ಮಾನವ ಕಳ್ಳಸಾಗಾಣಿಕೆ ಶಂಕೆ: ವಿಮಾನ ಮುಂಬೈಗೆ ವಾಪಸ್

ಮುಂಬೈ, ಡಿ.೨೬- ಮಾನವ ಕಳ್ಳಸಾಗಾಣಿಕೆ ಶಂಕೆಯಿಂದ ಫ್ರಾನ್ಸ್‌ನಲ್ಲಿ ತಡೆಹಿಡಿಯಲ್ಪಟ್ಟಿದ್ದ ವಿಮಾನ ಕೊನೆಗೂ ಇಂದು ಬೆಳಗ್ಗೆ ಮುಂಬೈಗೆ ಮರಳಿದೆ. ಇನ್ನು ಇಬ್ಬರು ಕಳ್ಳಸಾಗಣೆದಾರರು ಹೆಚ್ಚಿನ ತನಿಖೆಯ ಭಾಗವಾಗಿ ಅಲ್ಲೇ ಉಳಿದುಕೊಂಡಿದ್ದರೂ, ಬಳಿಕ ಕೋರ್ಟ್ ಅವರನ್ನು ಬಿಡುಗಡೆಗೊಳಿಸಿದೆ.
ಲೆಜೆಂಡ್ ಏರ್‌ಲೈನ್ಸ್ ವಿಮಾನವು ಸ್ಥಳೀಯ ಕಾಲಮಾನ ಮುಂಜಾನೆ ೪ ಗಂಟೆ ಸುಮಾರಿಗೆ ಮುಂಬೈಗೆ ಬಂದಿಳಿಯಿತು. ಆದರೆ ಇಬ್ಬರು ಅಪ್ರಾಪ್ತರು ಸೇರಿದಂತೆ ೨೫ ಮಂದಿ ಆಶ್ರಯಕ್ಕಾಗಿ ಮನವಿ ಮಾಡಿದ್ದು, ಫ್ರಾನ್ಸ್‌ನಲ್ಲೇ ಉಳಿದುಕೊಂಡಿದ್ದಾರೆ. ಅನಾಮಧೇಯ ವ್ಯಕ್ತಿಗಳು ನೀಡಿದ ಸುಳಿವಿನ ಆಧಾರದ ಮೇಲೆ ಗುರುವಾರ ಪ್ಯಾರಿಸ್‌ನಿಂದ ಸುಮಾರು ೧೩೦ ಕಿಮೀ (೮೧ ಮೈಲುಗಳು) ದೂರದಲ್ಲಿದ್ದ ಚಾಲನ್ಸ್-ವ್ಯಾಟ್ರಿ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನವನ್ನು ನಿಲ್ದಾಣದ ಅಧಿಕಾರಿಗಳು ತಡೆಹಿಡಿದ್ದರು. ನಿಕರಾಗುವಕ್ಕೆ ಹೋಗುತ್ತಿದ್ದ ಖಾಸಗಿ ವಿಶೇಷ ವಿಮಾನದಲ್ಲಿ ೨೭೬ ಮಂದಿ ಪ್ರಯಾಣಿಕರಿದ್ದು, ಈ ಪೈಕಿ ಬಹುತೇಕ ಮಂದಿ ಭಾರತೀಯರಾಗಿದ್ದರು. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಿಂದ ನಿಕರಾಗುವಾಗೆ ಹಾರುತ್ತಿದ್ದ ಚಾರ್ಟರ್ಡ್ ಏರ್‌ಬಸ್ ಎ೩೪೦ ವಿಮಾನವು ಇಂಧನ ತುಂಬುವ ನಿಲುಗಡೆಯ ಸಮಯದಲ್ಲಿ ಅನಾಮಧೇಯ ವ್ಯಕ್ತಿಗಳು ನೀಡಿದ ಸುಳಿವಿನ ಮೇಲೆ ತಡೆಹಿಡಿಯಲಾಗಿತ್ತು. ಅಮೆರಿಕಾ ಅಥವಾ ಕೆನಡಾವನ್ನು ಪ್ರವೇಶಿಸಲು ಪ್ರಯತ್ನಿಸುವ ಮೊದಲು ವಿಮಾನದಲ್ಲಿದ್ದ ಜನರು ನಿಕರಾಗುವಾಗೆ ಪ್ರಯಾಣಿಸುತ್ತಿದ್ದಿರಬಹುದು ಎಂದು ಫ್ರೆಂಚ್ ಅಧಿಕಾರಿಗಳು ಶಂಕಿಸಿದ್ದಾರೆ. ಇನ್ನು ವಟ್ರಿ ವಿಮಾನ ನಿಲ್ದಾಣವನ್ನು ತಾತ್ಕಾಲಿಕ ಕೋರ್ಟ್‌ರೂಂ ಆಗಿ ಪರಿವರ್ತಿಸಿ, ಪ್ಯಾರೀಸ್ ನ ಅಭಿಯೋಜಕರ ಕಚೇರಿ ನಡೆಸಿದ ತನಿಖೆಯ ಅಂಗವಾಗಿ ಬಂಧಿತ ಪ್ರಯಾಣಿಕರ ವಿಚಾರಣೆ ನಡೆಸಲಾಯಿತು. ವಿಮಾನದಲ್ಲಿದ್ದ ಹೆಚ್ಚಿನ ಮಂದಿ ಭಾರತೀಯರಾಗಿದ್ದು, ಅದರಲ್ಲೂ ಮೂರನೇ ಒಂದರಷ್ಟು ಮಂದಿ ಗುಜರಾತ್‌ನಿಂದ ಬಂದಿದ್ದರು ಎನ್ನಲಾಗಿದೆ.