ಮಾನವೀಯ ನೆಲೆಯ ಮೇಲೆ ರೋಗಿಗಳಿಗೆ ಚಿಕಿತ್ಸಾ ಸೌಲಭ್ಯ ಒದಗಿಸಿಃ ಶಶಿಕಲಾ ಜೊಲ್ಲೆ

ವಿಜಯಪುರ, ಏ.23-ಕೊರೋನಾ ಮಹಾಮಾರಿಯ ಎರಡನೆ ಅಲೆ ಸಂದಿಗ್ದ ಪರಿಸ್ಥಿತಿಯನ್ನು ನಾವು ಎದುರಿಸುತ್ತಿದ್ದು, ಜನತೆಯ ಸೇವೆಗಾಗಿ ತಮ್ಮ ಅಮೂಲ್ಯ ಸೇವೆ ಕಲ್ಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ವೈದ್ಯರಿಗೆ ಸಲಹೆ ನೀಡಿದ್ದಾರೆ.
ನಗರದ ನೂತನ ಪ್ರವಾಸಿ ಮಂದಿರದಲ್ಲಿಂದು ಸರ್ಕಾರಿ ಹಾಗೂ ಖಾಸಗಿ ವೈದ್ಯರೊಂದಿಗೆ ಸಭೆ ನಡೆಸಿ ಅವಶ್ಯಕತೆಗಳ ಬಗ್ಗೆ ಪರಿಶೀಲನೆ ನಡೆಸಿದ ಅವರು ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಅವಶ್ಯಕತೆಗೆ ತಕ್ಕಂತೆ ಸೇವೆ ಕಲ್ಪಿಸಬೇಕು. ಮಾನವೀಯತೆಯ ನೆಲೆಯ ಮೇಲೆ ಅವರನ್ನು ಚಿಕಿತ್ಸೆಗೆ ಒಳಪಡಿಸುವಂತೆ ಅವರು ಸಲಹೆ ನೀಡಿದರು.
ಕೊರೋನಾ ಎರಡನೆ ಅಲೆ ಸಂದಿಗ್ದ ಪರಿಸ್ಥಿತಿ ಇದಾಗಿದ್ದು, ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಅವರ ಸಮಸ್ಯೆಗಳನ್ನು ನಿವಾರಿಸಬೇಕು. ಆಕ್ಸಿಜನ್, ಬೆಡ್‍ಗಳ ಕೊರತೆಯಾಗದಂತೆ ನಿಗಾವಹಿಸಬೇಕು. ತುರ್ತು ಚಿಕಿತ್ಸೆಗೆ ತಕ್ಷಣ ಸ್ಪಂದಿಸುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ, ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ, ಶಾಸಕ ಅರುಣ ಶಹಾಪೂರ, ಆರ್.ಎಸ್ ಪಾಟೀಲ (ಕೂಚಬಾಳ), ಚಂದ್ರಶೇಖರ್ ಕವಟಗಿ, ಪ್ರಕಾಶ ಅಕ್ಕಲಕೋಟ, ಶ್ರೀ ಗುಣಾರೆ ಉಪಸ್ಥಿತರಿದ್ದರು.