ಮಾನವ ಕಳ್ಳ ಸಾಗಣೆ ತಡೆ ನಮ್ಮೆಲರ ಹೊಣೆ: ಡಾ.ರಾಮ್ ಎಲ್.ಅರಸಿದ್ದಿ

ವಿಜಯಪುರ, ಆ.1-ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿಶು ಅಭಿವೃದ್ಧಿ ಯೋಜನೆ (ನಗರ ಮತ್ತು ಗ್ರಾಮೀಣ)ದಿಂದ ಜುಲೈ 30ರಂದು ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕಾರ್ಯಕ್ರಮವು ರುಡ್‍ಸೇಟ್‍ನಲ್ಲಿ ನಡೆಯಿತು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ಧಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಮಾನವ ಕಳ್ಳ ಸಾಗಾಣಿಕೆಯು ಸಮಾಜಕ್ಕೆ ಅಂಟಿದ ಒಂದು ತರಹದ ಕಳಂಕವಾಗಿದೆ. ಇದರಲ್ಲಿ ಕೇವಲ ಮನಷ್ಯರನ್ನು ಮಾತ್ರ ಸಾಗಣೆ ಮಾಡದೇ, ಮನುಷ್ಯನ ವಿವಿಧ ಭಾಗಗಳನ್ನು ಸಹ ಕಳ್ಳ ಸಾಗಣೆ ಮಾಡಲಾಗುತ್ತಿದೆ. ಇಂತಹ ಹೀನ ಕೃತ್ಯವನ್ನು ತೊಡೆದು ಹಾಕಲು ಸರ್ಕಾರದ ವತಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ಪೊಲೀಸ್ ಇಲಾಖೆಯು ಮಾತ್ರವಲ್ಲದೇ ವಿವಿಧ ಇಲಾಖೆಗಳ ಸಹಕಾರ ಹಾಗೂ ಸಾರ್ವಜನಿಕರ ಸಹಾಭಾಗಿತ್ವ ಅಗತ್ಯ ಎಂದು ತಿಳಿಸಿದರು.
ವಕೀಲರಾದ ಉಮೇಶ ರಾಠೋಡ ಅವರು ಮಾತನಾಡಿ, ಮಾನವ ಕಳ್ಳ ಸಾಗಣೆ ತಡೆಗಟ್ಟಲು ನ್ಯಾಯಾಲಯಕ್ಕೆ ಸಾಕ್ಷ ಅಗತ್ಯ ಇರುತ್ತದೆ. ಆದ್ದರಿಂದ ಸಾರ್ವಜನಿಕರು ಇಂತಹ ಪ್ರಕರಣಗಳಲ್ಲಿ ಸಾಕ್ಷಿ ಹೇಳಲು ಮುಂದೆ ಬರಬೇಕು. ಇದರಿಂದಾಗಿ ಮಾನವ ಕಳ್ಳ ಸಾಗಣೆಯನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಕೆ.ಕೆ.ಚವ್ಹಾಣ್ ಅವರು ಮಾತನಾಡಿ, ಮಾನವ ಕಳ್ಳ ಸಾಗಣೆ ತಡೆಗಟ್ಟಲು ಎಲ್ಲ ಇಲಾಖೆಗಳ ಸಹಭಾಗಿತ್ವದ ಜೊತೆಗೆ, ಬದ್ಧತೆ ಅವಶ್ಯಕತೆ ಇದೆ ಎಂದು ತಿಳಿಸಿದರು. ಮಾನವ ಕಳ್ಳ ಸಾಗಣೆ ತಡೆಗಟ್ಟುವ ಕುರಿತು ಅರಿವು ಮೂಡಿಸಲು ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರಿಗೆ ಹಾಗೂ ಮೇಲ್ವಿಚಾರಕಿಯರಿಗೆ ಸಲಹೆ ಮಾಡಿದರು.
ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು ಹಾಗೂ ನ್ಯಾಯವಾದಿಗಳಾದ ಸೂರ್ಯಕಾಂತ ಬಿರಾದಾರ ಅವರು ವಿಶೇಷ ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿಗಳಾದ ಗೀತಾ ಗುತ್ತರಗಿಮಠ ಅವರು ಮಾನವ ಕಳ್ಳ ಸಾಗಣೆ ತಡೆ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು. ಮಾನವ ಸರಪಳಿ ರಚಿಸಿ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ, ವಿಜಯಪುರ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು. ಮೌನೇಶ ಪೋತದಾರ ನಿರೂಪಿಸಿದರು. ಗುರುರಾಜ ಇಟಗಿ ಸ್ವಾಗತಿಸಿದರು. ಜಯಶ್ರೀ ಪವಾರ್ ವಂದಿಸಿದರು.