ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸಲು  ಜಿಲ್ಲೆಯಾದ್ಯಂತ ಅಭಿಯಾನ

ದಾವಣಗೆರೆ. ಜ.೨೩; ನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸಮಾನ ಮನಸ್ಕರು ಸೌಹಾರ್ದ ಪ್ರಿಯರು, ಸ್ನೇಹ ಪರ ಜೀವಿಗಳು ಸೇರಿ ಸಭೆಯನ್ನು ನಡೆಸಿ ಜಿಲ್ಲೆಯಾದ್ಯಂತ ಪ್ರೀತಿ ಬಾಂಧವ್ಯವನ್ನು ಬೆಸೆಯುವ ಸೌಹಾರ್ದ ವಾತಾವರಣವನ್ನು ಸೃಷ್ಟಿ ಮಾಡುವ ಕಾರ್ಯಕ್ರಮಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.ಇತ್ತೀಚಿನ ದಿನಗಳಲ್ಲಿ ಪ್ರೀತಿ ಬಾಂಧವ್ಯಗಳು ನಶಿಸಿ ಹೋಗುತ್ತಿವೆ . ಜಾತಿ ಜಾತಿಗಳ ಮಧ್ಯೆ ವೈಷಮ್ಯವನ್ನು  ಹುಟ್ಟಿ ಹಾಕಲಾಗುತ್ತಿದೆ. ಯುವ ಜನತೆ ತಮ್ಮ ಭವಿಷ್ಯ ದ ಬಗ್ಗೆ ಚಿಂತನೆ ಮಾಡುವುದು ಬಿಟ್ಟು ದಿಕ್ಕು ತೋಚದಂತಾಗಿದೆ. ನಮಗೆ ಮಾರ್ಗದರ್ಶಕರಾಗಬೇಕಾಗಿದ್ದ ಪ್ರಜಾಪ್ರತಿನಿಧಿಗಳು ತಮ್ಮ ನಾಲಿಗೆಯನ್ನು ಹರಿಬಿಟ್ಟು ಅಶ್ಲೀಲ ಪದಗಳಿಂದ ಇಡೀ ಸಮಾಜದ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ. ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಜಾತಿ ಜಾತಿಗಳನ್ನು ಎತ್ತಿ ಕಟ್ಟಿ ದ್ವೇಷವನ್ನು ಹುಟ್ಟು ಹಾಕುತ್ತಿದ್ದಾರೆ ಇಂಥ ಪರಿಸ್ಥಿತಿಯಲ್ಲಿ ಜನಸಾಮಾನ್ಯರಲ್ಲಿ ಬ್ರಾತೃತ್ವ, ಏಕತೆ ಮತ್ತು ಅಖಂಡತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡಬೇಕಾಗಿದೆ ಹಾಗಾಗಿ ನಮ್ಮ ನಡೆ ಸಾಮರಸ್ಯದ ಕಡೆ ತಂಡವು ನಿರಂತರವಾಗಿ ಕಾರ್ಯನಿರ್ವಹಿಸ್ತಾ ಬಂದಿದೆ. ಅದರ ಮುಂದಿನ ಭಾಗವಾಗಿ ಈ ಬಾರಿ ಪ್ರತಿಯೊಂದೂ ಹಳ್ಳಿಗಳಲ್ಲಿ ಭ್ರಾತೃತ್ವವನ್ನು ಬೆಸೆಯುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.ಜ. 26‌ ರಂದು ಗಣರಾಜ್ಯೋತ್ಸವ ದಿನವನ್ನು ಸೌಹಾರ್ದ ದಿನವನ್ನಾಗಿ ಗಾಂಧಿನಗರದಲ್ಲಿ  ಆಚರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು . 26ನೇ ತಾರೀಕಿನಿಂದ ನಿರಂತರವಾಗಿ ಹತ್ತು ದಿನಗಳ ಕಾಲ ಬೇರೆಬೇರೆ ಗ್ರಾಮೀಣ ಪ್ರದೇಶಗಳಲ್ಲಿ  ಸಹ- ಭೋಜನಕೂಟ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು ಹೀಗೆ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಮಾಡಲು ನಿರ್ಧರಿಸಲಾಯಿತು.ಸಭೆಯಲ್ಲಿ ಬಲ್ಲೂರು ರವಿಕುಮಾರ್ , ಹೆಚ್ ಮಲ್ಲೇಶ, ಕತ್ತಲಗೆರೆ ಡಿ. ತಿಪ್ಪಣ್ಣ, ಹೆಚ್ ಸಿ ಗುಡ್ಡಪ್ಪ, ವಕೀಲರಾದ ಕೆಸಿ ಕೊಟ್ರೇಶ್, ಬೈರೇಶ್ , ರುದ್ರೇಶ್, ಸಿರಾಜುದ್ದೀನ್, ಸತೀಶ್ ಅರವಿಂದ, ಓಬಳೇಶ್, ಮಲ್ಲಪ್ಪ ಮರುಡಪ್ಪ, ವೆಂಕಟೇಶ್, ಮುಸ್ತಫ  ಮತ್ತಿತರರಿದ್ದರು.