ಮಾನವೀಯತೆಗಾಗಿ ಮನಮಿಡಿದ ಮಹನೀಯ ಅಂಬೇಡ್ಕರ್

ರ್ದಾವಣಗೆರೆ. ಏ.೧೮; ಅಂಬೇಡ್ಕರ್‌ರವರು ಮಧ್ಯಪ್ರದೇಶದ ಅಂಬೇವಾಡಿ ಗ್ರಾಮದಲ್ಲಿ ಜನಿಸಿ, ಮಹಾರಾಷ್ಟ್ರದಲ್ಲಿ ಬೆಳೆದು, ಮುಂದೆ ಕಾನೂನು ತಜ್ಞರಾಗಿ ಬೆಳೆದು ಸ್ವತಂತ್ರ ಭಾರತಕ್ಕೆ ಸಂವಿಧಾನ ಕೊಟ್ಟವರು. “ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ” ಎಂದು ಯುವ ಜನತೆಗೆ ತಿಳಿಸಿ, ಬಯಲೊಳಗೆ ಬದುಕು ಕಟ್ಟಿಕೊಂಡವರ ಬಂಧುವಾಗಿ, ದಮನಿತರ ನೋವಿಗೆ ಮಿಡಿದ ಕಾರುಣ್ಯ ಸಿಂಧುವಾಗಿ, ಎಲ್ಲರ ಮನದಲಿ ಸ್ವಾಭಿಮಾನವ ತುಂಬಿದವರು ಎಂದು ಬಿ.ಆರ್ ಪಾಟೀಲ್ ಹೇಳಿದರು. ಕರುಣಾ ಜೀವ ಕಲ್ಯಾಣ ಟ್ರಸ್ಟಿನಲ್ಲಿ “ಅಂಬೇಡ್ಕರ್ ಜಯಂತಿ” ಪ್ರಯುಕ್ತ ಹಮ್ಮಿಕೊಳ್ಳಲಾದ ಕಾರ್ಯಮದಲ್ಲಿ ಮಾತನಾಡಿದ ಅವರು
ಶಿಕ್ಷಣ, ಸಂಘಟನೆ, ಸಂಘರ್ಷಕ್ಕೆ ಶಕ್ತಿ ಕೊಟ್ಟಂತವರು ಬಾಬಾ ಸಾಹೇಬ್ ಅಂಬೇಡ್ಕರ್‌ರವರು.  ನ್ಯಾಯಕ್ಕಾಗಿ ಜೀವನಪರ್ಯಂತ ದುಡಿದವರು ಎಂದು ಅಂಬೇಡ್ಕರ್‌ರವರ ಜೀವನ ಚರಿತ್ರೆಯ ಬಗ್ಗೆ ತಿಳಿಸಿದರು. ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷರವರು ವೀಡಿಯೋ ಕಾಲ್‌ನಲ್ಲಿ ಮಾತನಾಡುತ್ತ ಕಾರ್ಯಕ್ರಮದಲ್ಲಿ ನೆರೆದ ಪೌರಕಾರ್ಮಿಕರು ಅಕ್ಷರಸ್ಥರಲ್ಲ ಎಂದು ತಿಳಿದಾಗ ಇವರ ಮುಂದಿನ ಪೀಳಿಗೆಯಾದರೂ ಶಿಕ್ಷಣದ ಬೆಳಕನ್ನು ಕಾಣಲಿ. ಏಕೆಂದರೆ ಅಂಬೇಡ್ಕರ್‌ರವರ ಮುಖ್ಯ ಕನಸು ಎಲ್ಲರಿಗೂ ಸಮಾನ ಶಿಕ್ಷಣ ಕೊಡುವುದಾಗಿತ್ತು ಎಂದರು. ಅವರು ಬರೆದ “ಭಾರತ ಸಂವಿಧಾನ” ಪುಟಾಣಿ ಆವೃತ್ತಿ ಪುಸ್ತಕವನ್ನು ಪೌರಕಾರ್ಮಿಕರಿಗೆ ಕಾಣಿಕೆಯಾಗಿ ನೀಡಲಾಯಿತು.  ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಜಯಂತಿಯ ಪ್ರಯುಕ್ತ 5 ಜನ ಮಹಿಳೆ ಮತ್ತು 5 ಜನ ಪುರುಷ ಬಡ ಪೌರಕಾರ್ಮಿಕರಿಗೆ  ನಿಂಗರಾಜ್‌ರವರು ವಸ್ತ್ರ ವಿತರಿಸಿ ಅವರ ಸಂತೋಷಕ್ಕೆ ಸಾಕ್ಷಿಯಾದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಿವನಕೆರೆ ಬಸವಲಿಂಗಪ್ಪನವರು “ತಮ್ಮ ಶ್ರಮ ಮತ್ತು ನೈತಿಕತೆ ಮೇಲೆ ನಂಬಿಕೆಯಿಡಿ, ಮಹಿಳೆಯರಿಗೆ ಸಮಾನತೆ ಕೊಡಿ” ಎನ್ನುವ ಮಹಾನ್ ವ್ಯಕ್ತಿ ಅಂಬೇಡ್ಕರ್‌ರವರ ಮಾತುಗಳು ನಮ್ಮೆಲ್ಲರ ಜೀವನದಲ್ಲಿ ಆದರ್ಶವಾಗಬೇಕು ಎಂದರು.ಟ್ರಸ್ಟಿನ ಎಲ್ಲಾ ಕರುಣಾ ಕಲ್ಯಾಣಾಧಿಕಾರಿಗಳು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.