ಮಾನವೀಯತೆ ಇಲ್ಲದ ಸಾಹಿತ್ಯಕ್ಕೆ ಮೌಲ್ಯವಿಲ್ಲ: ರಾಜ್ ಆಚಾರ್ಯ

ಬೀದರ:ಮಾ.16:ಬರೆದದ್ದೆಲ್ಲ ಸಾಹಿತ್ಯವಾಗುವುದಿಲ್ಲ. ಹಾಗಾಗಿ ಸಾಹಿತಿಗಳು ಏನನ್ನು ಬರೆಯಬೇಕು. ಏನು ಬರೆಯಬಾರದು ಎನ್ನುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಬೆಂಗಳೂರಿನ ಯುವ ಸಾಹಿತಿ ರಾಜ್ ಆಚಾರ್ಯ ಅವರು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಕಾಲಿನ ಸಾಹಿತ್ಯದ ತಲ್ಲಣಗಳು ಮತ್ತು ಮಾರ್ಗೋಪಾಯಗಳು ಕುರಿತು ಉಪನ್ಯಾಸ ನೀಡಿದರು.

ಬಸವಣ್ಣ ಗುಡಿಯೊಳಗಿನ ದೇವರನ್ನು ಅಂಗೈಯಲ್ಲಿ ಪ್ರತಿಷ್ಠಾಪಿಸಿದ ರೀತಿಯಲ್ಲಿ ರಾಜಮನೆತನಕ್ಕೆ ಸೀಮಿತವಾಗಿದ್ದ ಸಾಹಿತ್ಯ ಇಂದು ಜನಸಾಮಾನ್ಯರಲ್ಲಿ ಬಂದಿದೆ. ಅದಾಗ್ಯೂ ಸಾಕಷ್ಟು ತಲ್ಲಣಗಳಿಂದ ಕೂಡಿದೆ. ಇದ್ಯಾವುದಕ್ಕೂ ಜಗ್ಗದೇ ಸಾಹಿತಿಗಳಿಂದ ಸಮಾಜಮುಖಿ ಸಾಹಿತ್ಯ ಹೊರಬರಬೇಕು ಎಂದರು.

ಮಾನವೀಯತೆ ಮರೆಯಾಗುತ್ತಿರುವ ಸಂದರ್ಭದಲ್ಲಿ ಸಾಹಿತ್ಯವನ್ನು ನಂಬಿದವರು ಸಾಕಷ್ಟು ಜನರಿದ್ದಾರೆ. ಸಾಹಿತ್ಯವನ್ನು ದಡ ಸೇರಿಸುವ ಪ್ರಯತ್ನ ಹಿರಿಯರಿಂದ ಆಗಬೇಕು. ಯಾವುದೇ ಕಾರಣಕ್ಕೂ ಕಿರಿಯನ್ನು ದಾರಿ ತಪ್ಪಿಸುವ ಕೆಲಸಗಳಾಗದಿರಲಿ ಎಂದು ಹೇಳಿದರು.

ಸಾಹಿತಿಗಳು ಅಹಂಕಾರ, ಸ್ವ-ಪ್ರತಿಷ್ಠೆಯನ್ನು ಬಿಟ್ಟು ಮಾನವೀಯತೆಯ ನೆಲೆಯಲ್ಲಿ ಸಾಹಿತ್ಯ ರಚಿಸಬೇಕು. ಸಾಹಿತಿ ಬರೆಯುವಾಗ ನಾನು ಸಮಾಜಕ್ಕೆ ಏನು ಕೊಡಬಲ್ಲೆ ಎನ್ನುವ ಬಗ್ಗೆ ಆಲೋಚಿಸಬೇಕು. ಎಲ್ಲಾ ಕಾಲಕ್ಕೂ, ಎಲ್ಲಾ ಜನಕ್ಕೂ ಉಪಯೋಗವಾಗುವ ರೀತಿಯಲ್ಲಿ ಸಾಹಿತ್ಯ ಹೊರಬರಬೇಕಿದೆ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರಿನ ಹಾಸ್ಯ ಬರಹಗಾರರಾದ ಚೂಟಿ ಚಿದಾನಂದ ಅವರು ನ್ನಡ ಸಾಹಿತ್ಯದಲ್ಲಿ ಹಾಸ್ಯ ಹಾಗೂ ಹರಟೆಗಳು ಕುರಿತ ಉಪನ್ಯಾಸ ನೀಡಿ, ಹಾಸ್ಯಪ್ರಜ್ಞೆ ಹೊಂದಿರುವ ವ್ಯಕ್ತಿಯ ಜೀವಿತಾವಧಿ ವೃದ್ಧಿಯಾಗುತ್ತದೆ. ಹಾಗೆಯೇ ಸಂತೋಷಮಯ ಜೀವನ ಸಾಗಿಸುತ್ತಾನೆ. ದೇವರು ಎಲ್ಲಿದ್ದಾನೆ ಎನ್ನುವ ಪ್ರಶ್ನೆಗೆ ಉತ್ತರ ನೀಡುವಂತೆ ಹಾಸ್ಯ ಎಲ್ಲ ಮನೆ, ಧರ್ಮ, ದೇವರು ಹೀಗೆ ಎಲ್ಲಾ ಕಡೆಗಳಲ್ಲಿ ಆವರಿಸಿದೆ. ಅದನ್ನು ಗುರುತಿಸಬೇಕು. ಹಾಗೆಯೇ ಹಾಸ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಬೀದರ್‍ನ ಸಾಹಿತಿ ಡಾ.ಧನರಾಜ ತುಡಮೆ ಅವರು ಕನ್ನಡ ಸಾಹಿತ್ಯದ ಆಶಯ ಮತ್ತು ಮೌಲ್ಯಾಧಾರಿತ ಶಿಕ್ಷಣ ಕುರಿತು ಉಪನ್ಯಾಸ ನೀಡಿದರು.

ಕಮಲನಗರದ ನಿವೃತ್ತ ಪ್ರಾಚಾರ್ಯರಾದ ಪ್ರೊ.ಎಸ್.ಎಸ್ ಶಿವಣಕರ್ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷರಾದ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ, ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಡಾ.ಸಿ ಆನಂದರಾವ್, ಕಸಾಪ ಜಿಲ್ಲಾಧ್ಯಕ್ಷರಾದ ಸುರೇಶ ಚನ್ನಶೆಟ್ಟಿ, ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ, ಕೋಶಾಧ್ಯಕ್ಷ ಶಿವಶಂಕರ ಟೋಕರೆ, ಸಾಹಿತಿ ಜಯಶ್ರೀ ಸುಕಾಲೆ, ಲೋಕೇಶ ಉಡಬಾಳೆ, ರಾಜಶೇಖರ ಉಪ್ಪಿನ, ಆನಂದ ಪಾಟೀಲ, ಶಾಂತಲಿಂಗ ಮಠಪತಿ ಹಾಗೂ ಇತರರು ಉಪಸ್ಥಿತರಿದ್ದರು.