
ತುಮಕೂರು, ಏ. ೧- ಇಂದಿನ ಸಿನಿಮಾಗಳು ಆದರ್ಶಗಳಿಲ್ಲದ ಬಂಡವಾಳ ತೆಗೆಯುವ ಹುಸಿ ಆದರ್ಶಗಳಾಗಿವೆ ಎಂದು ಬೂವನಹಳ್ಳಿ ನಾಗರಾಜು ಹೇಳಿದರು.
ನಗರದ ಕನ್ನಡ ಭವನದಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ ನವರ ಅಮೃತಮತಿ ಚಲನಚಿತ್ರ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಸಿನಿಮಾ ಹಾಕಿದ ಬಂಡವಾಳವನ್ನು ಹಿಂತೆಗೆಯುವುದೇ ಆಗಿದೆ. ಆದರ್ಶಗಳನ್ನಲ್ಲ, ಹುಸಿ ಆದರ್ಶಗಳನ್ನು ಬಾಯಿ ತುಂಬಾ ಮಾತನಾಡುತ್ತಿರುತ್ತೇವೆ. ವಾಸ್ತವದಲ್ಲಿ ಬೇರೇನೋ ಆಗಿರುತ್ತೇವೆ, ಇಲ್ಲವೆ ಬಹುತೇಕ ಮುಖವಾಡವಾಗಿರುತ್ತೇವೆ ಎಂದರು.
ಬಂಡವಾಳಿಗರ ಬೆನ್ನು ಬಿದ್ದವರಲ್ಲ, ಅವರು ಮುಲಾಜುಗಳಿಗೆ ಒಳಗಾದವರಲ್ಲ, ಮುಲಾಜಿಗೆ ಆದ್ಯತೆ ಕೊಡದೆ ಬೆವರಿನ ಜನರ ಭಾಷೆ, ಪ್ರಯೋಗಗಳನ್ನು ಮಾಡುತ್ತಾ ಬಂದರು, ಸಂಸ್ಕೃತ ಭಾಷೆಯ ಕಾವ್ಯವನ್ನು ಚಲನಚಿತ್ರ ಮಾಡಿದ್ದಾರೆ ಎಂದರೆ, ಅದು ಬರಗೂರು ರಾಮಚಂದ್ರಪ್ಪ ರವರಂತಹವರಿಂದ ಮಾತ್ರ ಸಾಧ್ಯ.
ಬರಗೂರು ರಾಮಚಂದ್ರಪ್ಪ ನವರು ಅಮೃತಮತಿ ಚಲನ ಚಿತ್ರದಲ್ಲಿ ಅಷ್ಟ ವಕ್ರನನ್ನು ರಾಣಿಯೊಬ್ಬರು ಪ್ರೀತಿಸುವುದರ ಮೂಲಕ ಮನುಷ್ಯ, ಮನುಷ್ಯ ಸಂಬಂಧಗಳನ್ನು ಕಟ್ಟಿ ಕೊಟ್ಟಿದ್ದಾರೆ. ಈ ಚತ್ರವನ್ನು ನೋಡ್ತಾ, ನೋಡ್ತಾ ಆಶಯಗಳು ಮೂಡುತ್ತವೆ. ಯಾವುದೇ ಪಾತ್ರಗಳನ್ನು, ವ್ಯಕ್ತಿಗಳನ್ನು ಉನ್ನತ ಸ್ಥಾನದಲ್ಲಿ ಕೂರಿಸಿಲ್ಲ.
ಬರಗೂರರಿಗೆ ಅವರದೇ ಆದ ಆಶಯಗಳು ಮತ್ತು ಘನತೆ ಇದೆ. ಎಲ್ಲ ವ್ಯಕ್ತಿಗಳ, ಜನರ ಆಶಯಗಳ ಘನತೆಯನ್ನು ಎತ್ತಿ ಹಿಡಿಯುವ ನೈಜ ಪ್ರಜಾಪ್ರಭುತ್ವವನ್ನು ಬರಗೂರರು ತೋರಿಸಿದ್ದಾರೆ ಎಂದು ಹೇಳಿದರು.
ಅಮೃತಮತಿ ಎಂಬ ಕಾವ್ಯವನ್ನು ಇಟ್ಟುಕೊಂಡು, ಮರು ಸೃಷ್ಠಿ ಮಾಡಿದ್ದಾರೆ. ಬಂಡವಾಳ ಹಾಕಿದವರು ಮಾರುಕಟ್ಟೆಯನ್ನು ಅದ್ವಾನಗೊಳಿಸಿ, ಪ್ರಜಾಪ್ರಭುತ್ವ ಆಶಯಗಳನ್ನು ಗಾಳಿಗೆ ತೂರಿ, ಸಮುದಾಯ ನೋಡುವಂತಹ ಅಭಿರುಚಿ ಚಿತ್ರಗಳು ಬಾರದಂತೆ ಮಾಡಿದ್ದಾರೆ. ಯಾವುದೇ ಸಿನಿಮಾಗಳು ಮಾರುಕಟ್ಟೆಯ ಬಂಡವಾಳವನ್ನು ಲೆಕ್ಕ ಹಾಕುತ್ತಿವೆಯೇ ಹೊರತು ಮಾನವೀಯ ಮೌಲ್ಯಗಳನ್ನು ಕಡೆಗಣಿಸಲಾಗಿದೆ. ಡಾ.ರಾಜಕುಮಾರ್ ಅವರ ಎಲ್ಲ ಸಿನಿಮಾಗಳು ಮನೆ ಮಂದಿಯೆಲ್ಲಾ ಕೂತು ನೋಡಬಹುದಿತ್ತು. ಅಲ್ಲಿ ಒಂದು ಮೌಲ್ಯವಿರುತ್ತಿತ್ತು. ಆದರೆ ಇಂದಿನ ಸಿನಿಮಾಗಳನ್ನು ನೋಡಿ ಆಚೆ ಬಂದಾಗ ಆ ಸಿನಿಮಾದ ಮೌಲ್ಯವೇನೆಂಬುದೇ ನೆನಪಿಗೆ ಬಾರದು ಎಂದರು.
ಅರ್ಥವನ್ನೆ ಕೊಡದ ಸಿನಿಮಾಗಳು ಸಮಾಜಕ್ಕೆ ಯಾವ ಮೌಲ್ಯಗಳನ್ನು ಜನರಿಗೆ ತೋರಿಸಲು ಹೊರಟಿವೆ. ಮೌಲ್ಯಗಳ ಆಂತರಿಕ ಪ್ರಜಾಪ್ರಭುತ್ವವನ್ನು ಸಮುದಾಯಗಳು ಕಳೆದುಕೊಳ್ಳುತ್ತಿವೆ. ಮನುಷ್ಯತ್ವ ತುಂಬಿದ ಮನುಸ್ಸುಗಳನ್ನು ಬರಗೂರರು ತಮ್ಮ ಚಿತ್ರಗಳ ಮೂಲಕ ಕಟ್ಟಿಕೊಟ್ಟದ್ದಾರೆ. ಅಂದರೆ ಮನುಷ್ಯತ್ವ ಬಿತ್ತುವಂತಹ ಸಿನಿಮಾಗಳು ಬಾಯಿಂದ ಬಾಯಿಗೆ ಪ್ರಚಾರ ಪಡೆಯಬೇಕು ಆಗ ಗೆಲ್ಲುವ ಪ್ರಯತ್ನ ಮಾಡುತ್ತದೆ. ಎಷ್ಟು ಗೆಲ್ಲುತ್ತೆ ಅನ್ನುವುದು ಮುಖ್ಯವಲ್ಲ, ಎಷ್ಟು ಜನರನ್ನು ತಲುಪಿತು ಅನ್ನುವುದು ಮುಖ್ಯ ಎಂದರು.
ಚಿಂತಕಕೆ ದೊರೈರಾಜ್ ಮಾತನಾಡಿ, ಅಮೃತಮತಿ ಚಲನ ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಗಳಿಸಲು ಸಿನಿಮಾದಲ್ಲಿರುವ ಮೌಲ್ಯಗಳೇ ಕಾರಣವಾಗಿವೆ. ಇತ್ತೀಚಿನ ದಿನಗಳಲ್ಲಿ ಮನುಷ್ಯನ ಮೌಲ್ಯಗಳನ್ನು ಅಳೆಯುವಂತಹವುದು, ಸಂಬಂಧಗಳನ್ನು ನೋಡುವಂತಹವುದು. ಮುಂದಿನ ದಿನಗಳಲ್ಲಿ ಮನುಷ್ಯನನ್ನು ಹೇಗೆ ಹಿಡಿದಿಡಬಲ್ಲವು ಎಂಬುದನ್ನು ಚಿಂತಿಸಬೇಕು ಎಂದರು.
ಬರಗೂರು ರಾಮಚಂದ್ರಪ್ಪನವರು ನಾಡಿನ ಅನನ್ಯ ದೊಡ್ಡ ಪ್ರತಿಭೆ. ಈ ಜಿಲ್ಲೆಯವರೇ ಆದ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವುದು ಹೆಚ್ಚು ಸಂತೋಷದ, ವಿಷಯ. ಜ್ಞಾನವಾಗಲಿ, ಕಾವ್ಯ, ಕಲೆ ಇವೆಲ್ಲಾ ಬೌದ್ಧಿಕ ವಲಯದ ಒಂದೇ ವಲಯದ ಜನರ ನಡುವೆ ಸುಳಿಯುವಂತಹವುದಾಗಬಾರದು. ಜನರ ಹತ್ತಿರಕ್ಕೆ ಹೋಗಬೇಕು ಅನ್ನುವಂತಹವುದು ಬರಗೂರರ ಆಸೆ. ಅದು ಸಿನಿಮಾ ಮೂಲಕವಾಗಲಿ, ಕಾವ್ಯವಾಗಲಿ, ನಾಟಕವಾಗಲಿ ಸಾಮಾನ್ಯ ಜನರನ್ನು ತಲುಪಬೇಕು ಅನ್ನುವುದು ಅವರ ಆಶಯ ಎಂದರು.
ಬರಗೂರರ ಸಿನಿಮಾಗಳಲ್ಲಿ ಮನುಷ್ಯ ಸಂಬಂಧಗಳನ್ನು ಬೆಸೆಯುವುದು, ಜಾಗೃತಿ ಮೂಡಿಸುವುದಾಗಿದೆ. ಆದರೆ ಸಿನಿಮಾವನ್ನು ವಾಣಿಜ್ಯ ನೆಲೆಯಲ್ಲಿ ನೋಡಿ ಮನುಷ್ಯನನ್ನು ಬೌದ್ಧಿಕವಾಗಿ ಮತ್ತು ಸಾಂಸ್ಕೃತಿಕವಾದ ಮನಸ್ಸುಗಳನ್ನು ಕೊಲ್ಲಲಾಗಿದೆ. ಹೇಗೆಂದರೆ ಮಳೆಗಾಲದಲ್ಲಿ ಬೆಟ್ಟ ಗುಡ್ಡಗಳನ್ನು ಸಹಜ ಸ್ಥಿತಿಯಲ್ಲಿ ನೋಡಿದರೆ, ಗಿಡ, ಮರ, ಹಸಿರು, ತುಂಬಾ ರಮಣೀಯವಾಗಿರುತ್ತವೆ. ಅದೇ ರೀತಿ ಕಲೆ-ಸಾಹಿತ್ಯದ ಅಸಕ್ತಿ ಇರುವವರ ಮನಸ್ಸು ಹಚ್ಚ ಹಸಿರಾಗಿರುತ್ತವೆ. ಆದರೆ ಬೇಸಿಗೆಯಲ್ಲಿ ಹಸಿರೆಲ್ಲಾ ಒಣಗಿ ಸುಟ್ಟು ಹೋದಂತೆ ಮನುಷ್ಯನ ಮನಸ್ಸು ಕೂಡಾ ಈಗ ಸಾಹಿತ್ಯ, ಕಲೆ, ಮನುಷ್ಯ ಸಂಬಂಧಗಳು ಬೆಂಕಿಯಲ್ಲಿ ಸುಟ್ಟು ಹೋಗಿ, ಮನುಷ್ಯತ್ವ ಕಳೆದುಕೊಂಡು ಬರೀ ದುಡ್ಡು ದುಡ್ಡು ಎನ್ನುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, ಮನುಷ್ಯನನ್ನು ಬಂಧನಕೊಳ್ಳಪಡಿಸದೆ ಬಯಲಿಗೆ ಬಿಟ್ಟಾಗ ಮನಸ್ಸು, ದೇಹ ಎಲ್ಲವು ಉಲ್ಲಾಸವಾಗಿರುತ್ತವೆ ಎಂಬುದೇ ಅಮತಮತಿ ಸಿನಿಮಾದ ಆಶಯವಾಗಿದೆ ಎಂದರು.
ಚಲನಚಿತ್ರ ಕುರಿತು ಡಾ.ಮುರಳೀಧರ್ ಮಾತನಾಡಿದರು. ಸಾಹಿತಿ ಓ.ನಾಗರಾಜಯ್ಯ ಸ್ವಾಗತಿಸಿದರು. ತುಮಕೂರು ವಿ.ವಿ.ಕನ್ನಡ ಅಧ್ಯಾಪಕ ನಾಗಭೂಷಣ ಬಗ್ಗನಡು ಕಾರ್ಯಕ್ರಮ ನಿರೂಪಿಸಿದರು.