ಮಾನವ ಕಲ್ಯಾಣ ಬಯಸಿದ ಕನಕದಾಸರು

ಚಿತ್ರದುರ್ಗ,ನ.22; ಹೋರಾಟದ ಬದುಕಿನ ಮೂಲಕ ಸಾಮಾಜಿಕ ಬದಲಾವಣೆ, ಸುಧಾರಣೆಗಾಗಿ ಹಾಗೂ ತಮ್ಮ ಸ್ವಾರ್ಥವನ್ನೂ ಬದಿಗೊತ್ತಿ ಮಾನವ ಕಲ್ಯಾಣ ಬಯಸಿದವರು ಸಂತಶ್ರೇಷ್ಟ ಕನಕದಾಸರು ಎಂದು ಸರ್ಕಾರಿ ಕಲಾ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಅಭಿಪ್ರಾಯಪಟ್ಟರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪ್ರಸ್ತುತ ದಿನಗಳಲ್ಲಿ ಮಹಾತ್ಮರ, ದಾರ್ಶನಿಕರು ಮಾತುಗಳು ತುಂಬಾ ಅಗತ್ಯವಾಗಿದೆ. ದಾರ್ಶನಿಕರ ಮಾತುಗಳನ್ನು ಅರಿತು ನಡೆದರೆ ಮಾನವ ಸಮಾಜ ಆರೋಗ್ಯವಂತ ಸಮಾಜವಾಗಲಿದೆ ಎಂದರು. ಪ್ರಸ್ತುತ ದಿನಗಳಲ್ಲಿ ನಮ್ಮ ಮುಂದೆ ಅನೇಕ ಸವಾಲು, ಸಂಘರ್ಷ ಹಾಗೂ ಸಮಸ್ಯೆಗಳಿವೆ. ಮನುಷ್ಯ ತನ್ನ ಬದುಕನ್ನು ತುಂಬಾ ಇಕ್ಕಟ್ಟಿನಲ್ಲಿ ಸಾಗಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಾನವ ಸಂಬಂಧಗಳು ಇಂದಿನ ದಿನಗಳಲ್ಲಿ ಶಿಥಿಲವಾಗುತ್ತಿವೆ. ಮಾನವೀಯ ಮೌಲ್ಯಗಳು ಕೇವಲ ಮಾತಿಗೆ ಸೀಮಿತವಾಗಿವೆ. ಇತಿಹಾಸ, ಪರಂಪರೆಯನ್ನು ಪಠ್ಯಕ್ಕೆ ಮಾತ್ರ ಸೀಮಿತಗೊಳಿಸಿ ಇವುಗಳನ್ನು ಬದುಕಿನಿಂದ ದೂರ ಇಟ್ಟಿರುವುದೇ ಇದಕ್ಕೆ ಪ್ರಮುಖ ಕಾರಣ. ದಾರ್ಶನಿಕರ, ಚಿಂತಕರ, ಸಮಾಜ ಸುಧಾರಕರ ಮಾತುಗಳು ನಮ್ಮ ಬದುಕು, ಮನಸ್ಸಿನಲ್ಲಿ ಬಂದರೆ ಇಂತಹ ಸಂಘರ್ಷ, ಸಂಕಟಗಳು ದೂರವಾಗುತ್ತವೆ ಎಂದು ಹೇಳಿದರು. ಸುಮಾರು 500 ವರ್ಷಗಳ ಹಿಂದಿನ ಕನಕದಾಸರನ್ನು ಭಕ್ತಶ್ರೇಷ್ಟ, ದಾಸಶ್ರೇಷ್ಟ ಎನ್ನವುದಕ್ಕಿಂತ ಸಂತಶ್ರೇಷ್ಟ ಎಂದು ಕರೆಯುವುದು ಸೂಕ್ತ. ಕನಕದಾಸರ ಆಲೋಚನೆಗಳು ದೇಶಾತೀತ, ಜಾತ್ಯತೀತವಾಗಿ ವಿಸ್ತಾರಗೊಳ್ಳುವವು. ವಿಶ್ವಮಾನ್ಯ ಅಲೋಚನೆಗಳು ಕನಕದಾಸರ ಸಾಂಸ್ಕೃತಿಕ ಕೊಡುಗೆಯಲ್ಲಿವೆ ಎಂದರು. ಸಮಾಜದಲ್ಲಿ ಮೌಢ್ಯ, ಅಸಮಾನತೆ, ತಾರತಮ್ಯ, ಭೇದಭಾವಗಳು ಅರ್ಥವಾಗಬೇಕಾದರೆ ಮೊದಲು ದಾರ್ಶನಿಕ ಹಾಗೂ ಸಂತರ ಚಿಂತನೆಗಳು ಅಗತ್ಯವಾಗಿ ಬೇಕಾಗಿದೆ. ಮಧ್ಯಕಾಲಿನ ಸಂದರ್ಭದಲ್ಲಿ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಿ, ಹೋರಾಟ ಮಾಡಿ ಕನಕದಾಸರು ಭಕ್ತರು, ದಾಸರು, ಸಾಧಕರು ಮಾತ್ರವಲ್ಲದೇ ದಾರ್ಶನಿಕರಾಗಿದ್ದಾರೆ ಎಂದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಸಂತ ಶ್ರೇಷ್ಟ ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಆತ್ಮಕಲ್ಯಾಣದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಆತ್ಮವನ್ನು ಸ್ವಚ್ಛಗೊಳಿಸುವ ಮೂಲಕ ಜೀವನವನ್ನು ರೂಪಿಸಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಗಾವಿ, ಡಿವೈಎಸ್‌ಪಿ ಪಾಂಡುರಂಗಪ್ಪ, ಸಮಾಜದ ಜಿಲ್ಲಾ ಅಧ್ಯಕ್ಷರಾದ ಶ್ರೀರಾಮ್, ಕಾರ್ಯದರ್ಶಿ ಕರಿಯಪ್ಪ, ಮುಖಂಡರಾದ ಬಿ.ಟಿ.ಜಗದೀಶ್, ತಿಪ್ಪೇಸ್ವಾಮಿ, ಮಂಜಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.