ಮಾನವ ಕಳ್ಳ ಸಾಗಾಣಿಕೆ ಸಮಾಜಕ್ಕೆ ಕಂಟಕ

ಕೋಲಾರ, ಆ.೨- ಸಮಾಜಕ್ಕೆ ಕಂಟಕವಾದ ಪಿಡುಗಾಗಿರುವ ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ತಡೆಗೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಶಂಕರ್ ವಾಣಿಕ್ಯಾಳ್ ಕರೆ ನೀಡಿದರು.
ಜಿಲ್ಲಾಡಳಿತ,ಜಿಪಂ, ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳು ಹಾಗೂ ಬೆಂಗಳೂರಿನ ಐಜೆಎಂ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ನಡೆದ ಮಾನವ ಕಳ್ಳ ಸಾಗಾಣಿಕೆ ತಡೆದಿನಾಚರಣೆ-೨೩ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಾನವ ಕಳ್ಳ ಸಾಗಾಣಿಕೆಯೂ ಬಲವಾಗಿ ಹಾಗೂ ಮಿತಿಮೀರಿ ನಡೆಯುತ್ತಿರುವುದು ಕಂಡು ಬರುತ್ತಿದ್ದು, ಈ ಪಿಡುಗಿಗೆ ಮಕ್ಕಳು, ಅಪ್ರಾಪ್ತ ವಯಸ್ಕರು, ಕಾರ್ಮಿಕ ವರ್ಗ,ಮಹಿಳೆಯರು ಮೋಸದ ಬಲೆಗೆ ಬಿಳುವ ಸಾಧ್ಯತೆ ಇರುವುದರಿಂದ ಅವರನ್ನು ರಕ್ಷಿಸಲು ಸಮಾಜದಲ್ಲಿ ಜಾಗೃತಿ ಅಗತ್ಯವಾಗಿದೆ ಎಂದು ತಿಳಿಸಿದರು.
ಈ ಮಾನವ ಕಳ್ಳ ಸಾಗಾಣಿಕೆ ಜೀತ ಕಾರ್ಮಿಕತೆ, ಕೃಷಿ ಕೆಲಸ, ಕಾರ್ಖಾನೆಗಳಲ್ಲಿ ಕೆಲಸಕ್ಕಾಗಿ ಮಹಿಳೆಯರು,ಮಕ್ಕಳನ್ನು ಬಲತ್ಕಾರವಾಗಿ ಬಳಸುವುದು, ಒಳ ಹಾಗೂ ಹೊರ ದೇಶಗಳಲ್ಲಿ ದತ್ತು ನೀಡಲು ಅಂಗಾಂಗಗಳಮಾರಾಟ ಮತ್ತು ಜೋಡಣೆ ಮತ್ತಿತರ ಅಂಶಗಳಿಗಾಗು ಈ ಅಮಾನವೀಯ ಪಿಡುಗು ನಡೆಯುತ್ತಿದೆ ಎಂದರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶರಾದ ಸುನಿಲ್ ಎಸ್.ಹೊಸಮನಿ ಮಾತನಾಡಿ, ಮಾನವ ಕಳ್ಳಸಾಗಾಣಿಕೆಯ ಮೂಲಕ ಮಕ್ಕಳು,ಮಹಿಳೆಯರನ್ನು ವೈಶ್ಯಾವಾಟಿಕೆ, ಭಿಕ್ಷಾಟನೆ, ಅಶ್ಲೀಲ ಚಿತ್ರಗಳ ಮಾರಾಟ ಸೇರಿದಂತೆ ಅನೇಕ ಕಡೆ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು,
ಸಾರ್ವಜನಿಕರು ಇಂತಹ ಪಿಡುಗು ಎಲ್ಲೇ ಕಂಡು ಬಂದರೂ ಕೂಡಲೇ ಹತ್ತಿರದ ಪೊಲೀಸ್ ಠಾಣೆ ಅಥವಾ ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ನೀಡಿ, ಅವರನ್ನು ರಕ್ಷಿಸುವ ಪ್ರಯತ್ನಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿ, ಇಂತಹ ಅಪರಾಧಕ್ಕೆ ಅತ್ಯಂತ ಕಠಿನ ಶಿಕ್ಷೆ ಇದೆ ಎಂದು ಎಚ್ಚರಿಸಿದರು.
ಕೆಲವೊಂದು ಸಂದರ್ಭದಲ್ಲಿ ಕುಟುಂಬದ ಸದಸ್ಯರೇ ಇಂತಹ ಕೃತ್ಯ ಎಸಗುವ ಸಾಧ್ಯತೆಯೂ ಇದೆ, ಚಿಕ್ಕಪ್ಪ, ಚಿಕ್ಕಮ್ಮ, ಮಲತಾಯಿ, ಮಲತಂದೆ ಮತ್ತಿತರರು ಆತ್ಮೀಯವಾಗಿ ವರ್ತಿಸಿ ವಂಚಿಸಿ ಮಾರಾಟ ಜಾಲಕ್ಕೆ ಮಕ್ಕಳು, ಮಹಿಳೆಯರನ್ನು ಸಿಲುಕಿಸುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಮನವಿ ಮಾಡಿದರು.