ಮಾನವನ ಸಾಧನೆಗೆ ಗುರುವಿನ ಕೃಪೆ ಮುಖ್ಯವಾದುದು-ಅಭಿನವ ಶ್ರೀಗಳು

ರಾಯಚೂರು.ಆ.೦೪- ನಗರದ ಸೋಮವಾರಪೇಟೆ ಹಿರೇಮಠದಲ್ಲಿ ಶ್ರಾವಣ ಮಾಸದ ಪುರಾಣದ ಸಂದರ್ಭದಲ್ಲಿ ಷ.ಬ್ರ.ಶ್ರೀ ವೀರತಪಸ್ವಿ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ಬಿಚ್ಚಾಲಿ, ಮಟಮಾರಿ.
ಇವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಶ್ರೀಮಠದ ಪೀಠಾಧಿಪತಿಗಳಾದ ಷ.ಬ್ರ.ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿಗಳು ಸೋಮವಾರಪೇಟೆ ಹಿರೇಮಠ, ರಾಯಚೂರು ಇವರ ನೇತೃತ್ವದಲ್ಲಿ ಜಗದ್ಗುರು ರೇಣುಕಾಚಾರ್ಯರ, ಶ್ರೀಮಾತೆ ತಾಯಮ್ಮ ದೇವಿ ಹಾಗೂ ಶ್ರೀಮಠದ ಲಿಂ. ಷ.ಬ್ರ. ರಾಚೋಟಿ ವೀರ ಶಿವಾಚಾರ್ಯರ ಶಿಲಾಮೂರ್ತಿಗಳ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಅಲಂಕಾರಗೊಳಿಸಿದ ಗಣೇಶ, ಶಿವ ಪಾರ್ವತಿ ಮೂರ್ತಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಶ್ರೀಗಳು ಪ್ರತಿಷ್ಠಾಪನಾ ಕಾರ್ಯಕ್ಕೆ ಚಾಲನೆ ನೀಡಿದರು.
ನಂತರ ಶ್ರೀಮಠದ ಶಿವಯ್ಯ ಶಾಸ್ತ್ರಿಗಳವರ ಪುರೋಹಿತ ತಂಡದಿಂದ ಪಂಚಪೀಠಗಳ ಕಳಶ ಪೂಜೆ, ನವಧಾನ್ಯಗಳಿಂದ ಅಲಂಕರಿಸಿದ ನವಗ್ರಹ ಪೂಜೆ, ಶಿಲಾಮೂರ್ತಿಗಳಿಗೆ ಜಲಾಧಿವಾಸ, ದಾನ್ಯಾಧಿವಾಸ, ಶೈನಾಧಿವಾಸ, ವಸ್ತ್ರಾಧಿವಾಸ ಪೂಜೆಗಳನ್ನು ನೆರವೇರಿಸಲಾಯಿತು.
ನಂತರ ಶಿಲಾಮೂರ್ತಿಗಳಿಗೆ ಶ್ರೀಮಠದ ಸರ್ವ ಭಕ್ತಾಧಿಗಳಿಂದ ಜಲಾಭಿಷೇಕ, ಕ್ಷೀರಾಭಿಷೇಕ, ಗಂಧಾಭಿಷೇಕ, ಕುಂಕುಮಾಭಿಷೇಕ, ಭಸ್ಮಾಭಿಷೇಕ, ಪುಷ್ಪಾಭಿಷೇಕ ಸಲ್ಲಿಸಿ ಸಹಸ್ರ ಶಿವನಾಮಾವಳಿಗಳನ್ನು ಪಠಿಸಿ ಮಹಾಮಂಗಳಾರುತಿಯನ್ನು ಸಮರ್ಪಿಸಲಾಯಿತು.
ನಂತರ ಬಿಚ್ಚಾಲಿಶ್ರೀಗಳು ಮತ್ತು ಶ್ರೀಮಠದ ಶ್ರೀಗಳ ಅಮೃತವಾಣಿ ಮತ್ತು ಅಮೃತ ಹಸ್ತದಿಂದ ಶಿಲಾಮೂರ್ತಿಗಳಿಗೆ ಜೀವಕಳೆ ಮಂತ್ರದ ಪಠಣವನ್ನು ನೆರವೇರಿಸಿದರು.
ನಂತರ ಮಾತನಾಡಿದ ವೀರತಪಸ್ವಿ ವೀರಭದ್ರ ಶಿವಾಚಾರ್ಯರು ಶ್ರೀಮಠದಲ್ಲಿ ಪ್ರತಿಷ್ಠಾಪನೆಗೊಂಡ ಈ ಮೂರು ಶಿಲಾಮೂರ್ತಿಗಳು ನಾಡಿನ ಭಕ್ತರ ಉದ್ಧಾರಕ್ಕಾಗಿ ಶ್ರೀಮಠಕ್ಕೆ ಬಂದಿದ್ದಾರೆ, ಸರ್ವರೂ ಭಕ್ತಿಯಿಂದ ಪೂಜಿಸಿ ಗುರುವಿನ ಕೃಪೆ ಪಡೆದು ಕೃತಾರ್ಥರಾಗಿರಿ ಎಂದು ತಮ್ಮ ಧರ್ಮ ಸಂದೇಶದಲ್ಲಿ ನುಡಿದರು.
ನಂತರ ಶ್ರೀಮಠದ ಶ್ರೀಗಳು ಮಾತನಾಡಿ ಮಾನವ ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ಅದಕ್ಕೆ ಗುರುವಿನ ಕೃಪೆ ಇದ್ದರೆ ಮಾತ್ರ ಸಾಧ್ಯವಾಗುವುದು, ಇಂದು ವೀರತಪಸ್ವಿಗಳಾದ ವೀರಭದ್ರ ಶಿವಾಚಾರ್ಯ ಅಮೃತ ಹಸ್ತದಿಂದ ಪ್ರತಿಷ್ಠಾಪಿಸಲ್ಪಟ್ಟ ಈ ಶಿಲಾಮೂರ್ತಿಗಳು ಬೇಡಿದವರಿಗೆ ಬೇಡಿದ ವರವನ ಕೊಡುವಂತ ಶಕ್ತಿಯನ್ನು ಶ್ರೀಗಳು ದಯಪಾಲಿಸಿದ್ದಾರೆ ಅದರಂತೆ ಸದ್ಭಕ್ತರು ಶಿಲಾಮೂರ್ತಿಗಳನ್ನು ಭಕ್ತಿಯಿಂದ ಪೂಜಿಸಿ ತಮ್ಮ ಕಸ್ಟ ಕಾರ್ಪಣ್ಯಗಳನ್ನು ಪರಿಹಾರ ಮಾಡಿಕೊಂಡು ಸುಖ, ಶಾಂತಿ, ನೆಮ್ಮಧಿಯಿಂದ ನಿಮ್ಮ ಜೀವನ ಸಾಗಿಸಿ ಎಂದು ತಮ್ಮ ಧರ್ಮ ಸಂದೇಶದಲ್ಲಿ ನುಡಿದರು.
ಈ ಸಂದರ್ಭದಲ್ಲಿ ಗದ್ವಾಲ ವೀರಭದ್ರಪ್ಪ,ವೆಂಕಟಾಪೂರ ಷಣ್ಮುಕಪ್ಪ,ಗದ್ವಾಲ ನರಸಣ್ಣ,ಅಂತರಗಂಗಿ ವೀರಭದ್ರಪ್ಪ,
ಗಿರಿಜಾ ಶಂಕರ್,ಎ.ಎಸ್. ಪಾಟೀಲ ರಾಚಯ್ಯ ಸ್ವಾಮಿ,ಅಯ್ಯಪ್ಪ ನಾಗೋಲಿ,ನಾಗರಾಜ ಸರಾಫ್, ಪಂಪಣ್ಣ ಹಾಗೂಶ್ರೀಮಠದ ಸರ್ವ ಸದ್ಭಕ್ತರು ಮಹಿಳೆಯರು ಮಕ್ಕಳು ಉಪಸ್ಥಿತರಿದ್ದರು.