ಮಾನವ ಕಳ್ಳ ಸಾಗಣಿಕೆ-ಅರಿವು ಕಾರ್ಯಕ್ರಮ

ವಿಜಯಪುರ, ಜು.೩೧:ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ವಿಜಯಪುರ ಪ್ರೌಢಶಾಲಾ ಆವರಣದಲ್ಲಿ ಶನಿವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ದೇವನಹಳ್ಳಿ, ವಕೀಲರ ಸಂಘ ದೇವನಹಳ್ಳಿ, ಹಾಗೂ ತಾಲ್ಲೂಕು ಆಡಳಿತ ವರ್ಗ, ಪೊಲೀಸ್ ಇಲಾಖೆ, ಹಾಗೂ ಅರುಂಧತಿ ಸೇವಾ ಸಂಸ್ಥೆಯ ಸಹಯೋಗದಲ್ಲಿ ಮಾನವ ಕಳ್ಳಸಾಗಾಣಿಕೆಯ ಕುರಿತು ಅರಿವು ಮೂಡಿಸುವಂತಹ ಕಾರ್ಯಕ್ರಮ ನಡೆಯಿತು.
ಅರುಂಧತಿ ಸೇವಾ ಸಂಸ್ಥೆಯ ಅಧ್ಯಕ್ಷ ನರಸಿಂಹಮೂರ್ತಿ ಉದ್ಘಾಟನೆ ಮಾಡಿದರು. ದೇವನಹಳ್ಳಿ ತಾಲ್ಲೂಕು ಕಾನೂನು ಸೇವಾ ಸಮಿತಿಯ ವಕೀಲರು ಮಕ್ಕಳ ಕಳ್ಳ ಸಾಗಾಣಿಕೆಯ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಿದರು. ವಿದ್ಯಾರ್ಥಿನಿಯರು, ವರದಕ್ಷಿಣೆ ಕಿರುಕುಳ, ಹೆಣ್ಣು ಮಕ್ಕಳ ಶೋಷಣೆ, ಓದುವಾಗ ಕೆಲಸಕ್ಕೆ ಕಳುಹಿಸುವುದು ಸೇರಿದಂತೆ ಹಲವಾರು ಪ್ರಶ್ನೆಗಳು ಕೇಳಿದರು.ವಕೀಲ ನಾಗೇಶ್ ಮಾತನಾಡಿ, ಫೋಕ್ಸೋಕಾಯ್ದೆ, ಬಾಲಕಾರ್ಮಿಕ ರಕ್ಷಣಾ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾನೂನು ಮುಂತಾದ ಕಾಯಿದೆ ಕಾನೂನುಗಳು ಜಾರಿಯಲ್ಲಿದೆ ಎಂದರು.ವಕೀಲ ಚೇತನ್ ಕುಮಾರ್ ಮಾತನಾಡಿ, ಕೆಲವೆಡೆ ಮಾನಕ್ಕೆ ಅಂಜಿ, ಮತ್ತಿತರೆಡೆಗಳಲ್ಲಿ ದೌರ್ಜನ್ಯಗಳಿಂದ ಹಲವಾರು ಕೇಸುಗಳು ಮುಚ್ಚಿ ಹೋಗುತ್ತಿವೆ ಎಂದು ತಿಳಿಸಿದರು.
ಪುರಸಭಾ ಸದಸ್ಯ ವಿ.ನಂದಕುಮಾರ್ ಮಾತನಾಡಿ, ಸೌಕರ್ಯಗಳನ್ನು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿ, ತಲೆಕೆಡಿಸಿ, ಕರೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ ಎಂದರು.
ಅರುಂಧತಿ ಸೇವಾ ಸಂಸ್ಥೆಯ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಸಮಿತಿಗಳು ಸಕ್ರೀಯವಾಗಿ ಕೆಲಸ ಮಾಡಿದಾಗಲೂ ಕೂಡಾ ಈ ಕಳ್ಳ ಸಾಗಾಣಿಕೆಯನ್ನು ತಡೆಯಬಹುದಾಗಿದ್ದು, ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಉಪಪ್ರಾಂಶುಪಾಲ ಪಿ.ವೆಂಕಟೇಶ್, ಬಾಲಕಿಯರ ಪ್ರೌಢಶಾಲೆಯ ಮುಖ್ಯಶಿಕ್ಷಕ ರಾಜುಹವಳೇಕರ್, ಕಲಾವಿದ ದೇವನಹಳ್ಳಿ ದೇವರಾಜ್, ವೇಣುಗೋಪಾಲ್, ವೆಂಕಟೇಶ್, ಹರ್ಷನಾಥ್, ಡಿ.ಮುನಿಕೃಷ್ಣ, ನರಸಿಂಹಮೂರ್ತಿ, ಡಿ.ಎನ್.ಅನಿಲ್ ಕುಮಾರ್, ರಾಜೀವ್, ಮುನಿರಾಜು, ಹರ್ಷದ್, ಮಹಬೂಬ್ ಪಾಷ ಹಾಜರಿದ್ದರು.