ಮಾನವ ಕಳ್ಳ ಸಾಗಾಣಿಕೆ ತಡೆಗೆ ಎಲ್ಲರೂ ಶ್ರಮಿಸೋಣ:ಎಸಿಪಿ ದೀಪನ್ ಎಮ್.ಎನ್

ಕಲಬುರಗಿ: ಜು.30: ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಲು ಎಲ್ಲಾ ಇಲಾಖೆಗಳು ಸೇರಿ ಒಗ್ಗಟಿನಿಂದ ಕೆಲಸ ಮಾಡಬೇಕು. ಅಂದಾಗ ಮಾತ್ರ ಅದನ್ನು ಹತೋಟಿ ತರಲು ಸಹಾಯವಾಗುತ್ತದೆ ಎಂದು ಕಲಬುರಗಿ ಸಹಾಯಕ ಪೆÇಲೀಸ್ ಆಯುಕ್ತ ದೀಪನ್ ಎಮ್.ಎನ್ ಹೇಳಿದರು.

ಶನಿವಾರದಂದು ಕಲಬುರಗಿಯ ಸರಕಾರಿ ಬಾಲಕಿಯರ ಬಾಲಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೆÇಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯನ್ನು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾನವ ಕಳ್ಳ ಸಾಗಾಣಿಕೆಗೆ ಅನೇಕ ಕಾರಣಗಳು ಕಂಡು ಬರುತ್ತವೆ. ಅದರಲ್ಲಿ ಪ್ರಮುಖವಾಗಿ ಹೆಣ್ಣು ಮಕ್ಕಳನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುವುದು, ಅಂಗಾಂಗಗಳ ಮಾರಾಟ, ಬಾಲ ಕಾರ್ಮಿಕತೆ, ಬಾಲ್ಯ ವಿವಾಹದಂತಹ ಪದ್ಧತಿಗಳು ಕಾರಣವಾಗುತ್ತವೆ. ಇದ್ದನ್ನೆಲ್ಲಾ ತನಿಖೆ ಮಾಡಿ, ಜಾಗೃತಿ ಮೂಡಿಸುವಂತಹ ಕೆಲಸವಾಗಬೇಕೆಂದರು.

ಮಾನವ ಕಳ್ಳ ಸಾಗಾಣಿಕೆಯಲ್ಲಿ ತಂತ್ರಜ್ಞಾನದ ಬಳಕೆ ಉಪಯೋಗ ಮತ್ತು ದುರುಪಯೋಗ ಕುರಿತು ಶಾಲಾ ಮಕ್ಕಳಲ್ಲಿ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವಂತಹ ಕೆಲಸವಾಗಬೇಕು. ಮಾನವ ಕಳ್ಳ ಸಾಗಾಣಿಕೆಯ ಕುರಿತು ಜನರು ಕೂಡ ಜವಾಬ್ದಾರಿಯುತವಾಗಿ ತಡೆಗಟ್ಟುವಂತಹ ಕೆಲಸದಲ್ಲಿ ತೊಡಗಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನವೀನ ಕುಮಾರ್ ಯು. ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಲು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಕಾಳಜಿಯುತವಾಗಿ ಕೆಲಸ ನಿರ್ವಹಿಸಬೇಕು. ಮಕ್ಕಳಿಗೆ ಸದ್ಗುಣ, ಸಂಪ್ರದಾಯಗಳನ್ನು ಹೇಳಬೇಕು ಎಂದರು. ನಾವೆಲ್ಲರೂ ಅನೈತಿಕ ಸಾಗಾಣಿಕೆ ಮುಕ್ತ ಮಾಡಲು ಸಂಕಲ್ಪ ಮಾಡೋಣ ಎಂದು ಅವರು ಕರೆ ಕೊಟ್ಟರು.

ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ್ ಸುಬುಂಡ ಮಾತನಾಡಿ, ಮಕ್ಕಳ ಅಪಹರಣ ಹಾಗೂ ಮಾರಾಟ ದೊಡ್ಡ ಮಾಫಿಯಾವಾಗಿ ಬೆಳೆಯುತ್ತಿದೆ. ಇದರ ಕುರಿತು ಪಾಲಕರು ಹಾಗೂ ಮಕ್ಕಳಿಗೆ ಶಾಲಾ-ಕಾಲೇಜುಗಳಲ್ಲಿ ಇದರ ಕುರಿತು ಮಾಹಿತಿ ನೀಡಬೇಕು. ಇಂತಹ ಅನೇಕ ಕಾರ್ಯಕ್ರಮಗಳ ಮುಖಾಂತರ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.

ಶಿಶು ಅಭಿವೃದ್ಧಿ ಕಾರ್ಯಕ್ರಮ ಅಧಿಕಾರಿ ಪ್ರವೀಣ್ ಹೇರೂರ್ ಮಾತನಾಡಿ ಮಾನವ ಕಳ್ಳ ಸಾಗಾಣಿಕೆಗೆ ಇತ್ತೀಚಿನ ದಿನಗಳಲ್ಲಿ ಮೊದಲು ಕಾಲೇಜ್ ವಿದ್ಯಾರ್ಥಿಗಳ ಗುರಿಯಾಗಿಸಿಕೊಂಡು, ಆಕರ್ಷಣೆಗೆ ಒಳಪಡಿಸಿ, ನಂಬಿಸಿ, ಮೋಸ ಮಾಡಿ ಜಾಲದಲ್ಲಿ ಸಿಕ್ಕಿಸಿ ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭೀಮರಾಯ ಕಣ್ಣೂರು ಮಾತನಾಡಿ ಮಾನವ ಕಳ್ಳ ಸಾಗಾಣಿಕೆಯು ಹೆಚ್ಚಾಗಿ ಹೈಟೆಕ್ ಸಿಟಿಗಳಲ್ಲಿ ನಡೆಯುತ್ತವೆ. ಅಪರಿಚಿತರ ಮೇಲೆ ನಿಗಾ ವಹಿಸಬೇಕು. ಪಾಲಕರು ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕೆಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಲ್ಲಣ್ಣ ದೇಸಾಯಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆಯೊಂದು ಸಾಮಾಜಿಕ ಪಿಡುಗು, ಇದನ್ನು ತಡೆಗಟ್ಟಲು ಕರ್ನಾಟಕದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದನ್ನು ತಡೆಗಟ್ಟಲು ಎಲ್ಲಾ ಇಲಾಖೆಗಳು ಕೆಲಸ ನಿರ್ವಹಿಸಬೇಕು ಎಂದು ಕೋರಿದರು.
ಎಂ.ಆರ್.ಎಂ.ಸಿ ಪ್ರಾಧ್ಯಾಪಕ ಡಾ.ಶ್ರೀಶೈಲ ಘೂಳಿ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಕುಮಾರ್, ಸಹಾಯಕ ಶಿಕ್ಷಣ ಅಧಿಕಾರಿ ಎಸ್.ಬಿ ಪಾಟೀಲ್, ಮಹಿಳಾ ಪೆÇಲೀಸ್ ಠಾಣೆ ಆರಕ್ಷಕ ನದಾಫ್, ಕಾನೂನು ಅಧಿಕಾರಿ ಭರತೇಶ ಬಿ. ಶೀಲವಂತರ್ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತಿರಿದ್ದರು.

ಜಾಗೃತಿ ಜಾಥಾ : ಇದಕ್ಕೂ ಮುನ್ನ, ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯ ಅಂಗವಾಗಿ ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ರಂಗಮಂದಿರದಿಂದ ಜಗತ್ ವೃತ್ತದವರೆಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.