ಭಾಲ್ಕಿ:ಜೂ.6: ಪರಿಸರದಲ್ಲಿ ಜೀವಿಸುವ ಎಲ್ಲಾ ವಸ್ತುಗಳಲ್ಲಿಯೂ ಮಾನವ ಜೀವಿಯೇ ಪರಿಸರದ ನಿಜವಾದ ಶತೃವಾಗಿದ್ದಾನೆ ಎಂದು ಕರುನಾಡ ವಿಜ್ಞಾನ ಅಕಾಡೆಮಿಯ ಜಿಲ್ಲಾ ಸಂಚಾಲಕ ಮಂಜುನಾಥ ಬೆಳಕೀರೆ ಹೇಳಿದರು.
ತಾಲೂಕಿನ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ಸೋಮವಾರ ಕರುನಾಡ ವಿಜ್ಞಾನ ಅಕಾಡೆಮಿ ಮತ್ತು ಎಮ್.ಜಿ.ಎಚ್.ಎಸ್ ಕಲವಾಡಿಯ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪರಿಸರದ ಮೇಲಿನ ಸಕಲ ಜೀವಿಗಳಲ್ಲಿ ಮಾನವ ಜೀವಿಯೇ ಪರಿಸರ ನಾಶಮಾಡುತ್ತಾನೆ. ಹೀಗಾಗಿ ನಮ್ಮ ಪರಿಸರದ ನಿಜವಾದ ಶತೃ ನಾವೇ ಇದ್ದೇವೆ. ನಮ್ಮ ಅನುಕೂಲಕ್ಕಾಗಿ ಪರಿಸರ ಹಾಳು ಗೆಡುವುತ್ತೇವೆ ಇದು ಮುಂದೆ ನಮಗೇ ಮಾರಕವಾಗುವುದು. 1973 ರಿಂದ ಇಲ್ಲಿಯ ವರೆಗೆ ವಿಶ್ವ ಸಂಸ್ಥೆಯ ವತಿಯಿಂದ ಜೂ.5 ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸುತ್ತಾ ಬರುತ್ತಿದ್ದೇವೆ. ಇದರಲ್ಲಿ ನಾವು ಎಷ್ಟರಮಟ್ಟಿಗೆ ಪರಿಸರ ಕಾಪಾಡಿಕೊಂಡು ಬರುತ್ತಲಿದ್ದೇವೆ ಎನ್ನುವುದು ನಾವೇ ಅವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಜಕುಮಾರ ಜೋಳದಾಪಕೆ, ಪ್ರತಿಯೊಬ್ಬ ಮಗುವು ತಮ್ಮ ಹುಟ್ಟುಹಬ್ಬ ಸೇರಿದಂತೆ ಇತರೆ ಕಾರ್ಯಕ್ರಮಗಳಲ್ಲಿ ತಮ್ಮ ಮನೆಯ ಮುಂದೆ ಒಂದು ಮರ ನೆಟ್ಟು ಪರಿಸರ ಕಾಪಾಡುವ ಬಗ್ಗೆ ಪ್ರತಿಜ್ಞೆ ಮಾಡಬೇಕು ಎಂದು ಮಕ್ಕಳಲ್ಲಿ ಪ್ರೋತ್ಸಾಹ ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ, ಪ್ರತಿವರ್ಷ ಒಂದೊಂದು ಧೇಯವನ್ನಿಟ್ಟುಕೊಂಡು ಪರಿಸರ ದಿನಾಚರಣೆ ಆಚರಿಸುತ್ತೇವೆ. ಈ ವರ್ಷದ ಪರಿಸರ ದಿನದ ಧೇಯ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣವಾಗಿದೆ. ನಾವು ಇಂದು ಪ್ರತಿಯೊಂದರಲ್ಲಿಯೂ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದೇವೆ. ಪರಿಸರಕ್ಕೆ ಪ್ಲಾಸ್ಟಿಕ್ ಪದಾರ್ಥ ಅತಿ ಅಪಾಯಕಾರಿಯಾಗಿದೆ. ಇದು ಒಂದು ವಿಘಟಕನಕಾರಿ ವಸ್ತು. ಭೂಮಿಯಲ್ಲಿ ಪ್ಲಾಸ್ಟಿಕ್ ಕರಗುವುದಿಲ್ಲ. ಹೀಗಾಗಿ ಇಂತಹ ವಸ್ತುವಿನ ಬಳಕೆಯಿಂದ ಅಪಾಯ ಹೆಚ್ಚಾಗಿದೆ. ನಾವೆಲ್ಲರೂ ಈ ವರ್ಷ ಪ್ಲಾಸ್ಟಿಕ್ ಬಳಸುವುದಿಲ್ಲ ಎನ್ನುವ ಪ್ರತಿಜ್ಞೆ ಮಾಡಬೇಕು ಎಂದು ಹೇಳಿದರು.
ವಿಜ್ಞಾನ ಶಿಕ್ಷಕ ಧನರಾಜ ಪಾಟೀಲ ವಿಶೇಷ ಉಪನ್ಯಾಶ ಮಂಡಿಸಿದರು. ಶಿಕ್ಷಕಿ ಶೋಭಾ ಮಾಸಿಮಾಡೆ ಪರಿಸರ ದಿನದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಿರಣಕುಮಾರ ಭಾಟಸಿಂಗೆ, ಶಿವಕುಮಾರ ವಾಡಿಕರ, ಓಂ.ಝೆಡ್.ಬಿರಾದಾರ, ಶಿವಶರಣಪ್ಪ ಸೊನಾಳೆ, ನಾಗರಾಜ ಕೋಟೆ ಉಪಸ್ಥಿತರಿದ್ದರು. ಇದೇವೇಳೆ ವಿದ್ಯಾರ್ಥಿಗಳಿಗೆ ಪರಿಸರ ಮತ್ತು ವಿಜ್ಞಾನದ ವಿವಿಧ ಪ್ರಶ್ನೆಗಳನ್ನು ಕೇಳುವ ಮೂಲಕ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಬಹುಮಾನ ನೀಡಿ ಗೌರವಿಸಲಾಯಿತು.
ಆನಂದ ಖಂಡಗೊಂಡ ಸ್ವಾಗತಿಸಿದರು. ಶಿವಕುಮಾರ ನಿರೂಪಿಸಿದರು. ಪ್ರದೀಪ ಜೊಳದಪಕೆ ವಂದಿಸಿದರು.