ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ

ಚಿತ್ರದುರ್ಗ. ಜು.: ಮಾನವ ಕಳ್ಳ ಸಾಗಾಣಿಕೆ ನಿಯಂತ್ರಣ ಕೇವಲ ಪೊಲೀಸರ ಕರ್ತವ್ಯ ಮಾತ್ರವಲ್ಲದೇ, ಪ್ರತಿಯೊಬ್ಬರ ಕರ್ತವ್ಯ.ವೂ ಹೌದು. ಹಾಗಾಗಿ ಮಾನವ ಕಳ್ಳ ಸಾಗಾಣಿಕೆ ಅಂತಹ ಹೀನ ಕೃತ್ಯ ತಡೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ  ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಂಯುಕ್ತಾಶ್ರಯದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಮಾನವ ಕಳ್ಳ ಸಾಗಾಣಿಕೆಯ ಬಗ್ಗೆ ಹದ್ದಿನ ಕಣ್ಣಿನ ರೀತಿಯಲ್ಲಿ ನಿಗಾವಹಿಸಬೇಕು. ಇಂತಹ ವಿಚಾರ ತಿಳಿದ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ತಿಳಿಸಬೇಕು ಎಂದರು.ಮಾನವ ಕಳ್ಳ ಸಾಗಾಣಿಕೆ ಬಗ್ಗೆ ಜನರಿಗೆ ಜ್ಞಾನ ಇರುವುದಿಲ್ಲ. ಹಾಗಾಗಿ ಆಶಾಕಾರ್ಯಕರ್ತೆಯರು ಪ್ರತಿ ಮನೆ ಮನೆಗೆ ಹೋಗಿ ಮಾನವ ಕಳ್ಳ ಸಾಗಾಣಿಕೆ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.  ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ರಂಗಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ. ರವಿಶಂಕರ ರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಚನ್ನಬಸಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಭಾರತಿ ಆರ್. ಬಣಕಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ.ರೇಣುಪ್ರಸಾದ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪಿ.ಲೋಕೇಶ್ವರಪ್ಪ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.