ಮಾನವ ಕಳ್ಳ ಸಾಗಾಣಿಕೆ ಒಂದು ಸಾಮಾಜಿಕ ಪಿಡುಗು

ಕೋಲಾರ,ಆ.೧-ಮಾನವ ಕಳ್ಳ ಸಾಗಾಣಿಕೆ ಒಂದು ಅಪರಾಧವಾಗಿದ್ದು, ಇತ್ತೀಚಿಗೆ ಮಕ್ಕಳು ಮತ್ತು ಮಹಿಳೆಯರ ಕಳ್ಳ ಸಾಗಾಣಿಕೆ ಮಾಡಲಾಗುತ್ತಿದೆ. ಮಾನವ ಕಳ್ಳ ಸಾಗಾಣಿಕೆ ಒಂದು ಸಾಮಾಜಿಕ ಪಿಡುಗು ಆಗಿದ್ದು, ಅದರ ಬಗ್ಗೆ ಅರಿವನ್ನು ಮೂಡಿಸುವುದು ಈ ದಿವಸದ ಕಾರ್ಯಕ್ರಮದ ಉದ್ದೇಶವಾಗಿರುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನಿಲ ಎಸ್. ಹೊಸಮನಿ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೋಲಾರ, ವಕೀಲರ ಸಂಘ ಕೋಲಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕೋಲಾರ ಮತ್ತು ಐ.ಜೆ.ಎಂ. ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಮಾನವ ಕಳ್ಳ ಸಾಗಾಣಿಕ ತಡೆ ದಿನಾಚರಣೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಅವರು ಉದ್ಘಾಟಿಸಿ ಮಾತನಾಡಿದರು.
ಮಕ್ಕಳನ್ನು ಮತ್ತು ಮಹಿಳೆಯರನ್ನು ಜೀತ ಕಾರ್ಮಿಕ ಮತ್ತು ಬಾಲ ಕಾರ್ಮಿಕರಾಗಿ ದುಡಿಸಿಕೊಳ್ಳಲು ಮತ್ತು ಭಿಕ್ಷಾಟನೆ ಮಾಡಿಸುವ ಉದ್ದೇಶದಿಂದ ಮಾನವ ಕಳ್ಳ ಸಾಗಾಣಿಕೆ ಮಾಡಲಾಗುತ್ತಿದೆ. ಮಾನವ ಕಳ್ಳ ಸಾಗಾಣಿಕೆ ಬಗ್ಗೆ ತಿಳಿದು ಬಂದರೆ ಮಹಿಳಾ ಸಹಾಯವಾಣಿ ಹಾಗೂ ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡುವ ಮೂಲಕ ಅವರನ್ನು ರಕ್ಷಿಸಬೇಕು. ಪ್ರತಿ ವರ್ಷ ಜುಲೈ ೩೦ ರಂದು ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಆಚರಿಸಲಾಗುತ್ತಿದ್ದು, ಅದು ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ಎಲ್ಲಾ ಅಧಿಕಾರಿಗಳು ಕೈ ಜೋಡಿಸಿ ಅದರ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದರು.
. ಅಪರ ಜಿಲ್ಲಾಧಿಕಾರಿ ಡಾ. ಶಂಕರ್ ವಣಿಕ್ಯಾಳ್ ಮಾತನಾಡಿ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಿಂದಾಗಿ ಹೆಚ್ಚಿನ ಅಪರಾಧಗಳು ಆಗುತ್ತಿದ್ದು, ಆ ಬಗ್ಗೆ ವಿದ್ಯಾರ್ಥಿನಿಯರು ಅರಿವನ್ನು ಹೊಂದಬೇಕು. ಮಕ್ಕಳು ಮೊಬೈಲ್ ಜಾಲತಾಣಗಳಿಂದಾಗಿ ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಆ ನಿಟ್ಟಿನಲ್ಲಿ ಅದರ ದುಷರಿಣಾಮದ ಬಗ್ಗೆ ಅರಿವನ್ನು ಉಂಟು ಮಾಡಿಸಬೇಕು. ಇತ್ತೀಚಿಗೆ ಮಾನವ ಕಳ್ಳ ಸಾಗಾಣಿಕೆಯಿಂದಾಗಿ ಮಹಿಳೆಯರು ಮತ್ತು ಮಕ್ಕಳ ಜೀವನ ಹಾಳಾಗುತ್ತಿದೆ. ಮಹಿಳೆ ಮತ್ತು ಮಕ್ಕಳನ್ನು ಮಾಧಕ ವಸ್ತುಗಳ ಸಾಗಾಣಿಕೆ ಮತ್ತು ಕಳ್ಳ ಸಾಗಾಣಿಕೆಯಲ್ಲೂ ಸಹ ಉಪಯೋಗಿಸಿಕೊಳ್ಳುತ್ತಿದ್ದು, ಅದನ್ನು ತಡೆಗಟ್ಟುವುದು ಅವಶ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಿ.ವೈ.ಎಸ್.ಪಿ. ವೈ.ಜಿ.ಮುರಳಿಧರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮುದ್ದಣ್ಣ ಎಂ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ. ಮುನೇಗೌಡ, ಪ್ರಧಾನ ಕಾರ್ಯದರ್ಶಿ ಎನ್. ಬೈರಾರೆಡ್ಡಿ, ಪ್ಯಾನಲ್ ವಕೀಲ ಕೆ.ಆರ್. ಧನರಾಜ್, ಹೃದಯ ರಾಜ್ ಲೀಡ್-ಸರ್ಕಾರಿ ಸಂಬಂಧಗಳು, ಐ.ಜೆ.ಎಂ, ಬೆಂಗಳೂರು, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ. ಶ್ರೀನಿವಾಸ, ಸಹಾಯಕ ನಿರ್ದೇಶಕ ಚನ್ನಬಸಪ್ಪ, ಶಿಶು ಅಭಿವೃದ್ಧಿ ಅಧಿಕಾರಿ ವಿನೋದ್ ರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.