ಮಾನವೀಯ ಮೌಲ್ಯ ನೀಡಿದವರು ಕುವೆಂಪು

ಕೋಲಾರ,ಜ.೧- ರಾಷ್ಟ್ರಕವಿಯಾಗಿ ತಮ್ಮ ಸಾಹಿತ್ಯದ ಮೂಲಕ ಮಾನವೀಯ ಮೌಲ್ಯಗಳನ್ನು ಸಮಾಜಕ್ಕೆ ನೀಡಿ, ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯ ಗೌರವ ತಂದುಕೊಟ್ಟ ಕುವೆಂಪು ಅವರು ನಾಡಗೀತೆಯ ಮೂಲಕ ನಮಗೆ ಸಮಾನತೆಯ ಪಾಠ ಕಲಿಸಿದ್ದಾರೆ ಎಂದು ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಪ್ರಭಾರ ಮುಖ್ಯಶಿಕ್ಷಕ ಆರ್.ಭವಾನಿ ತಿಳಿಸಿದರು.
ಶಾಲೆಯ ಆವರಣದಲ್ಲಿ ಕುವೆಂಪು ರವರ ಜನ್ಮದಿನಾಚರಣೆ ಪ್ರಯುಕ್ತ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಮಾನವ ಸಮುದಾಯ ಜಾತಿ ಮತ ಧರ್ಮದ ಸಂಕೋಲೆಗಳಿಂದ ಹೊರಬಂದು ಮಾನವೀಯ ಮೌಲ್ಯಗಳ ಅಡಿಯಲ್ಲಿ ಭಾತೃತ್ವ ಭಾವನೆಯೊಂದಿಗೆ ಜೀವಸುವಂತಾಗಬೇಕು ಎಂದು ಸಾರಿ ಹೇಳಿದವರು ಕುವೆಂಪು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ವೆಂಕಟರೆಡ್ಡಿ, ಕುವೆಂಪು ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ೧೯೦೪ ರಲ್ಲಿ ಡಿಸೆಂಬರ್ ೨೯ ರಂದು ಜನಿಸಿದರು ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಹಾಗೂ ಉಪಕುಲಪತಿಗಳಾಗಿ ಸೇವೆ ಸಲ್ಲಿಸುವುದರೊಂದಿಗೆ ಕನ್ನಡ ಸಾಹಿತ್ಯ ಪರಂಪರೆಯನ್ನು ವಿಶ್ವ ಇತಿಹಾಸ ಪುಟಗಳಲ್ಲಿ ಅಜರಾಮರಗೊಳಿಸಿದ್ದಾರೆ ಎಂದರು.
ಯಾವುದೇ ಒಬ್ಬ ವ್ಯಕ್ತಿ ತನ್ನ ಜಾತಿಯ ಆಧಾರದ ಮೇಲೆ ಸಮಾಜದ ಮುಖ್ಯವಾಹಿನಿಗೆ ಬರಬಾರದು ಅವರ ನೈತಿಕ ಜೀವನದ ಮೌಲ್ಯವರ್ಧಿತ ವ್ಯಕ್ತಿತ್ವದ ಆಧಾರದ ಮೇಲೆ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಮಾನವತ ಸಂದೇಶವನ್ನು ಸಾರಿದರು ಎಂದು ತಿಳಿಸಿದರು.
ಕುವೆಂಪು ಅವರು ಹೊಸಗನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿ, ಶ್ರೀ ರಾಮಾಯಣಂ ದರ್ಶನಂ ಎಂಬ ಮಹಾಕಾವ್ಯವನ್ನು ರಚನೆ ಮಾಡಿ, ಕಾನೂನು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಎಂಬ ಕಾದಂಬರಿಗಳನ್ನು ರಚಿಸಿದರು. ಇವರ ಈ ಕಾದಂಬರಿಗಳು ವಿಶ್ವದ ಅಗ್ರಮಾನ್ಯ ಕಾದಂಬರಿಗಳ ಸಾಲಿನಲ್ಲಿ ನಿಲ್ಲುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸುಗುಣಾ, ರಮಾದೇವಿ, ಡಿ.ಚಂದ್ರಶೇಖರ್ ಮತ್ತಿತರರಿದ್ದರು.