸಂಗಮದ ಬೃಹತ್ ಸಮಾಗಮವಾಗಲಿರುವ
7 ನೇ ಭಾರತೀಯ ಸಂಸ್ಕøತಿ ಉತ್ಸವದಲ್ಲಿ ಬಾಲ ಸಂಗಮ, ಯುವ ಸಂಗಮ, ಜ್ಞಾನ ಸಂಗಮ, ಮಾತೃ ಸಂಗಮ, ಕೃಷಿ ಸಂಗಮ, ವಿಜ್ಞಾನ ಸಂಗಮ, ತಂತ್ರಜ್ಞಾನ ಸಂಗಮ, ಮೊದಲಾದ ವಿವಿಧ ಕಾರ್ಯಕ್ರಮಗಳಲ್ಲದೆ, ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸುವರ್ಣ ಮಹೋತ್ಸವ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 51 ಗಣ್ಯರನ್ನು ಗೌರವಿಸಲಾಗುವುದು. ಪ್ರತಿಯೊಬ್ಬರ ಜೀವಿತ ಕಾಲಾವಧಿಯಲ್ಲಿ ಒಮ್ಮೆ ಮಾತ್ರ ಕಾಣಸಿಗುವ ಈ ಮಹೋನ್ನತ ಸಮಾರಂಭದಲ್ಲಿ ಸರ್ವರೂ ಭಾಗವಹಿಸಿ ಕಣ್ತುಂಬಿಕೊಂಡು ಪ್ರೇರಣೆ ಪಡೆಯಬೇಕು ಎಂದು ಹೇಳಿದರು.
ಭಾರತ ವಿಕಾಸ ಸಂಗಮದ ರಾಷ್ಟ್ರೀಯ ಸಂಯೋಜಕ ಮಾಧವ ರೆಡ್ಡಿ, ಸಹ ಸಂಯೋಜಕ ಅಶೋಕ ಟಂಕಸಾಲೆ, ಅಶೋಕ ಠಾಕೂರ್, ಅನೀಲ ತ್ರಿವೇದಿ, ಸಿದ್ಧಾರ್ಥ ತ್ರಿವಾರಿ, ಡಾ.ವಾಸುದೇವ ಅಗ್ನಿಹೋತ್ರಿ, ಸಂಘಟನೆ ಕಾರ್ಯದರ್ಶಿ ಸುರೇಶ ಅಗ್ನಿಹೋತ್ರಿ, ನೃಪತುಂಗ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಜೋಶಿ, ಮಾತರ್ಂಡ ಶಾಸ್ತ್ರಿ, ವಿ. ಶಾಂತರೆಡ್ಡಿ, ಸಂಜೀವ ಸಿರನೂರಕರ್, ವಿಶ್ವನಾಥ ಕೋರಿ, ಚನ್ನವೀರಪ್ಪ ಗುಡ್ಡ, ರೇವಣಸಿದ್ದಪ್ಪ ಜಲಾದೆ ಇತರರಿದ್ದರು. ಭಾರತ ವಿಕಾಸ ಸಂಗಮದ ರಾಷ್ಟ್ರೀಯ ಕೋಶಾಧಿಕಾರಿ ಚಂದ್ರಶೇಖರ ಢವಳಗಿ ನಿರೂಪಿಸಿದರು.