ಮಾನವ ಕುಲಕ್ಕೆ ಜಗದ್ಗುರು ರೇಣುಕಾಚಾರ್ಯರ ಕೊಡುಗೆ ಮಹೋನ್ನತವಾದದ್ದು


ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮಾ.೨೩; ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ವೀರಶೈವ ತತ್ವಗಳು ಇಂದಿಗೂ ಪ್ರಚಲಿತವಾಗಿವೆ. ಶ್ರೀ ಸಿದ್ದಾಂತ ಶಿಖಾಮಣಿ ಗ್ರಂಥದಲ್ಲಿ ಸಮಾನತೆಯನ್ನು ಬೋಧಿಸಿದ ರೇಣುಕಾಚಾರ್ಯರರು ಮಾನವ ಕುಲಕ್ಕೆ ಮಹೋನ್ನತ ಕೊಡುಗೆ ನೀಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಬಣ್ಣಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರ ಸಭೆ ಸಹಯೋಗದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ, ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.ಮಾನವ ಕುಲಕ್ಕೆ ಧರ್ಮ ಎನ್ನುವುದು ಮುಖ್ಯವಾದದು. ಎಲ್ಲರೂ ಧರ್ಮದಿಂದ ನಡೆದುಕೊಂಡಾಗಲೇ ಮಾನವರಾಗಿ ಜನಿಸಿದ್ದಕ್ಕೆ ಸಾರ್ಥಕವಾಗುತ್ತದೆ. ಧಾರ್ಮಿಕ ಸ್ವಾತಂತ್ರ್ಯ, ಮಹಿಳಾ ಸಮಾನತೆ, ಸರ್ವರಿಗೂ ಸಮಪಾಲು ಸಮಬಾಳು ಎಂಬ ಪರಿಕಲ್ಪನೆಗಳಿಗೆ ರೇಣುಕಾಚಾರ್ಯರ ಬೋಧನೆಗಳು ಮೂಲೆ ಸೆಲೆಯಾಗಿವೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯೋಣ, ಎಲ್ಲರನ್ನೂ ಸಮಾನರಾಗಿ ಕಾಣೋಣ. ಮಹಾತ್ಮರನ್ನು ಯಾವುದೇ ಜಾತಿ ಸಂಕೋಲೆ ಸಿಲುಕಿಸಬಾರದು. ಅವರ ವ್ಯಕ್ತಿತ್ವ ಸೀಮಿತಗೊಳಿಸದೆ, ವಿಶ್ವರೂಪವಾಗಿ ನೋಡಬೇಕು. ಸಾರ್ವತ್ರಿಕ ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಹಿನ್ನಲೆಯಲ್ಲಿ ಜಯಂತಿಯನ್ನು ಸರಳವಾಗಿ ಆಚರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.