ಮಾನವೀಯತೆ ಮೆರೆದ ಶಾಸಕ ಲಕ್ಷ್ಮಣ ಸವದಿ

ಅಥಣಿ :ಮೇ.23: ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಮತ್ತೊಮ್ಮೆ ತಮ್ಮ ಮಾನವೀಯತೆ ಮೆರೆಯುವ ಮೂಲಕ ಎಲ್ಲಾ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.
ಬುಧುವಾರ ಮಧ್ಯಾಹ್ನ ಎರಡು ಬೈಕ್ ಗಳ ನಡುವೆ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡ ಇಬ್ಬರು ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲು ನೆರವಾಗುವ ಮೂಲಕ ಅಥಣಿ ಶಾಸಕ ಲಕ್ಷ್ಮಣ ಸವದಿ ಮಾನವೀಯತೆ ಮೆರೆದಿದ್ದಾರೆ.
ಜತ್ – ಜಂಬೋಟಿ ರಾಜ್ಯ ಹೆದ್ದಾರಿಯ ಚಮಕೇರಿ ಕ್ರಾಸ್ ಹತ್ತಿರ ಬುಧವಾರ ಮುಂಜಾನೆ ಈ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರನಿಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಗುತ್ತಿತ್ತು, ಪ್ರಜ್ಞಾವಸ್ಥೆಯಲ್ಲಿದ್ದ ಗಾಯಾಳುಗಳನ್ನು ಇದೇ ಮಾರ್ಗವಾಗಿ ಗುಂಡೇವಾಡಿ ಗ್ರಾಮಕ್ಕೆ ಹೋಗಿ ಹಿಂದಿರುಗಿ ಅಥಣಿ ಪಟ್ಟಣಕ್ಕೆ ಆಗಮಿಸುತ್ತಿದ್ದ ಶಾಸಕ ಲಕ್ಷ್ಮಣ ಸವದಿ ಅವರು ಕೂಡಲೇ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ದೂರವಾಣಿ ಕರೆ ಮಾಡಿ 108 ಅಂಬುಲೆನ್ಸ್ ವಾಹನದಲ್ಲಿ ಗಾಯಾಳುಗಳನ್ನು ಸಾಗಿಸಲು ನೆರವಾಗಿದ್ದಾರೆ. ಇದಲ್ಲದೆ ಅಂಬುಲೆನ್ಸ್ ಜೊತೆಗೆ ಆಸ್ಪತ್ರೆಗೆ ಆಗಮಿಸಿದ ಶಾಸಕ ಲಕ್ಷ್ಮಣ ಸವದಿ ಅವರು ಆಸ್ಪತ್ರೆಯ ವೈದ್ಯರಿಗೆ ಮತ್ತು ಸಿಬ್ಬಂದಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಲಹೆ ನೀಡಿದ್ದಾರೆ. ಶಾಸಕರ ಈ ಮಾನವೀಯ ಕಾರ್ಯಕ್ಕೆ ಮತಕ್ಷೇತ್ರದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾಲೂಕ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ. ಬಸಗೌಡ ಕಾಗೆ ಮಾತನಾಡಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ಕೃಷ್ಣಾಬಾಯಿ ಕಲ್ಲಯ್ಯ ಜಂಗಮ ಹಾಗೂ ಬಸವರಾಜ ನಿಂಗಪ್ಪ ಬಿಳ್ಳೂರ ಎಂಬ ಗಾಯಾಳುಗಳಿಗೆ ಆಸ್ಪತ್ರೆಯ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು, ಸದ್ಯ ಆರೋಗ್ಯವಾಗಿದ್ದಾರೆ ಎಂದು ಹೇಳಿದರು.